ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರಮಾಧ್ಯಮದಲ್ಲಿ ರಮ್ಯ ನಿಸರ್ಗ

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ಹವಾಮಾನ ವೈಪರೀತ್ಯ, ಅರಣ್ಯ ನಾಶದಂಥ ವಿಷಯಗಳು ಇಂದು ಎಲ್ಲೆಡೆ ಚರ್ಚೆಯಾಗುತ್ತಿವೆ. ಆದರೂ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ನಾಶಮಾಡುವುದು ನಡೆದೇ ಇದೆ. ಮತ್ತೊಂದೆಡೆ ಪರಿಸರ ಸಂರಕ್ಷಣೆಗಾಗಿ ಅನೇಕ ಸಂಘ ಸಂಸ್ಥೆಗಳು ದನಿ ಎತ್ತುತ್ತಿವೆ. ಇದಕ್ಕೆ ಕಲಾವಿದರೂ ಹೊರತಾಗಿಲ್ಲ. ಪರಿಸರದ ಉಳಿವಿಗಾಗಿ ಅವರೂ ತಮ್ಮ ಕಾಣಿಕೆ ನೀಡುತ್ತಾ ಬಂದಿದ್ದಾರೆ. ಕುಂಚದಲ್ಲಿ ವೃಕ್ಷಸಂಕುಲದ ಅಳಲನ್ನು ಅನಾವರಣಗೊಳಿಸುತ್ತಿದ್ದಾರೆ.

ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಜ.22ರಿಂದ ಆರಂಭವಾಗಿರುವ `ವ್ಯೆ ಆಫ್ ನೇಚರ್~ ಹೆಸರಿನ ಚಿತ್ರಕಲಾ ಪ್ರದರ್ಶನ ಕೂಡ ಇದಕ್ಕೆ ಉದಾಹರಣೆ.  ಕಲಾವಿದ ರಾಜಕುಮಾರ ಬಿ. ಭಾರಸಿಂಗಿ ಚಿತ್ರಿಸಿರುವ ತೈಲವರ್ಣ ಚಿತ್ರಗಳಲ್ಲಿ ನಿಸರ್ಗದ ರಮಣೀಯತೆ ಇದೆ. ಕಾಡು ಪಕ್ಷಿಗಳ ಜೀವನ ಕ್ರಮವನ್ನು ಬಿಚ್ಚಿಡುವ ಅದ್ಭುತ ಚಿತ್ರಗಳಿವೆ.

ಮಿಶ್ರ ಮಾಧ್ಯಮವನ್ನು ಬಳಸಿ ಮನುಷ್ಯನ ದುರಾಸೆಗೆ ಬಲಿಯಾಗುತ್ತಿರುವ ನಿಸರ್ಗವನ್ನು ಹಲವು ಒಳನೋಟಗಳಲ್ಲಿ ಚಿತ್ರಗಳಾಗಿ ಬಿಂಬಿಸಿದ್ದಾರೆ.

ಜಲವರ್ಣದಲ್ಲಿ ಮೂಡಿರುವ ಹಂಪಿಯ ಸ್ಮಾರಕಗಳ ಚಿತ್ರಗಳು ಭಿನ್ನವಾಗಿದ್ದು, ಗಮನ ಸೆಳೆಯುತ್ತವೆ. ಒಂದೇ ಫ್ರೇಮ್‌ನಲ್ಲಿ ಹಂಪಿಯಲ್ಲಿರುವ ಪ್ರಮುಖ ಸ್ಮಾರಕಗಳನ್ನು ವಿಶಿಷ್ಟವಾಗಿ ಚಿತ್ರಿಸಿದ್ದಾರೆ. ಜೊತೆಗೆ ಬಿ.ಬಿ.ಎಂ.ಪಿ ಕಚೇರಿ, ಲಾಲ್‌ಬಾಗ್‌ನಲ್ಲಿರುವ ಕೆಂಪೇಗೌಡ ಗೋಪುರ, ಬಿಜಾಪುರದ ಗೋಳಗುಮ್ಮಟ, ಜೋಗ್ ಫಾಲ್ಸ್, ಬಾದಾಮಿಯ ಗುಹಾಂತರ ದೇವಾಲಯ ಹೀಗೆ ರಾಜಕುಮಾರರ ಕುಂಚದಲ್ಲಿ ರಮಣೀಯವಾಗಿ ಅನಾವರಣಗೊಂಡಿವೆ.

ಬೀದರ್ ಜಿಲ್ಲೆಯವರಾದ ರಾಜಕುಮಾರ್, ಚಿಕ್ಕವಯಸ್ಸಿನಿಂದಲೇ ಚಿತ್ರಕಲೆಯ ಗೀಳು ಹಚ್ಚಿಕೊಂಡವರು. ಸದ್ಯ ಬಿಬಿಎಂಪಿ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಇವರು ಬಿಡುವಿನ ವೇಳೆಯನ್ನು ತಮ್ಮ ಕಲಾಸೇವೆಗೆ ಮುಡಿಪಾಗಿಟ್ಟಿದ್ದಾರೆ. ನಿಸರ್ಗವನ್ನು ವಸ್ತುವಿಷಯವನ್ನಾಗಿಸಿ ಬರೆದ ಇವರ ಚಿತ್ರವೊಂದಕ್ಕೆ ಆಂಧ್ರದಲ್ಲಿ ನಡೆದ ಅಖಿಲ ಭಾರತ ಚಿತ್ರಕಲಾ ಪ್ರದರ್ಶನದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆಕಿದೆ. ಇದುವರೆಗೂ ಏಳು ಪ್ರದರ್ಶನಗಳನ್ನು ಆಯೋಜಿಸಿರುವ ರಾಜಕುಮಾರ್ ಅವರ ಚಿತ್ರಗಳಲ್ಲಿ ಐತಿಹಾಸಿಕ ಸ್ಮಾರಕಗಳು, ನಿಸರ್ಗದ ರಮಣೀಯತೆ ಎದ್ದು ಕಾಣುತ್ತದೆ.

ಇಂದು  (ಜ.26) ಪ್ರದರ್ಶನ ಕೊನೆಗೊಳ್ಳಲಿದೆ. ಸ್ಥಳ: ವೆಂಕಟಪ್ಪ ಕಲಾಗ್ಯಾಲರಿ, ಕಸ್ತೂರ ಬಾ ರಸ್ತೆ. ಬೆಳಿಗ್ಗೆ10ರಿಂದ ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT