ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ವಿವಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ದೂರ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಓಯು) ಇದೀಗ ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಮುಂದಾಗಿದೆ.

`ಹಲವಾರು ವಿಶ್ವವಿದ್ಯಾನಿಲಯಗಳು ವಿಸ್ತರಣಾ ಚಟುವಟಿಕೆಗಳನ್ನು ರೂಪಿಸಿಕೊಂಡು ಜ್ಞಾನದಾಹಿಗಳನ್ನು ತಲುಪುವ ಕೆಲಸ ಮಾಡುತ್ತಿವೆ. ಆದರೆ ಮುಕ್ತ ವಿಶ್ವವಿದ್ಯಾನಿಲಯದ ಆದರ್ಶವೇ ಬೇರೆ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಸಜ್ಜುಗೊಳಿಸಲು ತರಬೇತಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ~ ಎಂದು ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಸ್ಪರ್ಧಾತ್ಮಕ ಪ್ರಪಂಚದಲ್ಲಿ ಸರಿಯಾದ ಮಾರ್ಗದರ್ಶನವಿಲ್ಲದೆ ಅವಕಾಶ ವಂಚಿತರಾದವರಿಗೆ ತರಬೇತಿ, ಮಾರ್ಗದರ್ಶನ ನೀಡುವುದು ಮುಕ್ತ ವಿ.ವಿ.ಯ ಮುಖ್ಯ ಗುರಿ. ಐಎಎಸ್, ಕೆಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಸಕ್ತರನ್ನು ಸಜ್ಜುಗೊಳಿಸುವುದು. ಜೊತೆಗೆ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದವರು ನಡೆಸುವ ಯುಜಿಸಿ, ಕೆ-ಸ್ಲೆಟ್ ಪರೀಕ್ಷೆಗಳಿಗೂ ಸಹ ತರಬೇತಿ ನೀಡಲಾಗುತ್ತದೆ~ ಎಂದು ವಿವರಿಸಿದರು.

`ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಕುಲಪತಿಗಳ ನೇರ ಉಸ್ತುವಾರಿ ಮತ್ತು ಮಾರ್ಗದರ್ಶನದಲ್ಲಿ ನಡೆಯುತ್ತದೆ. ಇದಕ್ಕಾಗಿ ಕುಲಪತಿ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗುವುದು. ಗ್ರಾಮೀಣ ಅಭ್ಯರ್ಥಿಗಳನ್ನು ಗಮದಲ್ಲಿಟ್ಟುಕೊಂಡು ಅವರಿಗೆ ಅವಕಾಶ ಕಲ್ಪಿಸಲಾಗುವುದು. ಶುಲ್ಕ ಇನ್ನೂ ನಿಗದಿ ಮಾಡಿಲ್ಲ. ಗ್ರಾಮೀಣ ಅಭ್ಯರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಶುಲ್ಕ ನಿಗದಿ ಮಾಡಲಾಗುತ್ತದೆ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`ಮಂಡ್ಯ, ಕೋಲಾರ, ಬೆಳಗಾವಿ ಮತ್ತು ವಿಜಾಪುರಗಳಲ್ಲಿ ಮುಕ್ತ ವಿ.ವಿ. ಹೆಚ್ಚುವರಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ವಿಜ್ಞಾನ ಕೋರ್ಸ್‌ಗಳನ್ನು ಆರಂಭಿಸಲು ಹೆಚ್ಚಿನ ಗಮನ ಹರಿಸಲಾಗುತ್ತಿದೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT