ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯಕಾರಕದ ಪತ್ತೆಗೆ ಹೊಸ ಸಾಧನ

ವಿಜ್ಞಾನ ಲೋಕದಿಂದ
Last Updated 20 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ರಾಸಾಯನಿಕ ಕ್ರಿಯೆ ಮುಗಿದರೂ ಪಲಾಡಿಯಮ್‌ ಬದಲಾಗದೆ ಹಾಗೇ ಉಳಿಯುತ್ತದೆ. ಈ ಗುಣವೇ ಅದನ್ನು ಅನೇಕ ಸಂಶೋಧನೆಗಳಲ್ಲಿ ಮುಖ್ಯವಾಗಿಸಿದೆ.

ನಮಗೆ ಅಷ್ಟಾಗಿ ತಿಳಿದಿರದಂಥ ಒಂದು ಲೋಹ ಪಲಾಡಿಯಮ್. ಆದರೆ ಇದನ್ನು ನಾವು ನಿತ್ಯ ಬಳಸುವ ಔಷಧಗಳ ತಯಾರಿಕೆಯಲ್ಲಿ ಹಾಗೂ ವಾಹನಗಳು ಉಗಿಯುವ ಹೊಗೆಯಲ್ಲಿರುವ ಅಪಾಯಕಾರಿ ವಸ್ತುಗಳ ಪ್ರಮಾಣವನ್ನು ತಗ್ಗಿಸಲು ಉದಾರವಾಗಿ ಬಳಸಲಾಗುತ್ತದೆ. ಈ ಪಲಾಡಿಯಮ್ ನಮ್ಮ ಆಹಾರದಲ್ಲಿ ಸೇರಿದಾಗ ಅದು ಆರೋಗ್ಯದ ಮೇಲೆ ಉಂಟುಮಾಡುವ ಪರಿಣಾಮ ಗಂಭೀರವೂ ಅಪಾಯ ಕಾರಿಯೂ ಆಗಬಲ್ಲದು. ಹಾಗಾಗಿ ನಮ್ಮ ಸುತ್ತಲಿನ ವಾತಾವರಣದಲ್ಲಿ ಪಲಾಡಿ ಯಮ್  ಪ್ರಮಾಣ ವೇನಿದೆ ಎಂದು ತಿಳಿಯು ವುದು ಅತ್ಯಂತ ಅವಶ್ಯಕ.

ಇಂಥ ಲೋಹ ವೊಂದರ ಇರುವಿಕೆಯನ್ನು ಪತ್ತೆಹಚ್ಚಲು ಐಐಎಸ್‌ಸಿ ಸಂಶೋಧಕರ ತಂಡ ವೊಂದು ಮಾರ್ಗವನ್ನು ಕಂಡು ಕೊಂಡಿದೆ. ಈಗಿರುವ ತಂತ್ರಜ್ಞಾನಗಳಿ ಗಿಂತ ಸರಳವೂ ಅಗ್ಗವೂ ಆದ ಈ ವಿಧಾನವು, ಬಹಳ ಸಣ್ಣ ಪ್ರಮಾಣ ದಲ್ಲಿರುವ ಪಲಾಡಿಯಮ್ ಅನ್ನು ಕೂಡ ಕಂಡುಹಿಡಿಯುತ್ತದೆ. ಪಲಾಡಿಯಮ್ ಪ್ಲಾಟಿನಮ್ ಮೂಲಧಾತುಗಳ ವರ್ಗಕ್ಕೆ ಸೇರಿದೆ. ಸಾವಯವ ರಸಾಯನಶಾಸ್ತ್ರ (Organic Chemistry) ಪ್ರಯೋಗಗಳಲ್ಲಿ ರಾಸಾಯನಿಕ ಕ್ರಿಯೆಯ ವೇಗವರ್ಧಿಸಲು ಇದನ್ನು ಬಳಸ ಲಾಗುತ್ತದೆ . ಆದರೆ ಇದು ರಾಸಾಯನಿಕ ಕ್ರಿಯೆ ಮುಗಿದರೂ ತಾನು ಮಾತ್ರ ಬದಲಾಗದೆ ತಣ್ಣಗೆ ಹಾಗೇ ಉಳಿಯುತ್ತದೆ. ಪಲಾಡಿಯಮ್‌ನ ಈ ಗುಣವೇ ಅದನ್ನು ಅನೇಕ ಸಂಶೋಧನೆಗಳಲ್ಲಿ ಮುಖ್ಯವಾಗಿಸಿದೆ.

ಔಷಧಗಳ ವಿನ್ಯಾಸದಲ್ಲಿ ಮತ್ತು ವಾಹನಗಳಿಂದ ಹೊರಸೂಸುವ ಇಂಗಾಲದ ಡೈ ಆಕ್ಸೈಡ್ , ನೈಟ್ರೋಜನ್ ಆಕ್ಸೈಡ್, ಹೈಡ್ರೋಕಾರ್ಬನ್‌ಗಳ ಪ್ರಾಮಾಣವನ್ನು ತಗ್ಗಿಸವಲ್ಲಿ ಇದು ಪ್ರಾಮುಖ್ಯತೆ ಪಡೆದದ್ದು ಇದೇ ಕಾರಣಕ್ಕೆ. ತಮಾಷೆಯೆಂದರೆ, ಪಲಾಡಿ ಯಮ್‌ನ ಅತಿಯಾದ ಬಳಕೆಯಿಂದಾಗಿ ವಾತಾವರಣದಲ್ಲಿ ಅದರ ಪ್ರಮಾಣವೇ ಅಧಿಕವಾಗಿದ್ದು, ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.

ಅಲ್ಲದೆ ಇದು ಸುಲಭವಾಗಿ ಕರಗುವುದರಿಂದ ಆಹಾರ ಸರಪಳಿಯನ್ನು ನಿರಾಯಾಸವಾಗಿ ಪ್ರವೇಶಿಸಿ ದೇಹದೊಳಗೆ ತುಂಬಿ ಕೊಳ್ಳುತ್ತದೆ. ಇದನ್ನು ಗಮನದಲ್ಲಿಟ್ಟು ಕೊಂಡೇ  ಒಬ್ಬ ಮನುಷ್ಯ ಸೇವಿಸುವ ಆಹಾರದಲ್ಲಿ ಪಲಾಡಿಯಮ್ ಪ್ರಮಾಣ 15 ಮೈಕ್ರೋ ಗ್ರಾಂಗಿಂತ ಕಡಿಮೆ ಇರಬೇಕೆಂದು ನಿರ್ಭಂಧಿಸಲಾಗಿದೆ. ಔಷಧ ತಯಾರಿಕೆ ಯಲ್ಲಿಯೂ ಸಹ ಪಲಾಡಿಯಮ್ 10 ಪಿಪಿಎಂ ( ಹತ್ತು ಲಕ್ಷದಲ್ಲೊಂದು ಭಾಗ) ಗಿಂತಲೂ ಅಧಿಕವಿರುವಂತಿಲ್ಲ .

ಐಐಎಸ್‌ಸಿ ಸಂಶೋಧಕರು ಅಭಿವೃದ್ಧಿಪಡಿಸಿರುವ ಹೊಸ ಪಲಾಡಿ ಯಮ್ ಸೆನ್ಸರ್‌ನ ಉಪಯೋಗಗಳು ಹಲವು. ಉದಾಹರಣೆಗೆ, ಇದು ನಲ್ಲಿ ಅಥವಾ ಕೆರೆಯ ನೀರಿನಲ್ಲಿರುವ ಪಲಾಡಿಯಮ್ ಪ್ರಮಾಣವನ್ನು ಕಂಡುಹಿಡಿಯಬಲ್ಲದು. ಅಲ್ಲದೆ, ಪ್ರಯೋಗಾಲಯದಲ್ಲಿ ಇದನ್ನು ಶೇಖರಿಸಲು ಬಳಸುವ ಸಾಧನಗಳಲ್ಲಿ ಉಳಿದಿರುವ ಅತಿ ಸಣ್ಣ ಪ್ರಮಾಣದ ಪಲಾಡಿಯಮ್ ಅನ್ನೂ ಈ ಸೆನ್ಸರ್ ಗುರುತಿಸಬಲ್ಲದು.

ಈ ಹಿಂದೆ ಅಲ್ಪ ಪ್ರಮಾಣದಲ್ಲಿರುವ ಪಲಾಡಿಯಮ್ ಅಯಾನುಗಳನ್ನು ಕಂಡುಹಿಡಿಯಲು ಅನೇಕ ವಿಧಾನ ಗಳನ್ನು ಬಳಸಲಾಗುತ್ತಿತ್ತು. ಆದರೆ, ಇವು ಬಹಳ ದುಬಾರಿ ಮತ್ತು ಇವುಗಳನ್ನು ಬಳಸುವುದು ಕಷ್ಟಸಾಧ್ಯ. ಐಐಎಸ್‌ಸಿಯ ಶಂತನು ಭಟ್ಟಾಚಾರ್ಯ ಅವರ ತಂಡದ ಈ ಅನ್ವೇಷಣೆಯು ಈ ಸಾಧನಗಳಿಗಿಂತ ಉತ್ತಮವಾದದ್ದು. ಅದು ಕ್ಷಣಮಾತ್ರದಲ್ಲಿ ಪಲಾಡಿಯಮ್‌ನ ಅಪಾಯಕಾರಿ ಪ್ರಬೇಧಗಳನ್ನು ಸ್ಪಷ್ಟವಾಗಿ ಬೇರೆಗೊಳಿಸಿ ಗುರುತಿಸಬಲ್ಲದು.

ಇದರಲ್ಲಿ ಪಲಾಡಿಯಮ್ ಅನ್ನು ಕಂಡುಹಿಡಿಯಲು ಅತಿನೇರಳೆ/ಕಣ್ಣಿಗೆ ಕಾಣುವ ಬೆಳಕಿನ ತರಂಗ ಮತ್ತು ಫ್ಲುರೋಸೆಂಟ್ ಕಿರಣಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ಅನ್ವೇಷಣೆ ಯಲ್ಲಿ ಪಾಲ್ಗೊಂಡ ನೀಲಾಂಜನ್ ಡೇ ಹೇಳುವಂತೆ, ‘ಅತಿನೇರಳೆ/ಕಣ್ಣಿಗೆ ಕಾಣುವ ಬೆಳಕಿನ ತರಂಗ ಮತ್ತು ಫ್ಲುರೋಸೆಂಟ್ ಕಿರಣಗಳು ಎರಡನ್ನೂ ಈ ಪ್ರಯೋಗದಲ್ಲಿ ಬಳಸುವುದು ಸೂಕ್ತ. ಏಕೆಂದರೆ, ಪೊಲಾಡಿಯಮ್ ಅನ್ನು ಕಣ್ಣಿಗೆ ಕಾಣುವಂತೆ ಪತ್ತೆ ಮಾಡುವುದು ಉಪಯುಕ್ತವೇ ಆದರೂ ಅದರಿಂದ ದೇಹದೊಳಗಿನ ಜೀವಕೋಶಗಳಲ್ಲಿ ಅಡಗಿರುವ ಪೊಲಾಡಿಯಮ್‌ನ ಪತ್ತೆ ಅಸಾಧ್ಯ. ಹಾಗಾದಾಗ ಫ್ಲುರೋಸೆಂಟ್ ವಿಧಾನ ಸಹಾಯಕ್ಕೆ ಬರುತ್ತದೆ’

ಈ ಅನ್ವೇಷಣೆಯಿಂದ ಇದಕ್ಕಿಂತ ಹೆಚ್ಚಿನ ಪ್ರಯೋಜನವಿದೆ. ಈ ಸಾಧನದಿಂದ ಔಷಧ, ನೀರು, ಮತ್ತು ಸಸ್ತನಿಗಳ ಜೀವಕೋಶಗಳಲ್ಲಿರುವ ಪಲಾಡಿಯಮ್ ಪ್ರಮಾಣವನ್ನೂ ಗುರುತಿಸಬಹುದು. ಮತ್ತು ಈ ಕೆಲಸವನ್ನು ಹೆಚ್ಚು ಚುರುಕಾಗಿಯೂ ತ್ವರಿತವಾಗಿಯೂ ಮಾಡಲು ಫಿಲ್ಟರ್ ಪೇಪರ್‌ಗಳಿಂದ ತಯಾರಿಸಲಾದ ಸಾಗಿಸಬಲ್ಲ ಪಟ್ಟಿಗಳನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ.

ಗುಬ್ಬಿ ಲಾಬ್ಸ್ (ಸಂಶೋಧನಾ ಚಟುವಟಿಕೆಗಳ ಬಗ್ಗೆ ತೊಡಗಿಸಿಕೊಂಡಿರುವ ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT