ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖವಾಡದಾಚೆ

Last Updated 19 ಜುಲೈ 2013, 19:59 IST
ಅಕ್ಷರ ಗಾತ್ರ

ಮೊನ್ನೆ ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ಮಾರ್ಕೆಟ್ ಹತ್ತಿರ ಹೋಗುತ್ತಿದ್ದೆ. ಹೆಲ್ಮೆಟ್ ಧರಿಸಿದ್ದ ಬೈಕ್ ಸವಾರ ಹುಡುಗನೊಬ್ಬ `ನಮಸ್ತೆ ಮಿಸ್' ಅಂದ. `ನಮಸ್ತೆ' ಅಂದವಳು ಅವನನ್ನು ದಿಟ್ಟಿಸಿ ನೋಡಿದೆನಾದರೂ ಗುರುತು ಸಿಗಲಿಲ್ಲ. `ಯಾರು? ಗೊತ್ತಾಗಲಿಲ್ಲ' ಎಂದಾಗ ಅವನು ಹೆಲ್ಮೆಟ್ ತೆಗೆದು, `ನಾನು ಮಿಸ್' ಎಂದು ಹೆಸರು ಹೇಳಿದ.

ಈಗಷ್ಟೇ ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿರುವ, ಹಿಂದೆ ನಾನು ಕಲಿಸುತ್ತಿದ್ದ ಹಳೆ ಶಾಲೆಯ ವಿದ್ಯಾರ್ಥಿಯನ್ನು ನೋಡಿ ಅಚ್ಚರಿಯಾಯ್ತು. `ಏನಪ್ಪ ಇಲ್ಲಿ?' ಎಂದಾಗ `ಅಮ್ಮನ್ನ ಕರ‌್ಕೊಂಡು ಮಾರ್ಕೆಟ್‌ಗೆ ಬಂದಿದ್ದೆ ಮಿಸ್' ಅಂದ. ಅಷ್ಟರಲ್ಲಿ ಅವನ ಅಮ್ಮ ಹಣ್ಣು ಖರೀದಿಸುತ್ತಿದ್ದವರು ನಮ್ಮ ಬಳಿ ಬಂದು ಪರಿಚಯದ ನಗು ಬೀರಿದರು. ನಾನೂ ನಕ್ಕು ಹೇಳಿದೆ `ನಿಮ್ಮ ಮಗ ಸ್ಕೂಟರ್ ಓಡಿಸುತ್ತಿದ್ದಾನೆ'. ಆಗ ಅವರು `ಹೂಂ ಹೌದು, ನಮ್ಮ ಮನೆಯವರು ಬರೋದು ಲೇಟಾಗುತ್ತೆ. ಹೀಗಾಗಿ ಮನೆಗೆ ಏನೇನೋ ತಗೊಂಡು ಹೋಗೋದಿತ್ತು.  ಸ್ಕೂಟರ್ ಓಡಿಸಿದ್ರೆ ಸ್ಕೂಲ್‌ನಲ್ಲಿ ಬೈಯ್ತಾರಲ್ಲ, ಅದಕ್ಕೆ ಹೆಲ್ಮೆಟ್ ಹಾಕಿಸಿ ಕರ‌್ಕೊಂಡ್ ಬಂದೆ. ಯಾರಿಗೂ ಗೊತ್ತಾಗೋಲ್ಲ ನೋಡಿ ಅದಕ್ಕೆ' ಎಂದಾಗ ದಿಗ್ಭ್ರಾಂತಳಾದೆ.

ದಿನನಿತ್ಯ ದೊಡ್ಡವರೇ ಅದೆಷ್ಟೋ ಮಂದಿ ಅಪಘಾತಗಳಿಗೆ ಈಡಾಗುತ್ತಿದ್ದಾರೆ. ಜೊತೆಗೆ ಸಂಚಾರ ಉಲ್ಲಂಘನೆಯ ನಾನಾ ಕಾರಣಗಳಿಗಾಗಿ ದಂಡ ತೆರುವವರ ಸಂಖ್ಯೆಯೂ ಕಡಿಮೆ ಇಲ್ಲ. ಅಬ್ಬರದ ವಾಹನ ದಟ್ಟಣೆಯಲ್ಲಿ ದೊಡ್ಡವರೇ ವಾಹನ ಓಡಿಸಲು ಪರದಾಡುತ್ತಿರುವಾಗ, ಇನ್ನೂ ಕಾಲೇ ಎಟುಕದ ಇಂತಹ ಚಿಣ್ಣರು ವಾಹನ ಚಲಾಯಿಸಿ, ಪೊಲೀಸರ ಕೈಗೆ ಸಿಕ್ಕಿ ದಂಡ ಕಟ್ಟಿರುವುದಕ್ಕೂ ಮಿತಿಯಿಲ್ಲ. ಇಂತಿರುವಲ್ಲಿ ಪೋಷಕರಾಗಿ ಮಕ್ಕಳನ್ನು ಸತ್ಯವಂತರನ್ನಾಗಿ, ಪ್ರಾಮಾಣಿಕರಾಗಿ, ಯೋಗ್ಯ ಪ್ರಜೆಗಳನ್ನಾಗಿ ಸರಿದಾರಿಯಲ್ಲಿ ಬೆಳೆಸಬೇಕಾದವರೇ ಅಪರಾಧಗಳ ಮುಖವಾಡದಡಿ ಬೆಳೆಸುವುದು ಎಷ್ಟು ಸೂಕ್ತ?

ವಯಸ್ಕನಾಗಲು ಇನ್ನೂ ನಾಲ್ಕೈದು ವರ್ಷ ಬಾಕಿ ಇದ್ದು, ಚಾಲನಾ ಪರವಾನಗಿ ಸಹ ಇಲ್ಲದೆ ವಾಹನ ಓಡಿಸುವುದು ತಪ್ಪು ಎಂದು ಗೊತ್ತಿದ್ದೂ, ವಿದ್ಯಾವಂತರಾದ ತಂದೆ-ತಾಯಿಯೇ ಮಕ್ಕಳಿಗೆ ಹೀಗೆ ಮುಖವಾಡ ತೊಡಿಸಿದರೆ? ಆ ಮಕ್ಕಳು ದೊಡ್ಡವರಾಗುತ್ತಾ ಆಗುತ್ತಾ ಆ ಮುಖವಾಡದಾಚೆಗೆ ಅದೆಷ್ಟು ಮುಖಗಳನ್ನು ಧರಿಸಬಲ್ಲರು ಎಂಬುದನ್ನು ನಾವೇ ಊಹಿಸಬಹುದು. ಇದಕ್ಕೆಲ್ಲ ನೇರವಾಗಿ ಪೋಷಕರೇ ಹೊಣೆಯಲ್ಲವೇ?

ಇಂತಹದ್ದೇ ಇನ್ನೊಂದು ಪ್ರಸಂಗ. ಮತ್ತೊಬ್ಬ ತಾಯಿ ದಿನನಿತ್ಯವೂ ಮಗನನ್ನು ಮುದ್ದು ಮಾಡಿ, ಅವನಿಗೆ ದಿನವೂ ಪಾನಿಪೂರಿ, ಗೋಬಿ ಮಂಚೂರಿ,  ನೂಡಲ್ಸ್‌ಗಳನ್ನು ತಿನ್ನಿಸಿ, ಆತನೀಗ ಅವುಗಳ ದಾಸಾನುದಾಸ ಆಗಿದ್ದಾನೆ. ಅವನಿಗೆ ಮನೆಯ ತಿನಿಸುಗಳು ರುಚಿಸಲಾರವು. ಎಲ್ಲ ವಿಷಯದಲ್ಲೂ ತನ್ನ ಮಗನನ್ನು ವಹಿಸಿಕೊಂಡು ಬೇರೆ ಮಕ್ಕಳ ಜೊತೆ, ಕಡೆಗೆ ಶಿಕ್ಷಕರ ಜೊತೆಗೂ ಜಗಳ ಕಾಯುವ ಆಕೆ ಮಗನ ಭವಿಷ್ಯದ ಬಗ್ಗೆ ಚಿಂತಿಸುವುದೇ ಇಲ್ಲವೇ ಎನಿಸುತ್ತದೆ.

ಆಕೆಯ ದೃಷ್ಟಿಯಲ್ಲಿ 7-8ನೇ ತರಗತಿಯ ಆ ಹುಡುಗ ಹೊರಗೆ ತಿನ್ನುವುದು ದೊಡ್ಡ ಸಂಗತಿಯೇನಲ್ಲ. ಅದು ಸಾಮಾನ್ಯ ಎಂಬ ಭಾವನೆ. ತಾಯಿಯೇ ತನ್ನ ಅಭ್ಯಾಸಕ್ಕೆ ಉತ್ತೇಜನ ನೀಡುವಾಗ ಆ ಹುಡುಗನಾದರೂ ತಿನ್ನದೆ ಹೇಗಿದ್ದಾನು? ಆ ಬಗ್ಗೆ ಆ ತಾಯಿ ನೀಡುವ ಪ್ರತಿಕ್ರಿಯೆಯೂ ಹಾಗೇ ಇದೆ. `ಅಯ್ಯೋ, ವೀಕ್ ಎಂಡ್‌ನಲ್ಲಿ ಒಂದೆರಡು ದಿವಸ ತಿನ್ತಾನೆ ಅಷ್ಟೆ ಮಿಸ್. ಅವನ ಚಿಕ್ಕಪ್ಪ- ದೊಡ್ಡಪ್ಪನ ಮಕ್ಕಳೆಲ್ಲ ತಿನ್ನುವಾಗ ಅವನೊಬ್ಬ ಅದ್ಹೇಗೆ ಸುಮ್ಮನಿರ‌್ತಾನೆ ಹೇಳಿ' ಎಂದು ಅವನಿಗೆ ಸಮರ್ಥನೆಯ ಮುಖವಾಡ ಹಾಕಿ ಬಿಡುತ್ತಾರೆ. ಆ ಮುಖವಾಡದಾಚೆಗೆ ಅವನು ಎಷ್ಟು ಮುಖಗಳನ್ನು ಸೃಷ್ಟಿಸಿಕೊಳ್ಳಬಹುದು ಎಂಬ ಪರಿಕಲ್ಪನೆಯೇ ಭಯಾನಕ ಅಲ್ಲವೇ?

ನಮ್ಮ ಸಂಸ್ಕೃತಿಯಲ್ಲಿ ಒಂದು ಮಾತು ಸದಾ ಹಸಿರು. `ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು'. ಹೀಗಾಗಿ,  ನಮ್ಮ ಮಕ್ಕಳಿಗೆ ನಾವೇ ಮುಖವಾಡವನ್ನು ಹಾಕಬೇಕೇ? ಆ ಮೂಲಕ, ಆ ಮುಖವಾಡದ ಆಚೆಗೆ ಅಂತಹ ಹತ್ತಾರು ಮುಖಗಳ ಸೃಷ್ಟಿಗೆ ಕಾರಣರಾಗಬೇಕೇ? ಸೂಕ್ತ ನಿರ್ಧಾರ ನಮ್ಮದೇ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT