ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಾನವ ಕಂಪ್ಯೂಟರ್' ಇನ್ನಿಲ್ಲ

Last Updated 21 ಏಪ್ರಿಲ್ 2013, 20:10 IST
ಅಕ್ಷರ ಗಾತ್ರ

`ಮಾನವ ಕಂಪ್ಯೂಟರ್' ಇನ್ನಿಲ್ಲ
`ಮಾನವ ಕಂಪ್ಯೂಟರ್' ಎಂದೇ ಖ್ಯಾತಿ ಗಳಿಸಿದ್ದ ವಿಶ್ವವಿಖ್ಯಾತ ಗಣಿತಶಾಸ್ತ್ರಜ್ಞೆ ಶಕುಂತಲಾ ದೇವಿ (84) ಭಾನುವಾರ ಬೆಳಿಗ್ಗೆ 8.15ರ ಸುಮಾರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೆಲಕಾಲದಿಂದ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಒಬ್ಬ ಪುತ್ರಿ ಇದ್ದಾರೆ.

`ಫನ್ ವಿತ್ ನಂಬರ್ಸ್‌', `ಆಸ್ಟ್ರಾಲಜಿ ಫಾರ್ ಯು', `ಪಜಲ್ಸ್ ಟು ಪಜಲ್ ಯು' ಸೇರಿದಂತೆ ಹಲವು ಕೃತಿಗಳನ್ನು ಅವರು ರಚಿಸಿದ್ದರು. ಶಕುಂತಲಾ ದೇವಿ ಶಿಕ್ಷಣ ಪ್ರತಿಷ್ಠಾನ ಟ್ರಸ್ಟ್ ಹೆಸರಿನಲ್ಲಿ ಅವರು ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದರು. ಗಿನ್ನೀಸ್ ದಾಖಲೆ ಪುಸ್ತಕದಲ್ಲೂ ಅವರ ಹೆಸರು ಸೇರ್ಪಡೆಯಾಗಿತ್ತು. ಸಂಜೆ ಅಂತ್ಯಕ್ರಿಯೆ ನಡೆಸಲಾಯಿತು.


ಶಾಲೆ ಮೆಟ್ಟಿಲೇರದ `ಸಂಖ್ಯಾ ಚತುರೆ'
ಬೆಂಗಳೂರು: 
ಅದು 1980ರ ಜೂನ್ 18ರ ಮಧ್ಯಾಹ್ನ. ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ ಮೈಕ್ ಹಿಡಿದು ವೇದಿಕೆ ಮೇಲೆ ನಿಂತಿದ್ದ ಆ ಮಹಿಳೆಗೆ 7,686,369,774,870 ಸಂಖ್ಯೆಯಿಂದ 2,465,099,745, 779 ಸಂಖ್ಯೆಯನ್ನು ಗುಣಿಸುವಂತೆ ಸವಾಲು ಎಸೆಯಲಾಯಿತು. ಸಭಾಂಗಣದಲ್ಲಿ ಕುಳಿತ ಗಣಿತಜ್ಞರು ಕ್ಯಾಲ್ಕುಲೇಟರ್‌ನಲ್ಲಿ ಇನ್ನೂ ಆ ಅಂಕೆಗಳನ್ನು ಟೈಪ್ ಮಾಡಿರಲಿಲ್ಲ. ಅಷ್ಟರಲ್ಲಿ ವೇದಿಕೆಯಿಂದ ಉತ್ತರ ಬಂದುಬಿಟ್ಟಿತು: 18,947,668,177,995,426,462,773,730 ಎಂದು!

ಕೇವಲ 28 ಸೆಕೆಂಡ್‌ಗಳಲ್ಲಿ ಉತ್ತರವನ್ನು ನೀಡಿದ ಆ `ಮಾನವ ಕಂಪ್ಯೂಟರ್' ಹೆಸರೇ ಶಕುಂತಲಾ ದೇವಿ. 26 ಅಂಕೆಗಳ ಉತ್ತರವನ್ನು ವಾಚಿಸುವ ಸಲುವಾಗಿಯೇ 26 ಸೆಕೆಂಡ್‌ಗಳು ಅವರಿಗೆ ಬೇಕಾದವು. 13 ಅಂಕೆ (ಡಿಜಿಟ್)ಗಳ ಎರಡು ಸಂಖ್ಯೆಗಳನ್ನು ಗುಣಿಸಲು ಅವರು ತೆಗೆದುಕೊಂಡ ಅವಧಿ ಕೇವಲ 2 ಸೆಕೆಂಡ್. ಉತ್ತರವನ್ನು ದೃಢಪಡಿಸಲು ಗಣಿತಶಾಸ್ತ್ರಜ್ಞರು ತೆಗೆದುಕೊಂಡ ಕಾಲಾವಕಾಶ ಅರ್ಧಗಂಟೆಯಾಗಿತ್ತು.

ಸೋಜಿಗವಾದರೂ ಸತ್ಯ ಸಂಗತಿ ಎಂದರೆ ಶಕುಂತಲಾ ಶಾಲೆಯ ಮೆಟ್ಟಿಲನ್ನೇ ತುಳಿದವರಲ್ಲ. ಉತ್ತರಕ್ಕೆ ತಡಕಾಡಿದ ಲಂಡನ್ನಿನ ಗಣಿತಶಾಸ್ತ್ರಜ್ಞರು ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಘನ ವಿದ್ವಾಂಸರಾಗಿದ್ದರು!

ಅದೇ ಶಕುಂತಲಾ ಅವರ ಮುಂದೆ  201 ಅಂಕೆಗಳ (ಡಿಜಿಟ್) 23ನೇ ವರ್ಗಮೂಲ ಕಂಡು ಹಿಡಿಯುವ ಪ್ರಶ್ನೆ ಇಡಲಾಯಿತು. ಕೇವಲ 50 ಸೆಕೆಂಡ್‌ಗಳಲ್ಲಿ ಉತ್ತರ ಸಿದ್ಧವಾಗಿತ್ತು. ಆಗಿನ ಕಾಲದ ಅತ್ಯಾಧುನಿಕ ಕಂಪ್ಯೂಟರ್‌ಗೆ ಇದಕ್ಕೆ 62 ಸೆಕೆಂಡ್ ಬೇಕಾಯಿತು. ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ವಿದ್ವಾಂಸರು ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಕನ್ನಡದ ಈ ಅಸಾಮಾನ್ಯ ಗಣಿತಶಾಸ್ತ್ರಜ್ಞೆಗೆ ಗೌರವ ನೀಡಿದ್ದರು.

ಬೆಂಗಳೂರಿನವರಾದ ಶಕುಂತಲಾ ಹುಟ್ಟಿದ್ದು 1929ರ ನವೆಂಬರ್ 4ರಂದು; ಅದೂ ಕಟ್ಟಾ ಸಂಪ್ರದಾಯಸ್ಥ ಕುಟುಂಬದಲ್ಲಿ. ಆದರೆ ಮನೆತನದ ಪೌರೋಹಿತ್ಯ ವೃತ್ತಿಯನ್ನು ಮಾಡಲು ಒಪ್ಪದೆ ಅವರ ತಂದೆ, ಮನೆಯಿಂದ ಹೊರಬಂದು ಸರ್ಕಸ್ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಐದು ವರ್ಷ ತುಂಬುವ ವೇಳೆಗೆ ಅಂಕೆಗಳ ಜೊತೆ ಆಟವಾಡುವ ಮಗಳ ಸಾಮರ್ಥ್ಯ ಅರಿತ ತಂದೆ ಸರ್ಕಸ್ ಕಂಪೆನಿ ತೊರೆದು ಮಗಳ ಗಣಿತದ ಜ್ಞಾನ ಪ್ರದರ್ಶನದ ಮೇಳ ಏರ್ಪಡಿಸಲು ಆರಂಭಿಸಿದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಬಹುದೊಡ್ಡ ಪ್ರದರ್ಶನ ನಡೆಸಿದಾಗ ಈ `ಮಾನವ ಕಂಪ್ಯೂಟರ್'ಗೆ ಕೇವಲ ಆರರ ಹರೆಯ. ಅಂಕೆಗಳೊಂದಿಗೆ ಸರಸ ಆಡುವುದೆಂದರೆ ಅವರಿಗೆ ನೀರು ಕುಡಿದಷ್ಟು ಸುಲಭವಾಗಿತ್ತು.

ಜಗತ್ತಿನಲ್ಲಿ ಅವರು ಸುತ್ತದ ದೇಶವೇ ಇಲ್ಲ ಎಂಬಷ್ಟು ಎಲ್ಲ ಭೂಖಂಡಗಳಲ್ಲಿ ಪರ್ಯಟನ ನಡೆಸಿದ್ದಾರೆ. ಖಗೋಳಶಾಸ್ತ್ರದಲ್ಲೂ ಅವರಲ್ಲಿ ಸಿದ್ಧಿ ಇತ್ತು. ಜ್ಯೋತಿಷವನ್ನೂ ಹೇಳುತ್ತಿದ್ದರು. ಸ್ವಾದಿಷ್ಟವಾದ ಖಾದ್ಯ ತಯಾರಿಸುವುದು ಅವರ ನೆಚ್ಚಿನ ಹವ್ಯಾಸವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT