ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಾಕೀಟ (ಚಿತ್ರ: ಈಗ)

Last Updated 7 ಜುಲೈ 2012, 19:30 IST
ಅಕ್ಷರ ಗಾತ್ರ

ನಿರ್ಮಾಪಕ: ಸಾಯಿ ಕೊರ‌್ರಪಾಟಿ
ನಿರ್ದೇಶಕ: ಎಸ್.ಎಸ್.ರಾಜಮೌಳಿ,
ತಾರಾಗಣ: ಸುದೀಪ್, ಶಮಂತಾ, ನಾಣಿ ಮತ್ತಿತರರು.

`ಯಮದೊಂಗ~ನಿಗಿಂತ `ಮಗಧೀರ~ ಭಿನ್ನ. ಮಗಧೀರನಿಗಿಂತ `ಈಗ~ ಇನ್ನೂ ಭಿನ್ನ. ನಿರ್ದೇಶಕ ರಾಜಮೌಳಿ ಅವರ `ಮಾಯಾಬಜಾರ್~ನಲ್ಲಿ ಅದೆಂಥ ಸರಕುಗಳಿವೆಯೋ! ಹಾಗೆ ನೋಡಿದರೆ ಚಿತ್ರದ ಪ್ರೋಮೊಗಳಲ್ಲಿಯೇ ನಿರ್ದೇಶಕರು ಕತೆ ಹೇಳಿಯಾಗಿತ್ತು. ಇನ್ನು ಸಿನಿಮಾದಲ್ಲಿ ಕಾಣಬೇಕಾದದ್ದು ರಾಜಮೌಳಿ ಪ್ರತಿಭೆಯ ವಿಶ್ವರೂಪ ದರ್ಶನ ಎಂಬುದನ್ನು ಸಾರುವಂತೆ.

ಚಿತ್ರದ ಅಷ್ಟೂ 150 ನಿಮಿಷಗಳು ಪ್ರೇಕ್ಷಕರ ಪಾಲಿಗೆ ರಸನಿಮಿಷಗಳು. ಕತೆಯ ಬಂಧವೆಷ್ಟು ಚಂದವೋ ಅದಕ್ಕೆ ಒದಗಿಸಿರುವ ತಿರುವುಗಳೂ ಅಷ್ಟೇ ಚೆನ್ನ. ನೊಣದ ಬದುಕಿನ ಕುರಿತು ಚಿತ್ರತಂಡದ ಸಂಶೋಧನೆಯೂ ಗಮನಾರ್ಹ.
 
ಪ್ರೇಮದ ಕತೆಯ ಬೆನ್ನಿಗೇ ಕ್ರೌರ್ಯದ ಕತೆಯ ಹೆಣಿಗೆ ಮನೋಹರ. ಕೆಲವು ದೃಶ್ಯಗಳಂತೂ ಸುಂದರ ರೂಪಕಗಳಾಗಿವೆ. ಮಾತಿನಲ್ಲಿ ಕಾಣದ್ದು ನೋಟದಲ್ಲಿ ಅವತರಿಸಿ ನೋಡುಗರ ಹೃದಯ ತಟ್ಟುತ್ತವೆ.

ರಾಜಮೌಳಿ ಅವರ ಹೆಚ್ಚಿನ ಚಿತ್ರಗಳಲ್ಲಿ ನಾಯಕನಿಗಿಂತ ಖಳ ಹೆಚ್ಚು ವಿಜೃಂಭಿಸುತ್ತಾನೆ. ಆ ಮೂಲಕ ಪರೋಕ್ಷವಾಗಿ ನಾಯಕನ ವರ್ಚಸ್ಸನ್ನು ಹೆಚ್ಚಿಸುವ ತಂತ್ರ ಅವರದು. ಇಲ್ಲಿಯೂ ಅದೇ ಕೆಲಸ ನಡೆದಿದೆ.
 
`ಸುದೀಪ~ನಾಗಿ ಕನ್ನಡದ ಸುದೀಪ್ ನೇತ್ಯಾತ್ಮಕ ಪಾತ್ರಕ್ಕೆ ಶಕ್ತಿ ತುಂಬಿದ್ದಾರೆ. ಪ್ರೇಮಿಯಾದರೂ ಕಟುಕನಾಗಿ, ಕ್ರೂರಿಯಾದರೂ ಅಸಹಾಯಕನಾಗಿ, ಗಾಂಭೀರ್ಯದ ಬೆನ್ನಿಗೇ ಹಾಸ್ಯಾಸ್ಪದ ವ್ಯಕ್ತಿಯಾಗಿ ಅವರದು ಭಿನ್ನ ನಟನೆ.

`ನಾಣಿ~ಯಾಗಿ ನಾಣಿ, ಚಿತ್ರದಲ್ಲಿ ಕಾಣಿಸಿಕೊಳ್ಳುವುದು ಅಲ್ಪಹೊತ್ತು ಮಾತ್ರ. ಆದರೆ ಅವರ ಲವಲವಿಕೆ, ತುಂಟಾಟ ನೊಣದ ರೂಪದಲ್ಲಿಯೂ ಮುಂದುವರಿಯುತ್ತದೆ. ಒಬ್ಬ ಅಬಲೆಯಾಗಿ, ಮುಗ್ಧೆಯಾಗಿ ಸಮಂತಾ ನಟನೆ ಮೆಚ್ಚುಗೆಗೆ ಪಾತ್ರ.

ಚಿತ್ರದಲ್ಲಿ ಮತ್ತೆರಡು ವಿಶಿಷ್ಟ `ಪಾತ್ರ~ಗಳಿವೆ. ಅವು ಅನಿಮೇಷನ್ ತಂತ್ರಜ್ಞಾನ ಹಾಗೂ ಛಾಯಾಗ್ರಹಣ. ಕೃತಕ ಸೃಷ್ಟಿ ಎಂಬ ಅನುಮಾನ ಮೂಡದಂತೆ ಅನಿಮೇಟೆಡ್ ನೊಣ ಸೃಷ್ಟಿಯಾಗಿದೆ. ಅದರ ಚಾಣಾಕ್ಷತೆ ಮಕ್ಕಳಿಗೂ ಇಷ್ಟವಾಗುವಷ್ಟೇ ದೊಡ್ಡವರನ್ನೂ ಹಿಡಿದಿಡುತ್ತದೆ.

ಕೀಟದಂತೆಯೇ ಸ್ವಚ್ಛಂದವಾಗಿ ಸೆಂಥಿಲ್ ಕುಮಾರ್ ಕ್ಯಾಮೆರಾ `ಹಾರಾಡಿದೆ~. ಇನ್ನು ಎಂ.ಎಂ.ಕೀರವಾಣಿ ಸಂಗೀತ ಅನುಭವಿಯೊಬ್ಬರ ಆಟ. ಆದರೆ ನಾಣಿ ತೀರಿಕೊಂಡ ನಂತರದ ಬಿಂದುವಿನ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ. ಆ ಸನ್ನಿವೇಶ ಇನ್ನಷ್ಟು ಭಾವನಾತ್ಮಕವಾಗಿ ಮೂಡಿ ಬರಬೇಕಿತ್ತು.

ಹೇಳಿದ್ದೇ ಕತೆ ಹೇಳಿ ನಾಯಕ ನಟರನ್ನು ನೊಣಗಳಂತೆ ಬಿಂಬಿಸುತ್ತಿರುವ ಈ ಹೊತ್ತಿನಲ್ಲಿ `ನೊಣ~ವೊಂದು ನಾಯಕನಾಗಿದೆ! ಕತೆಯಿಲ್ಲ ಎಂದು ಹಲುಬುವವರಿಗೆ ಇದೊಂದು ಉತ್ತಮ ನೀತಿಕತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT