ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ: ಪಶುಪಾಲನಾ ಇಲಾಖೆ ದುಸ್ಥಿತಿ!

Last Updated 7 ಜನವರಿ 2012, 9:45 IST
ಅಕ್ಷರ ಗಾತ್ರ

ಮಾನ್ವಿ: ತಾಲ್ಲೂಕಿನಲ್ಲಿ ಕೆಲವು ಇಲಾಖೆಗಳು ಸಮರ್ಪಕ ಸಿಬ್ಬಂದಿ ಕೊರತೆಯಿಂದ ಸರಿಯಾಗಿ ಕಾರ್ಯನಿರ್ವಹಿಸದೇ ಸರ್ಕಾರದ ಯೋಜನೆಗಳ ಜಾರಿಯಲ್ಲಿ ವೈಫಲ್ಯತೆ ಕಂಡು ಬರುತ್ತಿದೆ. ವಿಶೇಷವಾಗಿ  ಪಶುಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆಯಲ್ಲಿ ಅತ್ಯಧಿಕ ಹುದ್ದೆಗಳು ಖಾಲಿ ಇರುವುದು ಜನಪ್ರತಿನಿಧಿಗಳು ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 4 ಪಶು ಆಸ್ಪತ್ರೆಗಳು ಹಾಗೂ 9 ಪಶು ಚಿಕಿತ್ಸಾಲಯಗಳು ಇವೆ. ಇವುಗಳಲ್ಲಿ ಅತೀ ಹೆಚ್ಚು ಅಗತ್ಯತೆ ಹೊಂದಿರುವ ಸಹಾಯಕ ನಿರ್ದೇಶಕರು ಹಾಗೂ ಪಶು ವೈದ್ಯಾಧಿಕಾರಿಗಳ ಹುದ್ದೆಗಳೇ ಖಾಲಿ ಇರುವುದರಿಂದ ಇಲಾಖೆಯ ಯೋಜನೆಗಳ ಜಾರಿ ಕಷ್ಟಸಾಧ್ಯ ಎನ್ನುವಂತಾಗಿದೆ. ಮಾನ್ವಿ ಸೇರಿದಂತೆ ಸಿರವಾರ, ಕುರ್ಡಿ ಹಾಗೂ ಬ್ಯಾಗವಾಟದಲ್ಲಿ ಪಶು ಆಸ್ಪತ್ರೆಗಳಿವೆ. ಈ ನಾಲ್ಕು ಆಸ್ಪತ್ರೆಗಳಲ್ಲಿ ಸಹಾಯಕ ನಿರ್ದೇಶಕರಿಲ್ಲ. ಕವಿತಾಳ ಹೊರತುಪಡಿಸಿದರೆ ಉಳಿದ ಮೂರು ಆಸ್ಪತ್ರೆಗಳಲ್ಲಿ ಪಶು ವೈದ್ಯಾಧಿಕಾರಿ ಹುದ್ದೆಗಳು ಖಾಲಿ ಇವೆ.

ತಾಲ್ಲೂಕು ಕೇಂದ್ರದ ಕಚೇರಿಯಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕರ ಹುದ್ದೆಗೆ ಕವಿತಾಳ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಂಜುನಾಥ ಅವರನ್ನೇ ತಾತ್ಕಾಲಿಕವಾಗಿ ಹೆಚ್ಚುವರಿಯಾಗಿ ನೀಡಿ ಪ್ರಬಾರ ಸೇವೆಗೆ ನಿಯೋಜನೆಗೊಳಿಸಲಾಗಿದೆ. ಡಾ.ಮಂಜುನಾಥ ಅವರು ಕವಿತಾಳ ಹಾಗೂ ಮಾನ್ವಿಯ ಎರಡೂ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಲ್ಲೂಕಿನ ಕವಿತಾಳ, ಪಾಮನಕಲ್ಲೂರು, ಬಾಗಲವಾಡ, ಬಲ್ಲಟಗಿ, ಪೋತ್ನಾಳ, ಕಲ್ಲೂರು, ಚೀಕಲಪರ್ವಿ, ರಾಜಲಬಂಡಾ, ಮಾಚನೂರು ಗ್ರಾಮಗಳಲ್ಲಿರುವ ಪಶು ಚಿಕಿತ್ಸಾಲಯಗಳಲ್ಲಿ ಕವಿತಾಳ ಹೊರತುಪಡಿಸಿದರೆ ಉಳಿದ ಎಲ್ಲಾ 8 ಕೇಂದ್ರಗಳಲ್ಲಿ ಪಶು ವೈದ್ಯಾಧಿಕಾರಿಗಳು ಇಲ್ಲ. ಪಶು ವೈದ್ಯ ಸಹಾಯಕರೂ ಕೂಡ ಕೇವಲ ಒಂದು ಕೇಂದ್ರದಲ್ಲಿದ್ದು ಉಳಿದ 8ಕೇಂದ್ರಗಳಲ್ಲಿ ಹುದ್ದೆಗಳು ಖಾಲಿ ಇವೆ. ಇನ್ನುಳಿದಂತೆ ತಾಲ್ಲೂಕಿನ ಎಲ್ಲಾ ಕೇಂದ್ರಗಳಲ್ಲಿ ದ್ವಿತೀಯ ದರ್ಜೆ ಸಹಾಯಕರು, `ಡಿ~ ಗ್ರೂಪ್ ನೌಕರರು, ವಾಹನ ಚಾಲಕರ ಹಲವು ಹುದ್ದೆಗಳು ಖಾಲಿ ಇವೆ.  ತಾಲ್ಲೂಕಿನಾದ್ಯಾಂತ ಇರುವ ಪಶು ಆಸ್ಪತ್ರೆ ಹಾಗೂ ಪಶು ಚಿಕಿತ್ಸಾಲಯಗಳಲ್ಲಿ ಒಟ್ಟು 82 ಹುದ್ದೆಗಳ ಪೈಕಿ 47 ಹುದ್ದೆಗಳು ಖಾಲಿ ಇವೆ. ಇಷ್ಟೆಲ್ಲಾ ಹುದ್ದೆಗಳ ಕೊರತೆಯಿಂದ ಸರ್ಕಾರದ ಯೋಜನೆಗಳ ಜಾರಿ ಹಾಗೂ ಜಾನುವಾರುಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಸೇವೆ ನಿರೀಕ್ಷಿಸುವುದು ಅಸಾಧ್ಯ ಎಂಬುದು ಜನತೆಯ ಅಭಿಪ್ರಾಯವಾಗಿದೆ.

ದುಸ್ಥಿತಿಯಲ್ಲಿ ಕಟ್ಟಡ: ಮಾನ್ವಿ ಪಟ್ಟಣದಲ್ಲಿರುವ ಪಶು ಆಸ್ಪತ್ರೆಯ ಕಟ್ಟಡ ದುರಸ್ತಿ ಕಾಣದೆ ಶಿಥಿಲಾವಸ್ಥೆಯಲ್ಲಿದೆ. 1943ರಲ್ಲಿ ನಿರ್ಮಾಣವಾದ ಈ ಕಟ್ಟಡದ ದುರಸ್ತಿ ಕುರಿತು ಜನಪ್ರತಿನಿಧಿಗಳು ಇದುವರೆಗೂ ಕಾಳಜಿ ವಹಿಸಿಲ್ಲ.

ಕಳೆದ ವರ್ಷ ಬಿಆರ್‌ಜಿಎಫ್ ಯೋಜನೆ ಅಡಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ತಿಳಿದುಬಂದಿದೆ. ಆದರೆ ಬಿಡುಗಡೆಯಾದದ್ದು ಈಗ ಇರುವ ಕಟ್ಟಡಕ್ಕೆ ಸುಣ್ಣ, ಬಣ್ಣ ಬಳಿಯಲು ಕೇವಲ 60ಸಾವಿರ ಅನುದಾನ. ಕೇವಲ 4ಕೊಠಡಿಗಳು ಇರುವ ಈ ಕಟ್ಟಡದಲ್ಲಿ ಆಸ್ಪತ್ರೆ ನಿರ್ವಹಣೆ ಜತೆಗೆ ತಾಲ್ಲೂಕಿಗೆ ಸರ್ಕಾರದ ಪಶುಪಾಲನಾ ಇಲಾಖೆಯಿಂದ  ಬಿಡುಗಡೆಯಾಗುವ ಔಷಧಿ ಮತ್ತಿತರ ಸಾಮಾಗ್ರಿಗಳ ಸಂಗ್ರಹ ಕೂಡ ಮಾಡಬೇಕು.

ಹೀಗೆ ಸಿಬ್ಬಂದಿ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳಿರುವ ಪಶುಪಾಲನಾ ಇಲಾಖೆಯ ಪಶು ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ   ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT