ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖರ್ಜಿ ಮುಂದಿನ ಸವಾಲುಗಳು

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಇದೇ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಯ ರಂಗು ಪಡೆದುಕೊಂಡಿದ್ದ ರಾಷ್ಟ್ರಪತಿ ಚುನಾವಣೆಯ ಕದನದಲ್ಲಿ ನಿರೀಕ್ಷೆಯಂತೆ ಹಿರಿಯ ಮುತ್ಸದ್ದಿ ಪ್ರಣವ್ ಮುಖರ್ಜಿ ಜಯ ಸಾಧಿಸಿರುವರಾದರೂ ಅವರು ತಮ್ಮಲ್ಲಿಯ ಅಪಾರ ರಾಜಕೀಯ, ಆಡಳಿತಾತ್ಮಕ ಹಾಗೂ ಸಂಸದೀಯ ಅನುಭವವನ್ನು 2014ರ ಹೊತ್ತಿಗೆ ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದೇ ಅವರ ಮುಂದಿರುವ ದೊಡ್ಡ ಸವಾಲು ಎನಿಸಿದೆ.

ಅವಧಿಗೆ ಮುನ್ನ ಚುನಾವಣೆ ನಡೆಯದಿದ್ದಲ್ಲಿ 2014 ರ ಸಾರ್ವತ್ರಿಕ ಚುನಾವಣಾ ಫಲಿತಾಂಶದ ತರುವಾಯ ರಾಷ್ಟ್ರಪತಿಯ ನಡೆ ಈಗಿನ ಲೆಕ್ಕಾಚಾರದಲ್ಲಿ ತುಂಬ ಮಹತ್ವದ್ದಾಗಿದ್ದು ಮತ್ತೆ ಜನತೆಯ ತೀರ್ಪು ಅತಂತ್ರ ಲೋಕಸಭೆಯತ್ತ ಹೊರಳಿದರೆ ಏನಾಗಬಹುದು ಎಂಬುದು ಕುತೂಹಲ ಮೂಡಿಸಬಹುದಾಗಿದೆ. ಈಗಿನ ರಾಜಕೀಯ ಲೆಕ್ಕಾಚಾರದ ಅನ್ವಯ ಮತ್ತೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕುವುದು ಕಷ್ಟಸಾಧ್ಯ.

ಇಂತಹ ಪರಿಸ್ಥಿತಿ ಮತ್ತೆ ತಲೆದೋರಿದಲ್ಲಿ ರಾಷ್ಟ್ರಪತಿಯ ಪಾತ್ರ ಸಹಜವಾಗೇ ಪ್ರಮುಖವಾಗಿರುತ್ತದೆ ಅಷ್ಟೇ ಅಲ್ಲ ಆ ರಾಜಕೀಯ ಸಂಕಷ್ಟದ ಸ್ಥಿತಿಯನ್ನು ಸಂವಿಧಾನಾತ್ಮಕವಾಗಿ ನಿಭಾಯಿಸುವುದು ರಾಷ್ಟ್ರಪತಿಯಾದವರಿಗೆ ನಿಜಕ್ಕೂ ಅಗ್ನಿಪರೀಕ್ಷೆಯೇ ಸರಿ.
 
ಆದರೆ ಮತ್ತೆ ದೇಶದ ಮತದಾರ ಇಂತಹ ವಿಷಮ ತೀರ್ಪನ್ನೇ ನೀಡಿದಲ್ಲಿ ಆ ಸಂದರ್ಭದಲ್ಲಿಯ ಸರ್ಕಾರ ರಚನೆಯ ಬಿಕ್ಕಟ್ಟನ್ನು ಪರಿಹರಿಸಲು ಉತ್ತಮ ಸಂವಿಧಾನಪಟು ಎನಿಸಿರುವ ಮುಖರ್ಜಿ ಅವರಿಗೆ ಹೆಚ್ಚಿನ ಶ್ರಮವೇನೂ ಆಗದು ಎಂಬ ನಿರೀಕ್ಷೆ ಎಲ್ಲರದು.

ಕಳೆದ 1989ರಿಂದ ಈತನಕ ನಡೆದ ಮಹಾಚುನಾವಣೆಗಳಲ್ಲಿ ದೇಶದ ಮತದಾರ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ನೀಡಿಲ್ಲ. ಇಂತಹ ಸನ್ನಿವೇಶದಲ್ಲಿ ಹಿಂದಿನ ರಾಷ್ಟ್ರಪತಿಗಳಾದ ಶಂಕರ ದಯಾಳ ಶರ್ಮ ಹಾಗೂ ಕೆ.ಆರ್. ನಾರಾಯಣನ್ ಅವರುಗಳು ಹೆಚ್ಚು ಸ್ಥಾನ ಪಡೆದ ಪಕ್ಷವನ್ನೇ ಸರ್ಕಾರ ರಚನೆಗೆ ಆಹ್ವಾನಿಸಿದ್ದರು. ಸರ್ಕಾರ ರಚನೆಯ ಬಿಕ್ಕಟ್ಟು ಪರಿಹಾರಕ್ಕೆ ಇದುವೇ ಸರಳ ಮಾರ್ಗ ಎಂದು ಭಾವಿಸಲಾಗಿತ್ತು.
 
ಮುಂಬರುವ ಚುನಾವಣೆ ಫಲಿತಾಂಶವೂ ಇದೇ ತೆರನಾಗಿ ಬಂದಲ್ಲಿ ರಾಷ್ಟ್ರಪತಿ ತೆಗೆದುಕೊಳ್ಳುವ ನಿರ್ಧಾರ ಕುತೂಹಲದಿಂದ ನಿರೀಕ್ಷಿಸಲಾಗುತ್ತದೆ. ಇದಲ್ಲದೆ ಸ್ವಪಕ್ಷೀಯರಲ್ಲದೆ ಪ್ರತಿಪಕ್ಷಗಳಿಂದಲೂ ವಿಶ್ವಾಸ ಗಳಿಸಿದ ಮುಖರ್ಜಿ ಅವರ ನಡೆ ರಾಷ್ಟ್ರಪತಿ ಭವನದಲ್ಲಿ ಅತ್ಯಂತ ನಿಷ್ಪಕ್ಷಪಾತವಾಗಿರುತ್ತದೆ ಎಂಬುದು ಎಲ್ಲರ ಅನಿಸಿಕೆ.
ಕಾಂಗ್ರೆಸ್‌ನಲ್ಲೇ ದಶಕಗಳಷ್ಟು ಅವಧಿ ಕಳೆದ ಮುಖರ್ಜಿ ಅವರ ಸ್ಪರ್ಧೆ ಬರಿ ರಾಜಕೀಯ ವಲಯದಲ್ಲಿ ಅಷ್ಟೇ ಅಲ್ಲ ಇದರ ಹೊರತಾಗಿಯೂ ಸಾಕಷ್ಟು ಗಮನಸೆಳೆದಿತ್ತು.

ಹೀಗಾಗಿ ಮುಖರ್ಜಿ ತೆಗೆದುಕೊಳ್ಳುವ ಪ್ರತಿ ನಿರ್ಧಾರವನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ. ಮರಣ ದಂಡನೆ ಶಿಕ್ಷೆಗೆ ಒಳಗಾಗಿರುವ ಸಂಸತ್ತಿನ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರುವಿಗೆ ಕ್ಷಮಾದಾನ ನೀಡಬೇಕೆ ಬೇಡವೇ ಎಂಬ ವಿಚಾರವೂ ಮುಖರ್ಜಿ ಮುಂದಿರುವ ಮತ್ತೊಂದು ಪ್ರಮುಖ ಸವಾಲು ಎನಿಸಿದೆ. ಅಫ್ಜಲ್‌ನನ್ನು ನೇಣುಗಂಬಕ್ಕೆ ಏರಿಸಲು ಬಿಜೆಪಿ ಒತ್ತಾಯಿಸುತ್ತಲೇ ಇದೆ.

ಆರ್. ವೆಂಕಟರಾಮನ್ ತರುವಾಯ ಪೂರ್ಣ ಪ್ರಮಾಣದ ರಾಜಕಾರಣಿಯೊಬ್ಬರು ರಾಷ್ಟ್ರಪತಿ ಸ್ಥಾನ ಅಲಂಕರಿಸುತ್ತಿರುವುದು ಇದೇ ಮೊದಲು. ಅನುಭವ ಹಾಗೂ ಔನ್ನತ್ಯದ ಆಧಾರದಲ್ಲಿ ಮುಖರ್ಜಿ ಅವರನ್ನು ಹಿಂದಿನ ರಾಷ್ಟ್ರಪತಿಗಳಾದ ರಾಜೇಂದ್ರ ಪ್ರಸಾದ್, ಎಸ್. ರಾಧಾಕೃಷ್ಣನ್, ಜಕೀರ್ ಹುಸೇನ್ ಹಾಗೂ ವೆಂಕಟರಾಮನ್ ಅವರುಗಳಿಗೆ ಹೋಲಿಕೆ ಮಾಡಲಾಗುತ್ತಿದೆ.

ವಿವಾದಾತ್ಮಕ ವಿಷಯಗಳಿಂದ ನಿರ್ಗಮಿತ ರಾಷ್ಟ್ರಪತಿ ಪ್ರತಿಭಾ ಹೇಗೆ ದೂರವಿದ್ದರೋ ಅದೇ ರೀತಿ ಮುಖರ್ಜಿ ಸಹ ವಿವಾದಾತ್ಮಕ ವ್ಯಕ್ತಿ ಎನಿಸಿಕೊಂಡ ಉದಾಹರಣೆ ವಿರಳ. 77 ವರ್ಷದ ಮುಖರ್ಜಿ ಭ್ರಷ್ಟಾಚಾರದಿಂದ ದೂರವಿದ್ದ ವ್ಯಕ್ತಿ ಎನಿಸಿಕೊಂಡಿದ್ದೂ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT