ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯ ಮೌಲ್ಯ ಬೆಳೆಸಿ

Last Updated 25 ಜನವರಿ 2012, 9:55 IST
ಅಕ್ಷರ ಗಾತ್ರ

ಧಾರವಾಡ: “ಇಂದಿನ ಜಾಗತೀಕರಣದ ಭರಾಟೆಯಲ್ಲಿ ಸಂಸ್ಕಾರ ಎಂಬುವುದು ಕಡಿಮೆಯಾಗುತ್ತಿದೆ. ಜಾಗತೀಕರಣ, ಖಾಸಗೀಕರಣ, ಉದಾರೀಕರಣದ ಜೊತೆಗೆ ಅಂತಃಕರಣ ಸಹ ಅವಶ್ಯವಿದೆ” ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
 
ಇಲ್ಲಿನ ಮುರುಘಾಮಠದಲ್ಲಿ ನಡೆದಿರುವ ಅಥಣಿ ಮುರುಘೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಪೀಳಿಗೆಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಅಗತ್ಯವಿದೆ. ಇದರಿಂದ ಒಳ್ಳೆಯ ಸಂಸ್ಕಾರ ಬೆಳೆಯಲು ಸಾಧ್ಯ ಎಂದರು.

ಮುರುಘಾಮಠ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮೂಡಿಸುವ ಕಾರ್ಯ ಮಾಡುತ್ತಿದೆ. ಇಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ದೊಡ್ಡ ಹುದ್ದೆ ಅಲಂಕರಿಸಿ ನವ ಕರ್ನಾಟಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದ್ದರಿಂದಲೇ ಕರ್ನಾಟಕ ಎಲ್ಲ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತಿದೆ ಎಂದ ಅವರು, ಪುಸ್ತಕ ಪ್ರಕಟಣೆ ಕಾರ್ಯವನ್ನು ಶ್ಲಾಘಿಸಿದರು.

ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿ, ಪುಸ್ತಕಗಳು ಮಾನವನ ಮಸ್ತಕ ಸರಿಪಡಿಸುವಲ್ಲಿ ಸಹಕಾರಿಯಾಗುತ್ತವೆ. ಇಂಥ ಮಸ್ತಕ ಶುದ್ಧಗೊಳಿಸುವ ಪುಸ್ತಕಗಳ ಅಧ್ಯಯನ ನಿರಂತರವಾಗಿರಬೇಕು. ಮೌಲ್ಯಯುತ ಜೀವನ ನಡೆಸಲು ಉತ್ತಮ ಗ್ರಂಥಗಳ ಅವಶ್ಯಕತೆ ಇದೆ ಎಂದರು.

ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆಯಿಂದ ಪ್ರಕಟಗೊಂಡ ಬಸವಸ್ತೋತ್ರದ ವಚನ ಸಂಪುಟ, ಮೃತ್ಯುಂಜಯ ಲೀಲಾ ವಿಲಾಸ, ದಿ ಲೈಟ್ ಡಿವೈನ್, ಕೈವಲ್ಯ ಸಾಹಿತ್ಯ ಸಂಪುಟ, ಶರಣ ಬಸವೇಶ್ವರ ಪುರಾಣ, ಶಿವಾನುಭವ ಪಠ್ಯ ಗ್ರಂಥಗಳು, ಮಾತೃ ಹೃದಯಿ ಮಹಾಂತಪ್ಪಗಳು ಎಂಬ ಪುಸ್ತಕಗಳು ಬಿಡುಗಡೆಯಾದವು.

ಮಾಜಿ ಶಾಸಕ ವಿನಯ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಫಕೀರ ಸಿದ್ಧರಾಮ ಸ್ವಾಮೀಜಿ, ಜಯಮೃತ್ಯುಂಜಯ ಸ್ವಾಮೀಜಿ, ಮಹಾಂತ ಶಿವಯೋಗಿಗಳು, ಚನ್ನಬಸವ ಸ್ವಾಮೀಜಿ, ಡಾ. ವೀರಣ್ಣ ರಾಜೂರ, ಡಾ. ಚೆನ್ನವೀರ ಕಣವಿ, ಶಾಸಕರಾದ ಚಂದ್ರಕಾಂತ ಬೆಲ್ಲದ, ಸೀಮಾ ಮಸೂತಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗ್ರಂಥ ದಾಸೋಹ ಮಾಡಿದವರನ್ನು ಸನ್ಮಾನಿಸಲಾಯಿತು.

ಬೆಳಿಗ್ಗೆ ಸಂಗನಬಸವ ಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಬಸವಲಿಂಗ ಸ್ವಾಮೀಜಿ ಷಟ್‌ಸ್ಥಲ ನುಡಿ ನಡೆಸಿಕೊಟ್ಟರು.

ಮಲ್ಲಿಕಾರ್ಜುನ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಮಹಾಂತ ರುದ್ರೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.
ಎಂ.ವಿ.ವಡ್ಡಿನ ಸ್ವಾಗತಿಸಿದರು. ಬಸವಂತಪ್ಪ ತೋಟದ ಧ್ವಜಗೀತೆ ಹಾಡಿದರು. ಮುದಗಲ್ ಸ್ವಾಮೀಜಿ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT