ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ಪೈಪೋಟಿ ನೋವು ತರದಿರಲಿ

Last Updated 16 ಜನವರಿ 2012, 6:45 IST
ಅಕ್ಷರ ಗಾತ್ರ

ಚಿಕ್ಕೋಡಿ: ಸತ್ಯವೊಂದನ್ನು ಪ್ರಚಾರ ಪಡಿಸಿದರೆ ಅದರಿಂದ ಸಮಾಜ ಮತ್ತು ದೇಶದ ಹಿತಕ್ಕೆ ಧಕ್ಕೆ ಬರುವಂತಿದ್ದರೆ ಅಂತಹ ಸತ್ಯವನ್ನು ಮರೆಮಾಚುವುದೇ ಒಳ್ಳೆಯದು ಎಂದು ಕನೇರಿ ಸಿದ್ದಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಪತ್ರಕರ್ತರಿಗೆ ಸಲಹೆ ನೀಡಿದರು.

ಶನಿವಾರ ತಾಲ್ಲೂಕಿನ ಯಕ್ಸಂಬಾ ಗ್ರಾಮದ ಬಿರೇಶ್ವರ ಕ್ರೇಡಿಟ್ ಸೌಹಾರ್ದ ಸಹಕಾರಿಯ ಸಭಾಗೃಹದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕ ಮತ್ತು ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಪತ್ರಕರ್ತ ಬಾಳಶಾಸ್ತ್ರೀ ಜಾಂಬೇಕರ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಹಿರಿಯ ಪತ್ರಕರ್ತರಿಗೆ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

`ಅಸ್ತ್ರದಿಂದ ಬಗೆಹರಿಸಲಾಗದ ಸಮಸ್ಯೆಯನ್ನು ಲೇಖನಿಯಿಂದ ಪರಿಹರಿಸಲು ಸಾಧ್ಯವಿದೆ. ಸಮಾಜ ಅಥವಾ ದೇಶವನ್ನು ಕಟ್ಟುವ ಮತ್ತು ಒಡೆಯುವ ಶಕ್ತಿಗಳೆರೆಡೂ ಲೇಖನಿಯಲ್ಲಿದೆ. ಈ ಹಿನ್ನಲೆಯಲ್ಲಿ ಪತ್ರಕರ್ತರು ಅತ್ಯಂತ ಜವಾಬ್ದಾರಿಯುತವಾಗಿ ವರದಿಗಾರಿಕೆ ಯನ್ನು ಮಾಡುವ ಅಗತ್ಯವಿದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಉಂಟಾಗಿರುವ ತೀವ್ರ ಪೈಪೋಟಿಯಿಂದಾಗಿ ಸುದ್ದಿಯನ್ನು ಮೊದಲು ನೀಡುವ ಧಾವಂತದಲ್ಲಿ ತಪ್ಪುಗ್ರಹಿಕೆಗಳಿಂದ ಕೂಡಿದ ವರದಿಗಳಿಂದ ಅಮಾಯಕ ಜನರ ಮನಸ್ಸಿಗೆ ನೋವು ಉಂಟಾಗುವ ಸಾಧ್ಯತೆ ಇದ್ದು, ಕಣ್ಣಾರೆ ಕಂಡ ಸತ್ಯವನ್ನೂ ಸಮಚಿತ್ತದಿಂದ ಪರಾಮರ್ಶಿಸಿ ಖಚಿತಪಡಿಸಿಕೊಂಡ ಬಳಿಕವೇ ವರದಿಯನ್ನು ಪ್ರಕಟಿಸಬೇಕು~ ಎಂದು ಹೇಳಿದರು.

ನವ ಸಮಾಜವನ್ನು ನಿರ್ಮಾಣ ಮಾಡುವ ಕೆಲಸ ಮಾಡಲು ಆಗದೇ ಹೋದರೂ ನಿರ್ನಾಮ ಮಾಡುವ ಕೆಲಸವನ್ನಾದರೂ ಮಾಡಬಾರದು ಎಂದು ಮಾರ್ಮಿಕವಾಗಿ ನುಡಿದರು.
ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಅವರು, ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಅಪರಾಧ, ಭೃಷ್ಟಾಚಾರಗಳಂತಹ ವಿಷಯಗಳ ವೈಭವೀಕರಣವಾಗುತ್ತಿದೆ ಎಂದು ಖೇದ ವ್ಯಕ್ತಪಡಿಸುತ್ತಾ, ಸಮಾಜಕ್ಕೆ ಪ್ರೇರಣಾದಾಯಕವಾದ ಸಕಾರಾತ್ಮಕ ವಿಚಾರಗಳು ಮೂಡಿಬರುವಂತಾಗ ಬೇಕು ಎಂದು ಆಶಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಬಾಬು ಸುಂಕದ, ಯಕ್ಸಂಬಾದ ಸಹಕಾರ ಶಿಕ್ಷಣ ಮತ್ತು ಸಮಾಜಸೇವಾ ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ಜೊಲ್ಲೆ, ಪತ್ರಕರ್ತರಾದ ಮಹಾಲಿಂಗ ಪಾಟೀಲ, ರಾಜೇಂದ್ರ ಕೊಂಡೆಬೆಟ್ಟು ಮಾತನಾಡಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಕೋಳಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರಾದ ವಿ.ಕೆ.ರೇವಣಕರ, ರಮೇಶ ಮುತಾಲಿಕದೇಸಾಯಿ, ಸುಭಾಷ ಬದನಿಕಾಯಿ, ಜಹಾಂಗೀರ ಶಿರಕೋಳಿ, ಮನೋಹರ ಬನ್ನೆ, ದಿನಕರ ಲೊಂಡೆ, ಮಹಾಲಿಂಗ ಪಾಟೀಲ ಅವರನ್ನು ಸತ್ಕರಿಸಲಾಯಿತು.
 
ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮೆ ಪಾಲಿಸಿಗಳನ್ನು ವಿತರಿಸಲಾಯಿತು. ಆಶಾಜ್ಯೋತಿ ಬುದ್ದಿಮಾಂದ್ಯ ಮಕ್ಕಳ ಶಾಲೆ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ,  ಯಲ್ಲಪ್ಪ ತಳವಾರ, ಸಂಜೀವ ಮುತಾಲಿಕ, ಎಸ್.ಆರ್.ಡೊಂಗರೆ ಮುಂತಾದವರು ಉಪಸ್ಥಿತರಿದ್ದರು. ಜಹಾಂಗೀರ ಶಿರಕೋಳಿ ಸ್ವಾಗತಿಸಿದರು. ಗಜಾನನ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಕಾಸೀದ ನಿರೂಪಿಸಿದರು. ವಿನಾಯಕ ಮೇತ್ರೆ ವಂದಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT