ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಾದರಿ ನೀತಿ ಸಂಹಿತೆ ಜಾರಿ: 19ತಂಡ ರಚನೆ'

Last Updated 3 ಏಪ್ರಿಲ್ 2013, 6:34 IST
ಅಕ್ಷರ ಗಾತ್ರ

ಹಾವೇರಿ: `ವಿಧಾನಸಭೆ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಿನಿಂದ ಜಾರಿಗೆ ತರುವ ಉದ್ದೇಶದಿಂದ ಜಿಲ್ಲೆಯ ಪ್ರತಿ ಹೋಬಳಿಗೆ ಒಂದರಂತೆ ಒಟ್ಟು 19 ಮಾದರಿ ನೀತಿ ಸಂಹಿತೆ ಜಾರಿ ತಂಡವನ್ನು ರಚನೆ ಮಾಡಲಾಗಿದೆ' ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಪ್ರತಿ ಹೋಬಳಿ ಕೇಂದ್ರದಲ್ಲಿ ಇರಲಿರುವ ಈ ತಂಡಗಳು, ಅಕ್ರಮ ಮದ್ಯ ಸಂಗ್ರಹ, ಸಾಗಾಟ, ಹೆಚ್ಚಿನ ಹಣ ಸಾಗಾಟ ಸೇರಿದಂತೆ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಕಾರ್ಯ ನಡೆಯದಂತೆ ನಿಗಾವಹಿಸಲಿವೆ' ಎಂದರು.

`ತಮ್ಮ ಹೋಬಳಿ ವ್ಯಾಪ್ತಿಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಕೆಲಸಗಳು ನಡೆಯುತ್ತಿದ್ದರೂ ಸಾರ್ವಜನಿಕರು ಈ ತಂಡಗಳಿಗೆ ಇಲ್ಲವೇ ಜಿಲ್ಲಾ ಕಂಟ್ರೋಲ್ ರೂಂ ಗೆ ದೂರು ಇಲ್ಲವೇ ಮಾಹಿತಿ ನೀಡಬಹುದಾಗಿದೆ. ಮಾಹಿತಿ ನೀಡಿದ ಹತ್ತು ನಿಮಿಷದೊಳಗಾಗಿ ಈ ತಂಡವು ಸ್ಥಳದಲ್ಲಿ ಹಾಜರಿದ್ದು, ಅಲ್ಲಿ ನಡೆಯುವ ಅಕ್ರಮವನ್ನು ತಡೆಯಲಿದೆ. ಮಾಹಿತಿದಾರರ ಹೆಸರು ಗೌಪ್ಯವಾಗಿಡಲಾಗುವುದು' ಎಂದು ತಿಳಿಸಿದರು.

`ಅದೇ ರೀತಿ ಅಕ್ರಮ ಮದ್ಯ ಸಾಗಾಟದ ಮೇಲೆ ಹದ್ದಿನ ಕಣ್ಣು ಇಡಲು ಜಿಲ್ಲೆಯ ತಡಸ, ಕುಮಾರಪಟ್ಟಣಂ ಹಾಗೂ ಸಮ್ಮಸಗಿ ಬಳಿ ಅಬಕಾರಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಮೂರ‌್ನಾಲ್ಕು ದಿನಗಳಲ್ಲಿ ಜಿಲ್ಲೆಯಲ್ಲಿ ಎಂಟು ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು. ಅಗತ್ಯಬಿದ್ದರೆ, ಈ ಚೆಕ್‌ಪೋಸ್ಟ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು' ಎಂದು ಹೇಳಿದರು.

`ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಚುನಾವಣಾ ಆಯೋಗ ಸೂಚಿಸಿದ ಎಲ್ಲ ಕ್ರಮಗಳನ್ನು ಜಿಲ್ಲೆಯಾದ್ಯಂತೆ ತೆಗೆದುಕೊಳ್ಳಲಾಗಿದೆ. ಆದರೆ, ಎಲ್ಲ ಕಾರ್ಯಗಳಿಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಜಿಲ್ಲಾಡಳಿತದ ಜತೆ ಜನರು ಕೈಜೋಡಿಸಿದರೆ, ಯಾವುದೇ ಅಕ್ರಮಗಳಿಲ್ಲದೇ ವ್ಯವಸ್ಥಿತ ಚುನಾವಣೆ ನಡೆಸಲು ಸಾಧ್ಯವಾಗಲಿದೆ' ಎಂದು ಅನ್ಬುಕುಮಾರ ಹೇಳಿದರು.

ಗುರುತಿನ ಚೀಟಿ ಮನೆಬಾಗಿಲಿಗೆ: `ಮೇ 5ರಂದು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಈ ಬಾರಿ ಚುನಾವಣೆಯಲ್ಲಿ ಮತದಾರ ಚೀಟಿಯ ಜತೆಗೆ, ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿರುವ ಮತದಾರರ ಗುರುತಿನ ಚೀಟಿಯನ್ನು ಸಹ ಮತದಾರರ ಮನೆ ಬಾಗಿಲಿಗೆ ಜಿಲ್ಲಾಡಳಿತವೇ ತಲುಪಿಸಲಿದೆ' ಎಂದು ತಳಿಸಿದರು.

`ಹೊಸ ಮತದಾರರ ಸೇರ್ಪಡೆ, ತೆಗೆಯುವುದು, ವರ್ಗಾವಣೆ ಕಾರ್ಯಗಳು ಇದೇ 10ವರೆಗೂ ನಡೆಯಲಿವೆ. ಸಾರ್ವಜನಿಕರು ಈ ಅವಕಾಶ ಬಳಸಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ' ಎಂದು ಹೇಳಿದರು.

`ಜಿಲ್ಲೆಯಲ್ಲಿ ಒಟ್ಟು 10,46,856 ಜನರು ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಹೊಂದಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಜಿಲ್ಲೆಯಲ್ಲಿ 18,823 ಅರ್ಜಿಗಳು ಬಂದಿವೆ. ಈಗಾಗಲೇ 2,243 ಅರ್ಜಿಗಳನ್ನು ವಿಲೇವಾರಿ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅನುಮತಿ ನೀಡಲಾಗಿದೆ. ಇನ್ನೂ 16,549 ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ' ಎಂದು ತಿಳಿಸಿದರು.

`ಜಿಲ್ಲೆಯಲ್ಲಿ ಆರು ವಿಧಾನಸಭೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು 1,359 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇವುಗಳಲ್ಲಿ 409 ಸೂಕ್ಷ್ಮ, 308 ಅತಿಸೂಕ್ಷ್ಮ, 642 ಸಾಮಾನ್ಯ ಮತಗಟ್ಟೆಗಳು' ಎಂದು ಗುರುತಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನಸಿಂಗ್ ರಾಥೋರ್ ಮಾತನಾಡಿ, `ಚುನಾವಣಾ ಕಾರ್ಯಕ್ಕೆ ಜಿಲ್ಲೆಯ ಎಲ್ಲ ಪೊಲೀಸ್ ಬಲ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಸೇರಿ 1100 ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಇದಲ್ಲದೇ ಬೇರೆ ರಾಜ್ಯಗಳ 14 ತುಕಡಿಗಳು ಬರಲಿವೆ. ಒಟ್ಟು ಚುನಾವಣಾ ಬಂದೋಬಸ್ತ್‌ಗಾಗಿ 2500ಕ್ಕೂ ಹೆಚ್ಚಿನ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ' ಎಂದು ತಿಳಿಸಿದರು.

ಮಾಹಿತಿ ಪುಸ್ತಿಕೆ ಬಿಡುಗಡೆ: ಇದೇ ಸಂದರ್ಭದಲ್ಲಿ ವಾರ್ತಾ ಇಲಾಖೆ ಸಿದ್ಧಪಡಿಸಿದ ಚುನಾವಣಾ ಮಾಹಿತಿ ಕುರಿತು ಕೈಪಿಡಿಯನ್ನು ಜಿಲ್ಲಾಧಿಕಾರಿ ಅನ್ಬುಕುಮಾರ ಬಿಡುಗಡೆ ಮಾಡಿದರು.

ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಠೋರ್, ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್, ಅಪರ ಜಿಲ್ಲಾಧಿಕಾರಿ ಜಿ.ಜಗದೀಶ, ವಾರ್ತಾಧಿಕಾರಿ ಸಿ.ಪಿ.ಮಾಯಾಚಾರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT