ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿಕಾಂಬೆ ದರ್ಶನಕ್ಕೆ ಜನಜಾತ್ರೆ

Last Updated 16 ಜನವರಿ 2013, 9:28 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕಿನ ಅಳ್ವೆಕೋಡಿಯಲ್ಲಿ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಪುಷ್ಯ ಶುಕ್ಲ ಚತುರ್ಥಿಯ ದಿನವಾದ ಮಂಗಳವಾರ ಬೆಳಿಗ್ಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.

45 ವರ್ಷಗಳ ನಂತರ ನಡೆಯುತ್ತಿರುವ ಜಾತ್ರೆಯ ಪೂರ್ವಭಾವಿಯಾಗಿ ಸೋಮವಾರ ರಾತ್ರಿಯಿಡೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿವಿಧ ಹೋಮ, ಹವನ, ಸ್ಥಳಶುದ್ಧಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಶಿರಾಲಿ ಚಿತ್ರಾಪುರ ಮಠದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ನಡೆದವು

ದೇವಿಗೆ ರೇಷ್ಮೆ ಸೀರೆಯುಡಿಸಿ, ಒಡವೆಗಳಿಂದ ಶೃಂಗರಿಸಲಾಗಿತ್ತು. ಪ್ರಸನ್ನಚಿತ್ತಳಾದ ದೇವಿಯು ಭಟ್ಕಳ ಸೇರಿದಂತೆ ಜಿಲ್ಲೆಯ ಸಮಸ್ತ ಭಕ್ತರನ್ನು ಹರಸಲು ಗದ್ದುಗೆಯನ್ನೇರಿದಾಗ ನೆರೆದ ಜನರು ಮಾರಿಕಾಂಬೆಯನ್ನು ಶ್ರದ್ಧಾಭಕ್ತಿಯಿಂದ ಕಣ್ತುಂಬಿಕೊಂಡರು.

ದೇವಸ್ಥಾನದ ಪ್ರಧಾನ ಅರ್ಚಕ ಗೋವರ್ಧನ ಪುರಾಣಿಕ ಹಾಗೂ ವೈದಿಕರ ತಂಡದವರು ಗದ್ದುಗೆಯೇರಿದ ಮಾರಿಕಾಂಬೆಗೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಿಯ ದರ್ಶನಕ್ಕೆ ಸರತಿಯ ಸಾಲಿನಲ್ಲಿ ನಿಂತಿದ್ದ ಸಾವಿರಾರು ಕ್ತರು ಮಾರಿಕಾಂಬೆಯ ದರ್ಶನ ಮಾಡಿದರು. ಭಕ್ತರು ಸೇವೆ, ಪೂಜೆ, ಕಾಣಿಕೆಗಳನ್ನು ಸಲ್ಲಿಸಿ ಕೃತಾರ್ಥರಾದರು. ಚಿತ್ರಾಪುರ ಮಠದ ಶ್ರೀಗಳು ಆಶೀರ್ವಚನ ನೀಡಿದರು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ದೈಮನೆ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮ ಮೊಗೇರ್, ಟ್ರಸ್ಟಿ ರಾಮನಾಥ ಪೈ ಮುಂತಾದವರು ಪಾಲ್ಗೊಂಡಿದ್ದರು. ನಂತರ ಅನ್ನಸಂತರ್ಪಣೆ ನಡೆಯಿತು.

ಗಣ್ಯರಿಂದ ದೇವಿ ದರ್ಶನ: ಮಾರಿಜಾತ್ರೆಗೆ ಮಂಗಳವಾರ ಸಂಜೆ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಶಾಸಕ ಜೆ.ಡಿ.ನಾಯ್ಕ, ಶ್ರೀಪಾದ ಕಾಮತ್ ಹಾಗೂ ಅನೇಕ ಗಣ್ಯರು ಭೇಟಿ ನೀಡಿ ಮಾರಿಕಾಂಬೆ ದರ್ಶನ ಪಡೆದು ಪೂಜೆ ಸಲ್ಲಿಸಿದರು

ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧಿರಾಜ ಶ್ರೀಪಾದ ವಡೇರ್, ಆರ್.ವಿ. ದೇಶಪಾಂಡೆ ಹಾಗೂ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಾ ಮೊಗೇರ್ ಅವರನ್ನು ಶಾಲು ಹೊದೆಸಿ ಸನ್ಮಾನಿಸಿದರು. ನಂತರ ಮಾರಿಕಾಂಬೆ ದರ್ಶನ ಮಾಡಿದ ಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT