ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳ ವಿರುದ್ಧ ತಾಲಿಬಾನ್ ಕಿಡಿ

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಬಾಲಕಿ ಮಲಾಲಾ ಮೇಲಿನ ಹಲ್ಲೆ ಪ್ರಕರಣಕ್ಕೆ ನೀಡುತ್ತಿರುವ ಪ್ರಚಾರದಿಂದ ಮಾಧ್ಯಮಗಳ ವಿರುದ್ಧ ಸಿಟ್ಟಿಗೆದ್ದಿರುವ ನಿಷೇಧಿತ ತೆಹ್ರಿಕ್-ಎ- ತಾಲಿಬಾನ್ ಸಂಘಟನೆ, ದೇಶದಲ್ಲಿರುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುತ್ತಿದೆ ಎಂದು ಉರ್ದು ಬಿಬಿಸಿ ವರದಿ ಮಾಡಿದೆ.

ಈ ಸಂಬಂಧ ಪಾಕಿಸ್ತಾನದಲ್ಲಿರುವ ತಾಲಿಬಾನ್ ಮುಖ್ಯಸ್ಥ ಹಕಿಮುಲ್ಲಾ ಮೆಹಸೂದ್ ರಾಷ್ಟ್ರದ ವಿವಿಧ ನಗರಗಳಲ್ಲಿರುವ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ನಡೆಸಲು ತನ್ನ ಸಹಚರರಿಗೆ ನಿರ್ದೇಶನ ನೀಡಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

`ಈ ಸಂಚು ರೂಪಿಸುವ ಕುರಿತು ಹಕೀಮುಲ್ಲಾ ಹಾಗೂ ಸಹಚರ ನದೀಮ್ ಅಬ್ಬಾಸ್ ಅಲಿಯಾಸ್ ಇಂತಿಕಾಮಿಯೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯನ್ನು ಬೇಹುಗಾರಿಕಾ ಸಂಸ್ಥೆಯೊಂದು ಕೇಳಿಸಿಕೊಂಡಿರುವುದಾಗಿ~ ಹೆಸರು ಬಹಿರಂಗಪಡಿಸಲು ಇಚ್ಛಿಸದ ಒಳಾಡಳಿತ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕರಾಚಿ, ಲಾಹೋರ್, ರಾವಲ್ಪಿಂಡಿ, ಇಸ್ಲಾಮಾಬಾದ್ ಮತ್ತು ಇತರೆ ನಗರಗಳಲ್ಲಿರುವ ಮಾಧ್ಯಮ ಸಂಸ್ಥೆಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸುವಂತೆ ಮಸೂದ್, ಅಬ್ಬಾಸ್‌ಗೆ ನಿರ್ದೇಶನ ನೀಡಿದ್ದಾನೆಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿರುವ ಒಳಾಡಳಿತ ಸಚಿವಾಲಯ, ಪಾಕಿಸ್ತಾನದ ವಿವಿಧ ರಾಜ್ಯಗಳಲ್ಲಿರುವ ಮಾಧ್ಯಮ ಸಂಸ್ಥೆಗಳಿಗೆ ಹೆಚ್ಚುವರಿ ಬಿಗಿ ಭದ್ರತೆ ಒದಗಿಸಲು ಆದೇಶಿಸಿದೆ ಎಂದು ಬಿಬಿಸಿ ಉರ್ದು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಅಗತ್ಯಬಿದ್ದರೆ ಖಾಸಗಿ ಭದ್ರತಾಪಡೆ ನಿಯೋಜಿಸಿಕೊಳ್ಳಲು ಸೂಚಿಸಲಾಗಿದೆ.

ಭದ್ರತೆ ವಿಷಯ ಚರ್ಚಿಸುವ ಸಂಬಂಧ ಇಸ್ಲಾಮಾಬಾದ್‌ನ ಮುಖ್ಯ ಆಯುಕ್ತ ಮತ್ತು ನಾಲ್ಕು ಪ್ರಾಂತ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಮಾಧ್ಯಮ ಸಂಸ್ಥೆಗಳ ಮಾಲೀಕರನ್ನು ಭೇಟಿಯಾಗುವಂತೆ ಸಚಿವಾಲಯ ಸೂಚಿಸಿದೆ. ತಾಲಿಬಾನ್ ಕೃತ್ಯವನ್ನು ಸಾರ್ವಜನಿಕವಾಗಿ ಖಂಡಿಸಿದ ಧಾರ್ಮಿಕ ನಾಯಕರಿಗೂ ಎಚ್ಚರಿಕೆಯಿಂದಿರುವಂತೆ ಮನವಿ ಮಾಡಿದೆ.

ನಿಷೇಧಿತ ತಾಲಿಬಾನ್ ಉಗ್ರ ಸಂಘಟನೆ ವಿರುದ್ಧ ದನಿ ಎತ್ತಿದ್ದ ಬಾಲಕಿ ಮಲಾಲಾಳನ್ನು ಇಬ್ಬರು ತಾಲಿಬಾನ್ ಉಗ್ರರು ಸ್ವಾತ್ ಕಣಿವೆ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿ ಕೊಲ್ಲಲು ಯತ್ನಿಸಿದ್ದರು.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಲಾಲಾಳಿಗೆ ರಾವಲ್ಪಿಂಡಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
 
ಸದ್ಯ ಆಕೆಯನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ.  ಘಟನೆಯ ಹೊಣೆ ಹೊತ್ತ ತಾಲಿಬಾನ್ ವಿರುದ್ಧ ರಾಷ್ಟ್ರಾದ್ಯಂತ ಖಂಡನೆ ವ್ಯಕ್ತವಾಗಿದ್ದು, ಮಾಧ್ಯಮಗಳು ಈ ಸುದ್ದಿಗೆ ಹೆಚ್ಚು ಪ್ರಚಾರ ನೀಡಿದ್ದವು.

ಮಲಾಲಾ ಆರೋಗ್ಯ ಸುಧಾರಣೆ: ಸೇನೆ

ಇಸ್ಲಾಮಾಬಾದ್ (ಪಿಟಿಐ): ಇತ್ತೀಚೆಗೆ ತಾಲಿಬಾನ್ ಉಗ್ರರ ಗುಂಡಿನ ದಾಳಿಗೆ ಒಳಗಾಗಿದ್ದ ಬಾಲಕಿ ಮಲಾಲಾ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದ್ದು, ದೇಹದ ಪ್ರಮುಖ ಅಂಗಾಗಗಳೆಲ್ಲಾ ಸಮರ್ಪಕವಾಗಿ ಕಾರ್ಯನಿರ್ವ ಹಿಸುತ್ತಿವೆ~ ಎಂದು ಸೇನಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

`ಆರೋಗ್ಯದಲ್ಲಿ ತುಸು ಸುಧಾರಣೆ ಕಂಡರೂ ಆಕೆಯನ್ನು ತೀವ್ರ ನಿಗಾ ಘಟಕದಲ್ಲೇ ಇಡಲಾಗಿದೆ~. ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲಾಲಾ ಆರೋಗ್ಯ ಸ್ಥಿತಿಯಲ್ಲಿ ಕೊಂಚ ಸುಧಾರಣೆ ಕಂಡಿದೆ ಎಂದು ಮಿಲಿಟರಿ ವಕ್ತಾರರೊಬ್ಬರು ತಿಳಿಸಿದ್ದಾರೆ ವಿಶೇಷ ವೈದ್ಯಕೀಯ ತಂಡವನ್ನೊಳಗೊಂಡ ಪಾಕಿಸ್ತಾನ ಸೇನೆಯ ವೈದ್ಯರ ತಂಡ ಮಲಾಲಾಗೆ ಚಿಕಿತ್ಸೆ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT