ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ಮೋಹ

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಾವಿನ ತೋಪಿನಲ್ಲೆಗ ಹಣ್ಣುಗಳ ಮೆರವಣಿಗೆ ಜೋರಾಗಿಲ್ಲದಿದ್ದರೂ ನಗರದ ಹೋಟೆಲ್‌ಗಳಲ್ಲಿ, ಜ್ಯೂಸ್ ಅಂಗಡಿಗಳಲ್ಲಿ ಮಾವುಗಳು ಎದ್ದು ಕಾಣುತ್ತವೆ. ದಿಟ್ಟಿಸಿ ನೋಡಿದಂತೆಲ್ಲಾ ಒಂದೊಂದು ಭಾವ ಹುಟ್ಟಿಸುವ ಮಾವಿನ ಕಾಯಿಗಳು ಮರಕ್ಕೆ ತೋರಣ ಕಟ್ಟಿದಂತೆ ಕಾಣಿಸುತ್ತವೆ. ಹಣ್ಣುಗಳ ರಾಜ ಮಾವಿಗೆ ಎಲ್ಲರೂ ಮನಸೋಲುತ್ತಾರೆ. ಮಾವಿನ ಹಣ್ಣನ್ನು ಇಡಿಯಾಗಿ ತಿನ್ನುವಾಗ ಸಿಕ್ಕುವ ಮಜಕ್ಕಿಂತ ಮಾವಿನಿಂದ ತಯಾರಿಸಿದ ಖಾದ್ಯಗಳನ್ನು ಸವಿಯುವಾಗ ಸಿಕ್ಕುವ ಗಮ್ಮತ್ತೇ ಬೇರೆ.

ಮನೆಯಲ್ಲಿ ತಯಾರಿಸುವ ಮಿಡಿ ಮಾವಿನಕಾಯಿ ಉಪ್ಪಿನಕಾಯಿಯ ರುಚಿಯನ್ನೊಮ್ಮೆ ನೆನಪಿಸಿಕೊಳ್ಳಿ. ಉಪ್ಪಿನಕಾಯಿ ಜಾಡಿಗೆ ಕೈ ಹಾಕಿ ತೋರು ಬೆರಳಿಗೆ ಅಂಟಿದ ಉಪ್ಪಿನಕಾಯಿ ರಸವನ್ನು ಆಸ್ವಾದಿಸುವಾಗ ನಾಲಗೆ ತಂತಾನೆ ಲೊಟ್ಟೆ ಹೊಡೆಯುತ್ತದೆ. ಮಾವಿನಿಂದ ಉಪ್ಪಿನಕಾಯಿ, ಜ್ಯೂಸ್ ಅಷ್ಟೇ ಅಲ್ಲದೇ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಸಸ್ಯಾಹಾರ ಮತ್ತು ಮಾಂಸಾಹಾರ ಎರಡು ಬಗೆಯಲ್ಲೂ ಮಾವಿನ ಖಾದ್ಯಗಳನ್ನು ಮಾಡಬಹುದು.

ಮಾವಿನಿಂದ ತಯಾರಿಸಿದ ಆಹಾರ ಖಾದ್ಯ ಇಷ್ಟಪಡುವವರನ್ನು ಗಮನದಲ್ಲಿಟ್ಟುಕೊಂಡು ನಗರದ ಕೆಲವು ಹೋಟೆಲ್‌ಗಳು `ಮ್ಯಾಂಗೊ ಮೆನು' ಸಿದ್ಧಪಡಿಸುತ್ತಿವೆ. ಕೆಲವು ರೆಸ್ಟೋರೆಂಟ್‌ಗಳಲ್ಲಿ ಅದಾಗಲೇ ಮಾವಿನ ಖಾದ್ಯಗಳ ಉತ್ಸವ ನಡೆಯುತ್ತಿದೆ. ದೇಸಿ ಖಾದ್ಯಗಳ ಜತೆಗೆ ಕಾಂಟಿನೆಂಟಲ್ ಖಾದ್ಯಗಳು ಈ ಮೆನುವಿನಲ್ಲಿ ಸ್ಥಾನ ಪಡೆದುಕೊಂಡಿವೆ.

ಮಾವಿನ ತೊಕ್ಕು, ಸೀಕರಣೆ ಇವಿಷ್ಟೇ ಅಲ್ಲದೇ ಚಿಕನ್ ಇನ್ ಗ್ರೀನ್ ಮ್ಯಾಂಗೊ, ಚಿಕನ್ ಮ್ಯಾಂಗೋ ರೈಸ್, ಮ್ಯಾಂಗೊ ಚಿಕನ್ ಸಲಾಡ್, ಮ್ಯಾಂಗೊ ಆ್ಯಪಲ್ ಸ್ಮೂತಿ, ಮ್ಯಾಂಗೊ ಕೊಲಾಡ, ಕ್ರೀಂ, ಕ್ರಂಚ್, ಕರ‌್ರಿ, ಕಸ್ಟರ್ಡ್, ಮ್ಯಾಂಗೊ ಅಪ್‌ಸೂಡ್ ಡೌನ್ ಕೇಕ್, ಪ್ರಾನ್ಸ್ ಮ್ಯಾಂಗೊ ಸಲಾಡ್, ಹನಿ ಮ್ಯಾಂಗೊ ಪೈ, ಸ್ಟೈಸಿ ಚಿಕನ್ ವಿದ್ ಮ್ಯಾಂಗೊ, ಸ್ಪೈಸಿ ಮ್ಯಾಂಗೊ ಶ್ರಿಂಪ್, ಮ್ಯಾಂಗೊ ಸಾಲ್ಸಾ, ಮ್ಯಾಂಗೊ ರೈಸ್, ಮ್ಯಾಂಗೊ ರಾಯ್ತ, ಮ್ಯಾಂಗೊ ಪಡ್ಡಿಂಗ್... ಅಬ್ಬಾ! ಒಂದೇ ಎರಡೇ? ಮಾವಿನಿಂದ ತಯಾರಾದ ನೂರಾರು ಖಾದ್ಯಗಳು ಮಾವು ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ.

`ಮಾವಿನ ಸೀಸನ್‌ನಲ್ಲಿ ನಮ್ಮ ಹೋಟೆಲ್‌ನಲ್ಲಿ ಮ್ಯಾಂಗೊ ಮೆನು ಸಿದ್ಧಪಡಿಸುತ್ತೇವೆ. ಸೂಪ್, ಸ್ಟಾರ್ಟರ್ಸ್, ಮುಖ್ಯ ಮೆನು ಹಾಗೂ ಡೆಸೆರ್ಟ್‌ಗಳೆಲ್ಲವೂ ಸಂಪೂರ್ಣ ಮಾವುಮಯ. ಬೇಸಿಗೆಯ ಧಗೆ ನೀಗಲು `ಆಮ್ ಕಾ ಪನ್ನಾ' ಒಳ್ಳೆ ಪಾನೀಯ. ಮಾವಿನಕಾಯಿ ರಸ ತೆಗೆದು ಅದಕ್ಕೆ ಸ್ವಲ್ಪ ಸಕ್ಕರೆ, ನೀರು, ಜೀರಿಗೆ ಹಾಕಿ ತಯಾರಿಸುವ ಈ ಪಾನೀಯ ಧಗೆಗೆ ಅತ್ಯುತ್ತಮ. ಇನ್ನು ನಮ್ಮಲ್ಲಿ ಮಾವಿನ ಖಾದ್ಯಗಳನ್ನು ತಯಾರಿಸಲು ಹೆಚ್ಚಾಗಿ ಆಲ್ಫೋನ್ಸಾ ತಳಿಯ ಮಾವು ಬಳಸುತ್ತೇವೆ' ಎನ್ನುತ್ತಾರೆ `ದಿ ಓಶಿಯನ್ ಪರ್ಲ್' ಹೋಟೆಲ್‌ನ ವ್ಯವಸ್ಥಾಪಕ ಬಿ.ಎನ್. ಗಿರೀಶ್.

`ರಾಜಸ್ತಾನಿ ಶೈಲಿಯಲ್ಲಿ ತಯಾರಿಸುವ `ಆಲ್ ಕಾ ಆಮ್ಲಾನಾ' ಪಾನೀಯಕ್ಕೆ ಮಾವಿನ ಹಣ್ಣಿನ ಜತೆಗೆ ಚಿಲ್ಲಿ ಮತ್ತು ಹುಣಸೆ ಬಳಸಲಾಗುತ್ತದೆ. ಸ್ಟಾಟರ್ಸ್‌ನಲ್ಲಿ ಬರುವ `ಆಮ್ ಚಪ್ಲಿ ಕಬಾಬ್' ಅನ್ನು ಕುರಿಯ ತೊಡೆ ಮಾಂಸದಿಂದ ಸಿದ್ಧಪಡಿಸಲಾಗುತ್ತದೆ. ಕುರಿಮಾಂಸಕ್ಕೆ ಸ್ವಲ್ಪ ಉಪ್ಪುಖಾರ ಹಚ್ಚಿ ನಂತರ ಅದಕ್ಕೆ ಮಾವು ಮತ್ತು ಕ್ಯಾರೆಟ್‌ನ ಸ್ವಾದ ಸೇರಿಸಲಾಗುತ್ತದೆ. ಮುಖ್ಯ ಮೆನುವಿನಲ್ಲಿ `ಮಾಮಿಡಿ ಅನಾಸಪಂಡು ಪುಲುಸು', `ದಕ್ನಿ ಆಮ್ ಕಿ ಮಚ್‌ಲೀ', `ಮ್ಯಾಂಗೊ ಚಿಕನ್' ಮೊದಲಾದ ತಿನಿಸುಗಳ ಆಯ್ಕೆ ಗ್ರಾಹಕರಿಗಿದೆ' ಎಂದು ಮಾತು ಸೇರಿಸುತ್ತಾರೆ ಅವರು.

ಒನ್ ಎಂಜಿ ಮಾಲ್‌ನಲ್ಲಿರುವ `ಬ್ಲೈಮಿ' ರೆಸ್ಟೋರಾ ಐರಿಷ್ ಹಾಗೂ ಇಂಗ್ಲಿಷ್ ಶೈಲಿಯ ಖಾದ್ಯಗಳಿಗೆ ಹೆಸರುವಾಸಿ. ಈ ರೆಸ್ಟೋರಾ `ಮ್ಯಾಂಗೊ ಮೇನಿಯಾ ಮೆನು' ತಯಾರಿಸಿದೆ. ಮಾವಿನ ಹಣ್ಣಿನ ಪ್ರಿಯರಿಗೆ ಇಲ್ಲಿ ವಿವಿಧ ಬಗೆಯ ಮಾವಿನ ಖಾದ್ಯಗಳ ಆಯ್ಕೆಯಿದೆ.
`ಮಾವಿನ ಊಟದ ಪಯಣ ಆರಂಭಕ್ಕೂ ಮುನ್ನ ಗ್ರಾಹಕರಿಗೆ `ಸ್ಟೈಸಿ ಮ್ಯಾಂಗೊ ಸೂಪ್' ನೀಡುತ್ತೇವೆ.

ಶುಂಠಿ ಸ್ವಾದವಿರುವ ಈ ಸೂಪ್ ಹಸಿವು ಕೆರಳಿಸಿ ಊಟಕ್ಕೆ ಉತ್ತಮ ಮುನ್ನುಡಿ ಬರೆಯುತ್ತದೆ. ಇದಲ್ಲದೇ `ಟೈಗರ್ ಪ್ರಾನ್ಸ್ ವಿದ್ ಮ್ಯಾಂಗೊ ಮಾಯೊ' ಸೂಪ್‌ಗಳನ್ನು ಸವಿಯಬಹುದು. ಆನಂತರ `ಸ್ಮೋಕ್ಡ್ ಚಿಕನ್ ಮ್ಯಾಂಗೊ ಸಲಾಡ್' ರುಚಿ ನೋಡಬಹುದು' ಎಂದು ಮ್ಯಾಂಗೊ ಮೆನುವಿನ ವಿವರಣೆ ನೀಡುತ್ತಾರೆ ರೆಸ್ಟೋರಾದ ಬಾಣಸಿಗ ಸೋಮ್‌ವೀರ್.

`ಮುಖ್ಯ ಮೆನುವಿನಲ್ಲಿ `ಚಿಕನ್ ಅಂಡ್ ಮ್ಯಾಂಗೊ ಸ್ಟೀವ್', `ಮ್ಯಾಂಗೊ ಸಾಲ್ಸಾ' ನಂತರ `ಮ್ಯಾಂಗೊ ಅಂಡ್ ಚಿಲ್ಲಿ ಪನ್ನಾ ಕೊಟ್ಟಾ' ಡೆಸರ್ಟ್ ಸವಿದು ಊಟವನ್ನು ಸಂಪನ್ನಗೊಳಿಸಿಕೊಳ್ಳಬಹುದು' ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT