ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ದಾಳಿ: ಪಾಕ್ ವಿರುದ್ಧ ರಷ್ಯ ದನಿ

Last Updated 22 ಡಿಸೆಂಬರ್ 2010, 6:40 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಮುಂಬೈ ದಾಳಿಯ ವಿಚಾರಣೆಯನ್ನು ತ್ವರಿತಗೊಳಿಸಿ ದಾಳಿಕೋರರನ್ನು ಶಿಕ್ಷೆಗೆ ಗುರಿಪಡಿಸುವಂತೆ ರಷ್ಯ ಮಂಗಳವಾರ ಪಾಕಿಸ್ತಾನವನ್ನು ಆಗ್ರಹಿಸಿದೆ. ಭಯೋತ್ಪಾದಕರು ಅಪರಾಧಿಗಳು, ಅವರನ್ನು ಹಸ್ತಾಂತರಿಸಿ ಶಿಕ್ಷೆಗೆ ಒಳಪಡಿಸಲೇಬೇಕು, ಯಾರು ಅವರನ್ನು ಬಚ್ಚಿಡುತ್ತಾರೋ ಅವರು ಅಪರಾಧಿಗಳನ್ನು ಬೆಂಬಲಿಸಿದಂತಾಗುತ್ತದೆ ಎಂದು ಅದು ಹೇಳಿದೆ.

ಭಾರತ- ರಷ್ಯ ನಡುವಿನ ಕಾರ್ಯತಂತ್ರ ಪಾಲುದಾರಿಕೆಯ 10ನೇ ವರ್ಷಾಚರಣೆ ಸಂದರ್ಭದಲ್ಲಿ ಎರಡು ದಿನಗಳ ಭೇಟಿಗಾಗಿ ಮಂಗಳವಾರ ನವದೆಹಲಿಗೆ ಬಂದಿಳಿದಿರುವ ರಷ್ಯ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್, ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಚರ್ಚಿಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಅಭಿಪ್ರಾಯ ತಿಳಿಸಿದರು.

ಯಾವುದೇ ಆಧುನಿಕ ಮತ್ತು ನಾಗರಿಕ ರಾಷ್ಟ್ರ ಭಯೋತ್ಪಾದಕರನ್ನು ಅಡಗಿಸಿಡುವುದಿಲ್ಲ, ಅದಕ್ಕೆ ನಿಜವಾಗಲೂ ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಸಹಕರಿಸುವ ಇಚ್ಛೆ ಇದ್ದದ್ದೇ ಆದರೆ ಅದು ಮೊದಲು ಭಯೋತ್ಪಾದಕರನ್ನು ಹಸ್ತಾಂತರಿಸಬೇಕು ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಭಯೋತ್ಪಾದಕರ ಪ್ರಾಂತೀಯ ಸುರಕ್ಷಾ ತಾಣಗಳ ಬಗ್ಗೆ ರಷ್ಯದ ಅಭಿಪ್ರಾಯವೇನು ಮತ್ತು ಈ ಪಿಡುಗು ನಿವಾರಣೆಯಲ್ಲಿ ಭಾರತದೊಂದಿಗೆ ಅದು ಹೇಗೆ ಸಹಕರಿಸುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ ‘ನಮ್ಮ ಸಹಕಾರ ಸಮರ್ಥ ಹಾಗೂ ಮುಕ್ತವಾಗಿದ್ದು ಇದನ್ನು ಇನ್ನಷ್ಟು ಬಲಪಡಿಸಲು ನಾವು ಆಸಕ್ತರಾಗಿದ್ದೇವೆ’ ಎಂದು ಅವರು ಪಾಕ್ ಹೆಸರು ಪ್ರಸ್ತಾಪಿಸದೇ ಪ್ರತಿಕ್ರಿಯಿಸಿದರು.

ಹಸ್ತಾಂತರ ಪ್ರಕ್ರಿಯೆ ಬಹಳ ಜಟಿಲವಾದ ಕಾರ್ಯ. ಆದರೆ ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಆಸಕ್ತಿ ಇರುವವರೆಲ್ಲರೂ ಅಂತರ ರಾಷ್ಟ್ರೀಯವಾಗಿ ಸಹಕರಿಸಬೇಕಾದದ್ದು ಅತಿ ಮುಖ್ಯ. ಇಂತಹವರನ್ನು ಹಸ್ತಾಂತರಿಸಲು ಎರಡೂ ರಾಷ್ಟ್ರಗಳ ನಡುವೆ ಕಾನೂನು ಮತ್ತು ದ್ವಿಪಕ್ಷೀಯ ಚೌಕಟ್ಟಿನ ಅಗತ್ಯವಿದೆ ಎಂದು ಅವರು ಹೇಳಿದರು.ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಂ ಸದಸ್ಯತ್ವ ಬೇಡಿಕೆಗೆ ಮಾಸ್ಕೊದ ಬೆಂಬಲವನ್ನೂ ಪ್ರಧಾನಿ ಜತೆ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ವೆುಡ್ವೆಡೇವ್   ಪುನರುಚ್ಚರಿಸಿದರು.

ಮನಮೋಹನ ಸಿಂಗ್ ಮಾತನಾಡಿ, ‘ಭಾರತ- ರಷ್ಯಗಳೆರಡೂ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರಗಳು. ಹೀಗಾಗಿ ಈ ಪಿಡುಗಿನ ವಿರುದ್ಧ ಹೋರಾಡಲು ಸಹಜವಾಗಿಯೇ ಅವು ಸಮಾನ ಆಸಕ್ತಿ ಹೊಂದಿವೆ. ಮಾಹಿತಿ ಹಂಚಿಕೆ, ತನಿಖಾ ವಿನಿಮಯ, ಭಯೋತ್ಪಾದನೆ ವಿರೋಧಿ ಪರಿಣಾಮಕಾರಿ ಕಾರ್ಯತಂತ್ರಗಳಲ್ಲಿ ನಾವು ಪರಸ್ಪರ ಸಹಕರಿಸಬೇಕಾಗಿದೆ’ ಎಂದರು.

‘ಆಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಗೊಳಿಸುವ ನಿಟ್ಟಿನಲ್ಲಿ ಸಹಕಾರ ಬಲಪಡಿಸಲು ಸಹ ನಾವು ನಿರ್ಧರಿಸಿದ್ದೇವೆ’ ಎಂದ ಅವರು, ‘ನಮ್ಮದು ವಿಶೇಷವಾದ ಕಾರ್ಯತಂತ್ರ ಸಹಭಾಗಿತ್ವ’ ಎಂದು ಬಣ್ಣಿಸಿದರು.

‘ಭಯೋತ್ಪಾದಕರ ಎಲ್ಲ ಕಾರ್ಯಜಾಲವನ್ನೂ ಬಗ್ಗುಬಡಿಯಬೇಕೆಂಬ ಒಪ್ಪಂದಕ್ಕೆ ಎರಡೂ ದೇಶಗಳು ಬಂದಿವೆ. ಮುಂಬೈ ದಾಳಿಯ ಎಲ್ಲ ಕಾರಣಕರ್ತರನ್ನೂ ಶಿಕ್ಷೆಗೆ ಗುರಿಪಡಿಸುವಂತೆ ಪಾಕಿಸ್ತಾನಕ್ಕೆ ಅವು ಕರೆ ನೀಡುತ್ತವೆ’ ಎಂದು ‘ಭಾರತ- ರಷ್ಯ ಕಾರ್ಯತಂತ್ರ ಸಹಭಾಗಿತ್ವ ಒಕ್ಕೂಟದ ದಶಮಾನೋತ್ಸವ ಮತ್ತು ಭವಿಷ್ಯದ ನಿರೀಕ್ಷೆ’ ಹೆಸರಿನಲ್ಲಿ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆ ತಿಳಿಸಿದೆ.

ಸುಮಾರು 2 ಗಂಟೆ ಕಾಲ ಉಭಯ ನಾಯಕರ ನಡುವೆ ನಡೆದ ನಿಯೋಗ ಮಟ್ಟದ ಮಾತುಕತೆ ನಾಗರಿಕ ಪರಮಾಣು ಒಪ್ಪಂದದ ಸಹಕಾರ ವಿಸ್ತರಣೆ, ದ್ವಿಪಕ್ಷೀಯ ಆರ್ಥಿಕ ಬಾಂಧವ್ಯ ವೃದ್ಧಿ, ಅಂತರ ರಾಷ್ಟ್ರೀಯ ಭಯೋತ್ಪಾದನೆ ಹಾಗೂ ಜಾಗತಿಕ ಆರ್ಥಿಕ ಹಿಂಜರಿತದಂತಹ ವಿಷಯಗಳ ಬಗ್ಗೆ ಚರ್ಚಿಸಿತು.

 ಭಯೋತ್ಪಾದನೆ ವಿರೋಧಿ ಹೋರಾಟದ ಸಹಕಾರ ಬಲಪಡಿಸುವ ವಿಷಯ ಪ್ರಮುಖವಾಗಿ ಚರ್ಚೆಗೆ ಬಂತು.

30 ಒಪ್ಪಂದಕ್ಕೆ ಸಹಿ: ವಿಜ್ಞಾನ, ಅಣುಶಕ್ತಿಯ ಶಾಂತಿಯುತ ಬಳಕೆ, ಸಂಸ್ಕೃತಿ, ಔಷಧಿಯಿಂದ ಹಿಡಿದು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 30 ಒಪ್ಪಂದಗಳಿಗೆ ಎರಡೂ ದೇಶಗಳು ಸಹಿ ಹಾಕಿವೆ.

ಐದನೇ ಪೀಳಿಗೆಯ ಯುದ್ಧ ವಿಮಾನದ ಜಂಟಿ ತಯಾರಿಕೆಗೂ ನಿರ್ಧರಿಸಲಾಗಿದ್ದು ಇದರಿಂದ ಈ ಯೋಜನೆಗೆ ಸಂಬಂಧಿಸಿದಂತೆ ಇದ್ದ ಊಹಾಪೋಹಗಳಿಗೆ ತೆರೆಬಿದ್ದಿದೆ.
ಯೋಜನೆಗೆ ಅಗತ್ಯವಾದ ಪ್ರಾಥಮಿಕ ವಿನ್ಯಾಸಕ್ಕೆ ಭಾರತದ ಎಚ್‌ಎಎಲ್, ರಷ್ಯದ ಸುಖೋಯ್ ವಿನ್ಯಾಸ ದಳ ಹಾಗೂ ರೊಸೊಬೊರೋನ್ ಎಕ್ಸ್‌ಪೋರ್ಟ್ ಸಹಕರಿಸಲಿವೆ.

11 ಒಪ್ಪಂದಗಳನ್ನು ಸಿಂಗ್ ಮತ್ತು ಮೆಡ್ವೆಡೇವ್ ಅವರ ಸಮ್ಮುಖದಲ್ಲಿ ಹಾಕಲಾಗಿದೆ. ಭಾರತದ ಅಣುಶಕ್ತಿ ವಿಭಾಗ ಹಾಗೂ ರಷ್ಯದ ಅಣುಶಕ್ತಿ ನಿಗಮವಾದ ರೊಸತೋಮ್ ನಡುವೆ ವಿಸ್ತೃತ ವೈಜ್ಞಾನಿಕ- ತಾಂತ್ರಿಕ ಸಹಕಾರ, ತೈಲ, ಅನಿಲ ಕ್ಷೇತ್ರದಲ್ಲಿನ ಸಹಕಾರಕ್ಕೆ ಸಂಬಂಧಿಸಿದಂತೆ ಪರಸ್ಪರ ತಿಳಿವಳಿಕೆ ಒಪ್ಪಂದಕ್ಕೆ ಬರಲಾಗಿದೆ.  2015ರ ವೇಳೆಗೆ ದ್ವಿಪಕ್ಷೀಯ ವಾಣಿಜ್ಯ ಸಂಬಂಧವನ್ನು 20 ಶತಕೋಟಿ ಡಾಲರ್ ಗುರಿಯೊಂದಿಗೆ ದುಪ್ಪಟ್ಟುಗೊಳಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT