ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹೇಶ್ವರ್ ಕೈಮಗ್ಗದ ವಸ್ತ್ರವೈಭವ

Last Updated 18 ಜುಲೈ 2012, 19:30 IST
ಅಕ್ಷರ ಗಾತ್ರ

ಮಧ್ಯಪ್ರದೇಶದ ಇಂದೋರ್‌ನ ಬಳಿ ಇರುವ ನರ್ಮದೆಯ ದಡದ ಊರು ಮಾಹೇಶ್ವರ್. ಅಲ್ಲಿ ಹೋದರೆ ರಸ್ತೆ ಬದಿಯಲ್ಲೆಲ್ಲ ರೈಲು ಚಲಿಸಿದ ಅನುಭವ. ಲಯಬದ್ಧವಾದ ಲಬ್-ಡಬ್ ಸದ್ದು, ಕಣ್ಣು ಹೊರಳಿಸಿದಲ್ಲೆಲ್ಲ ಗಾಢ ವರ್ಣಗಳಲ್ಲಿ ನೂಲುಗಳೆಲ್ಲ ಮಿಂದಿದ್ದು ಬಿಸಿಲುಗಾಯಿಸಲು ಮಲಗಿರುತ್ತವೆ.  ಇದು ಮಾಹೇಶ್ವರ್ ಸಿಲ್ಕ್ ಅಥವಾ ಕೈ ಮಗ್ಗದ ವಸ್ತ್ರಗಳ ಊರು.

ಇಷ್ಟೇ ಆಗಿದ್ದರೆ ಈ ಊರಿನ ಕತೆ ಇಲ್ಲಿ ಬೇಕಿರಲಿಲ್ಲ. ಆದರೆ ಮಾಹೇಶ್ವರದ ವಸ್ತ್ರವೈಭವ ಇದೀಗ ವಿಶ್ವವ್ಯಾಪಿಯಾಗುತ್ತಿದೆ. ಗುಣಮಟ್ಟ ಹಾಗೂ ಸಾಂಪ್ರದಾಯಿಕ ಕೈಮಗ್ಗದ ನೇಕಾರಿಕೆಗೆ `ಮಾಹೇಶ್ವರ್~ ಹೆಸರುವಾಸಿಯಾಗಿದೆ.

17ನೇ ಶತಮಾನದ ಅಂತ್ಯದಲ್ಲಿ ಹೋಳ್ಕರ್ ರಾಜಕುಟುಂಬದ ಮಹಾರಾಣಿ ಅಹಿಲ್ಯಾದೇವಿ ವಸ್ತ್ರವೈಭವಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರು. ಮಧ್ಯಭಾರತೀಯ ಬಟ್ಟೆಗಳ ಇತಿಹಾಸದಲ್ಲಿ ಮಾಹೇಶ್ವರ್‌ಗೆ ಅಳಿಸಲಾಗದ ಹೆಸರಿದೆ. ಆದರೆ ಸ್ವಾತಂತ್ರ್ಯಾನಂತರ ಕೈಗಾರಿಕೆಗಳ ಭರದಲ್ಲಿ ನೇಕಾರಿಕೆಯೂ ಹಿಂದೆ ಸರಿಯತೊಡಗಿತು.

ಈ ಹಿಂಜರಿಕೆಯ ಕಾರಣ ಕಂಡುಕೊಂಡ ಶಿವಾಜಿ ರಾವ್ ಹೋಲ್ಕರ್ ಒಂದು ಸಂಸ್ಥೆಯನ್ನು ಆರಂಭಿಸಿದರು. ಅದೇ ರೇವಾ. ಕೈಮಗ್ಗದ ನೇಕಾರರನ್ನು ನೇಕಾರಿಕೆಯನ್ನು ಪ್ರೋತ್ಸಾಹಿಸುವುದೇ  ಈ ಸಂಸ್ಥೆಯ ಉದ್ದೇಶವಾಗಿದೆ.

ಮಾಹೇಶ್ವರ್ ವಸ್ತ್ರವೈಭವಕ್ಕೆ ಹಿಂದಿನಂತೆಯೇ ಮಾನ್ಯತೆ ಪಡೆಯುವುದು ಸುಲಭವಾಗಿರಲಿಲ್ಲ. 1979ರಲ್ಲಿ ಈ ಸಂಸ್ಥೆ ಆರಂಭಿಸಿದಾಗ ನೇಕಾರರನ್ನು ಅವರ ಮೂಲ ಕಸುಬು ಬಿಡದಂತೆ ಒಲಿಸುವುದೇ ಸವಾಲಾಗಿತ್ತು. ನಂತರ ಕೆಲವೇ ಮಹಿಳೆಯರು ಈ ಕಸುಬುದಾರಿಕೆಯನ್ನು ಬಿಡಲಾಗದವರು ಮುಂದಾದರು. ತಮ್ಮ ಸಾಂಪ್ರದಾಯಿಕ ಶೈಲಿಯಲ್ಲಿಯೇ ಗುಣಮಟ್ಟವನ್ನು ಕಾಪಾಡಿಕೊಂಡು ಸೀರೆ, ಕುರ್ತಾ, ಸಲ್ವಾರ್‌ಗಳನ್ನು ಸಿದ್ಧಪಡಿಸತೊಡಗಿದರು.

ಆದರೆ ಕೈಮಗ್ಗದ ಸೀರೆ, ಕಸೂತಿ ಕೆಲಸದ ಸೀರೆಗಳನ್ನು ಸಾಕಷ್ಟು ಮಟ್ಟದಲ್ಲಿ ಉತ್ಪಾದಿಸಲು ಆಗುತ್ತಿರಲಿಲ್ಲ. ಕೇವಲ ಕೆಲವೇ ಕೆಲವು ನೇಯ್ದರೂ ವಿಶಿಷ್ಟ ವಿನ್ಯಾಸಗಳಿಂದಾಗಿ ಹೆಸರು ಮಾಡತೊಡಗಿದವು.

ಮಾರಾಟ ಮೇಳಗಳನ್ನು ಆಯೋಜಿಸಲಾಯಿತು. ದಶಕಗಳುರುಳಿದ ನಂತರ ರೇವಾ ಸಂಗ್ರಹಕ್ಕಾಗಿಯೇ ವಿಶೇಷ ಮಳಿಗೆಗಳನ್ನು ಆರಿಸಲಾಯಿತು. ನಿಜವಾಗಿಯೂ ಕೈಮಗ್ಗದ ವಸ್ತ್ರಗಳ ಬಗ್ಗೆ ಆಸ್ಥೆ ಹಾಗೂ ಪ್ರೀತಿಯುಳ್ಳ ಮಳಿಗೆಗಳನ್ನೇ ಆಯ್ಕೆ ಮಾಡಿಕೊಳ್ಳಲಾಯಿತು ಎನ್ನುತ್ತಾರೆ ರೇವಾ ವಿನ್ಯಾಸಕರ ಮುಖ್ಯಸ್ಥೆ ಸುನಂದಾ ದಾವರ್.

ಸೀರೆ ಕೊಳ್ಳುವುದು ಶಾಪಿಂಗ್ ಅಲ್ಲ!
ಸುನಂದಾ ಪ್ರಕಾರ ರೇವಾ ಸಂಗ್ರಹದ ಮಾಹೇಶ್ವರಿ ಸೀರೆ ಕೊಳ್ಳುವುದು ಕೇವಲ ಶಾಪಿಂಗ್ ಮಾತ್ರವಲ್ಲ. ಇದು ಸೇವೆಯೂ ಹೌದು. ರೇವಾ ಸಂಗ್ರಹದ ಯಾವುದೇ ಬಟ್ಟೆಯನ್ನು ಖರೀದಿಸಿದರೂ ಒಂದು ನೇಕಾರರ ಕುಟುಂಬವನ್ನು ಬೆಂಬಲಿಸಿದಂತೆ ಆಗುತ್ತದೆ.
 
ಆ ಸೀರೆಯ ವೆಚ್ಚ ಕಳೆದು, ಉಳಿದ ಲಾಭ ನೇಕಾರರ ಮಕ್ಕಳಿಗಾಗಿ 1989ರಲ್ಲಿ ಆರಂಭಿಸಿದ ಶಾಲೆಗೆ ಹಣ ವಿನಿಯೋಗವಾಗುತ್ತದೆ. ಮಾಹೇಶ್ವರದಲ್ಲಿ ಒಂದು ಸುಸಜ್ಜಿತ ಪ್ರಾಥಮಿಕ ಕೇಂದ್ರವನ್ನೂ ನಡೆಸಲಾಗುತ್ತದೆ. ಸೀರೆಗೆ ಮೌಲ್ಯವನ್ನು ಮಾತ್ರವಲ್ಲ, ಅಮೂಲ್ಯವಾದ ದೇಣಿಗೆ ನೀಡಿದಂತೆ ಎನ್ನುತ್ತಾರೆ ಸುನಂದಾ.

ಇದೀಗ ರೇವಾ ಒಂದು ಸಂಸ್ಥೆಯಲ್ಲ, ಮಹಾಮನೆಯಂತೆ ಬೆಳೆದಿದೆ. ಮೊದಲು ಕೇವಲ ಮಹಿಳೆಯರೇ ನೇಕಾರಿಕೆಯನ್ನು ಕೈಗೊಂಡಿದ್ದರು. ರೇವಾ ಯಶಸ್ಸು ಕಂಡ ನಂತರ ಪುರುಷರೂ ಮೂಲಕಸುಬಿಗೆ ಮರಳುತ್ತಿದ್ದಾರೆ. ಮಾಹೇಶ್ವರದ ವಸ್ತ್ರವೈಭವ ಮತ್ತೆ ಮರುಕಳಿಸುತ್ತಿದೆ. ದೇಶ ವಿದೇಶಗಳಲ್ಲೂ ರೇವಾದ ಮಾರಾಟ ಮೇಳಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಅವರು.

ಬೆಂಗಳೂರಿನಲ್ಲಿ `ಉತ್ಸವ್ ಕೆ ರಂಗ್~ ರೇವಾ ಸಂಗ್ರಹವು ಬೆಂಗಳೂರಿನ ಬಸವನಗುಡಿಯಲ್ಲಿರುವ ಬಸವಾ ಅಂಬರದಲ್ಲಿ ಇದೇ 21ರಿಂದ24ರವರೆಗೆ ವಿಶೇಷ ಮಾರಾಟ ಮೇಳವನ್ನು ಏರ್ಪಡಿಸಿದೆ. ಶ್ರಾವಣ ಮಾಸದಿಂದ ಉತ್ಸವಗಳ ದಿಬ್ಬಣವೇ ಆರಂಭವಾಗುತ್ತದೆ. ಸೀರೆ ಖರೀದಿಯೂ ಭರಾಟೆಯಲ್ಲಿರುತ್ತದೆ.

ಈ ನಿಟ್ಟಿನಲ್ಲಿ ಇಲ್ಲಿ ರೇವಾ ತನ್ನ ಸಂಗ್ರಹದ ಮಾರಾಟವನ್ನು ಏರ್ಪಡಿಸಿದೆ. ಬೆಲೆ 850 ರೂಪಾಯಿಗಳಿಂದ ಆರಂಭವಾಗುತ್ತದೆ. ಅಪ್ಪಟ ಕೈ ಮಗ್ಗದ, ಕೈ ಕಸೂತಿ ಇರುವ, ಬ್ಲಾಕ್ ಪ್ರಿಂಟ್‌ಗಳಿರುವ ವೈವಿಧ್ಯಮಯ ಜವಳಿ ಸಂಗ್ರಹವೇ ಇಲ್ಲಿ ಬರಲಿದೆ. ಹಬ್ಬಕ್ಕೆ ಬಟ್ಟೆ ಖರೀದಿಸಿ, ನೇಕಾರರ ಕುಟುಂಬಗಳಿಗೆ ನೆರವಾಗಿ.
ಹೆಚ್ಚಿನ ಮಾಹಿತಿಗೆ: ಬಸವಾ ಅಂಬರ, ಕನಕಪುರ ರಸ್ತೆ, ಬಸವನಗುಡಿ.
ಬೆಳಿಗ್ಗೆ 10.30ರಿಂದ ಸಂಜೆ 7ರವರೆಗೆ.
ಹೆಚ್ಚಿನ ಮಾಹಿತಿಗೆ: 26561940/ 65461856

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT