ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು: ಸಿಬ್ಬಂದಿಗೆ ಕಿರುಕುಳ-ಲಂಚದ ಆರೋಪ

Last Updated 11 ಡಿಸೆಂಬರ್ 2012, 10:49 IST
ಅಕ್ಷರ ಗಾತ್ರ

ಮಾಲೂರು: ಹೆಚ್ಚಳ ಬಡ್ತಿ ವೇತನ ಬಿಡುಗಡೆ ಮಾಡಲು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ 50 ಸಾವಿರ ರೂಪಾಯಿ ಲಂಚ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಅಡಿಗೆ ಸಿಬ್ಬಂದಿ ನಾರಾಯಣಸ್ವಾಮಿ ಆರೋಪಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿನ ಕುಂದು ಕೊರತೆ ಸಭೆಯಲ್ಲಿ ಮಾಸ್ತಿ ಗಾಮದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಅಡಿಗೆ ನೌಕರ ನಾರಾಯಣಸ್ವಾಮಿ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ವೀರಾಪುರ್ ಅಡಿಗೆ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ. ತಮಗೆ ಬರಬೇಕಾದ ಬಡ್ತಿ ವೇತನ 2 ಲಕ್ಷ ರೂಪಾಯಿ ಬಿಡುಗಡೆ ಮಾಡಲು 50 ಸಾವಿರ ರೂಪಾಯಿ ನೀಡುವಂತೆ ಒತ್ತಾಯಿಸಿ ಬಡ್ತಿ ವೇತನ ಬಿಡುಗಡೆ ಮಾಡದೆ ವಿಳಂಬ ಮಾಡುತ್ತಿದ್ದಾರೆ. ನಿತ್ಯ ಕಚೇರಿಗೆ ಭೇಟಿ ನೀಡಿ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ, ಸರ್ಕಾರಿ ವಸತಿ ಗೃಹದಲ್ಲಿ ಸೇರಿಕೊಂಡು ಬಾಗಿಲಿಗೆ ಬೀಗ ಹಾಕಿ ಯಾರ ಕೈಗೂ ಸಿಗದಂತೆ ಕಾಲಕಳೆಯುತ್ತಾರೆ ಎಂದು ತಮ್ಮ ಅಳಲು ವ್ಯಕ್ತಪಡಿಸಿದರು.

ವಿದ್ಯಾರ್ಥಿ ನಿಲಯಗಳಲ್ಲಿ ರಾತ್ರಿ ವೇಳೆ ವಿಶೇಷ ತರಗತಿ ನಡೆಸಲು ಶಿಕ್ಷಕರು ಬರುತ್ತಿಲ್ಲ. ಕೆಲ ವಿದ್ಯಾರ್ಥಿ ನಿಲಯಗಳಲ್ಲಿ ಶೌಚಾಲಯ ಸೌಲಭ್ಯವಿಲ್ಲ. ಸಿಬ್ಬಂದಿ ಕೊರತೆ ಇದೆಯೆಂದು ವಾರ್ಡ್‌ನ್‌ಗಳು ಸಮಸ್ಯೆಗಳ ಬಗ್ಗೆ ತಿಳಿಸಿದರು.ತಾ.ಪಂ. ಕಾರ್ಯನಿರ್ವಣಾಧಿಕಾರಿ ಶ್ರೀನಿವಾಸ್ ಅಡುಗೆ ನೌಕರ ನಾರಾಯಣಸ್ವಾಮಿ ಮತ್ತು ವಿಸ್ತರಣಾಧಿಕಾರಿ ವೀರಾಪುರ್ ಬಳಿ ಪೂರ್ಣ ಮಾಹಿತಿ ಪಡೆದು ಜಿಲ್ಲಾಧಿಕಾರಿ ಗಮನಕ್ಕೆ ತರಬೇಕು ಎಂದು ಸಾಮಾಜಿಕ ಸ್ಥಾಯಿ ನ್ಯಾಯ ಸಮಿತಿ ಅಧ್ಯಕ್ಷ ಎಸ್.ವಿ.ಲೋಕೇಶ್ ಸೂಚಿಸಿದರು.

ತಾ.ಪಂ. ಅಧ್ಯಕ್ಷ ಚಂದ್ರಪ್ಪ ಮಾತನಾಡಿ ವಿದ್ಯಾರ್ಥಿ ನಿಲಯಗಳಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ವಿದ್ಯಾರ್ಥಿಗಳಿಗೆ ತಲುಪಿಸಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.
ವಿಸ್ತರಣಾಧಿಕಾರಿ ವೀರಾಪುರ್ ಮಾತನಾಡಿ, ತಾಲ್ಲೂಕಿನಲ್ಲಿ ಆರು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿದ್ದು, ಕೆಲ ಕಡೆ ನೀರಿನ ಸಮಸ್ಯೆ ಹೊರತುಪಡಿಸಿದರೆ ಯಾವ ಸಮಸ್ಯೆ ಇಲ್ಲ.

ಪಟ್ಟಣದ ಬಾಲಕರ ವಿದ್ಯಾರ್ಥಿ ನಿಲಯ ತೆರವುಗೊಳಿಸಿ ರೂ.1.50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ, ದೇವರಾಜ ಅರಸು ಹಿಂದುಳಿದ ವರ್ಗಗಳ ಕಚೇರಿ ನಿರ್ಮಾಣ ಮಾಡಲಾಗುವುದು. ರೂ. 5ಲಕ್ಷ ವೆಚ್ಚದಲ್ಲಿ ಗೊಲ್ಲರ ಭವನ, ಉಚಿತ ನಿವೇಶನ ನೀಡಿದರೆ ರೂ. 5ಲಕ್ಷ ವೆಚ್ಚದಲ್ಲಿ ವಹ್ನಿಕುಲ ಕ್ಷತ್ರಿಯರ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಹೇಳಿದರು.ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಾಗವೇಣಿ, ಇ.ಒ ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಬಾನುಮತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT