ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯ ಶಿಕ್ಷಕಿ ವಿರುದ್ಧ ಮಕ್ಕಳ ಮೇಲಿನ ದೌರ್ಜನ್ಯ ಆರೋಪ

Last Updated 7 ಫೆಬ್ರುವರಿ 2012, 5:15 IST
ಅಕ್ಷರ ಗಾತ್ರ

ಹಾಸನ: ನಗರದ ಸಂತೆಪೇಟೆ ವಲ್ಲಭಾಯಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಜಾತಾ ಎಂಬುವವರು ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಾರೆ ಎಂದು ಆರೋಪಿಸಿ, ಶಾಲೆಯ ಮಕ್ಕಳು ಹಾಗೂ ಪಾಲಕರು ಸೋಮವಾರ ಶಾಲೆಗೆ ಬೀಗ ಹಾಕಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.

`ಶಿಕ್ಷಕಿ ಸುಜಾತಾ ಮಕ್ಕಳ ಕೈಯಿಂದಲೇ ತಮ್ಮ ಸ್ಕೂಟಿಯನ್ನು ತೊಳೆಸುತ್ತಾರೆ. ಶಾಲೆಯ ಶೌಚಾಲಯಗಳನ್ನೂ ಶುಚಿಗೊಳಿಸುತ್ತಾರೆ. ಸಾಲದೆಂಬಂತೆ ಸಣ್ಣ ಪುಟ್ಟ ಕಾರಣಗಳಿಗೂ ಮಕ್ಕಳನ್ನು ಅವಾಚ್ಯವಾಗಿ ಬೈದು ಹಿಗ್ಗಾ ಮಗ್ಗಾ ಥಳಿಸುತ್ತಾರೆ. ಅನೇಕ ಸಣ್ಣ ಮಕ್ಕಳಿಗೆ ಕೆನ್ನೆ, ಹಣೆ, ತಲೆಗಳಿಗೆ ಏಟಾಗಿದೆ. ಹಲವು ದಿನಗಳಿಂದ ಇದನ್ನು ಸಹಿಸುತ್ತ ಬಂದಿದ್ದೆವು. ಈಚೆಗೆ ಏಳನೇ ತರಗತಿಯ ಬಾಲಕನೊಬ್ಬನ ಕೂದಲು ಹಿಡಿದು ಎಳೆದೊಯ್ದು ಕೆನ್ನೆಗೆ ಥಳಿ        ಸಿದ್ದಾರೆ~ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸೋಮವಾರ ಮುಂಜಾನೆ ಈ ಶಿಕ್ಷಕಿಯನ್ನು ವಿಚಾರಿಸುವುದಕ್ಕೋಸ್ಕರವೇ ಅನೇಕ ಪಾಲಕರು ಶಾಲೆಗೆ ಹೋಗಿದ್ದರು. ಆದರೆ  ಸುಜಾತಾ ಶಾಲೆಗೆ ಬಂದಿರಲಿಲ್ಲ. ಸಿಟ್ಟಿಗೆದ್ದ ಪಾಲಕರು ಅವರನ್ನು ಕರೆಸುವಂತೆ ಇತರ ಶಿಕ್ಷಕರನ್ನು ಒತ್ತಾಯಿಸಿದರು.
 
ಅಲ್ಲಿದ್ದ ಶಿಕ್ಷಕರ ಜತೆ ಮಾತಿನ ಚಕಮಕಿ ನಡೆಸಿದರು. ಯಾವುದೂ ಫಲ ನೀಡದಿದ್ದಾಗ ಶಾಲೆಗೆ ಬೀಗ ಜಡಿದು, ಮಕ್ಕಳನ್ನೂ ಜತೆಯಲ್ಲೇ ಕರೆದುಕೊಂಡು ಡಿಡಿಪಿಐ ಕಚೇರಿಗೆ ಬಂದರು. ಅಲ್ಲಿ ಪ್ರತಿಭಟನೆ ನಡೆಸಿದರು. ಆದರೆ ಕಚೇರಿಯಲ್ಲಿ ಡಿಡಿಪಿಐ ಅವರೂ ಇರಲಿಲ್ಲ. ಅಲ್ಲಿಂದ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರತಿಭಟನೆ ಮುಂದುವರಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಜತೆಗಿದ್ದ ನಗರಸಭೆ ಸದಸ್ಯೆ ಟಿ. ನಿರ್ಮಲಾ ಯೋಗೇಶ್, ಶಿಕ್ಷಕಿ ಸುಜಾತಾ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದರು.   `ಸುಜಾತಾ ಈಚೆಗೆ ಮಕ್ಕಳಿಂದ ತಲಾ 350 ರೂಪಾಯಿ ಸಂಗ್ರಹಿಸಿ ಫ್ಯಾಂಟಸಿ ಪಾರ್ಕ್‌ಗೆ ಕರೆದೊಯ್ದಿದ್ದರು.

ಇದೇ ಜಾಗಕ್ಕೆ ಹೋಗಲು ಇತರ ಶಾಲೆಗಳವರು 250 ರೂಪಾಯಿ ಪಡೆದಿದ್ದರು. ಹೋಗುವಾಗ ಜತೆಯಲ್ಲೇ ಹೋದ ಶಿಕ್ಷಕಿ, ಬರುವಾರ ಮಕ್ಕಳನ್ನು ರೈಲ್ವೆ ನಿಲ್ದಾಣದಲ್ಲಿ ಇಳಿಸಿ ಪರಾರಿಯಾದರು. ಶಾಲೆಯಲ್ಲಿ ಶೌಚಾಲಯವಿದ್ದರೂ ಅದನ್ನು ಬಳಸಲು ಮಕ್ಕಳಿಗೆ ಬಿಡುತ್ತಿಲ್ಲ. ಶಿಕ್ಷಕಿ ಸಮಯಕ್ಕೆ ಸರಿಯಾಗಿ ಶಾಲೆಗೆ ಬರುತ್ತಿಲ್ಲ. ಶಾಲಾಭಿವೃದ್ಧಿ ಸಮಿತಿಯ ಸಭೆಯನ್ನೇ ಕರೆಯುವುದಿಲ್ಲ.

ಮಧ್ಯಾಹ್ನ ಊಟದ ವೇಳೆಯಲ್ಲಿ ಪಾಲಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಾಲೆಗೆ ಹೋದರೆ ಒಳಗೆ ಹೋಗಲು ಬಿಡುವುದಿಲ್ಲ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. `ಯಾರಿಗೆ ದೂರು ನೀಡಿದರೂ ನನ್ನನ್ನು ಏನೂ ಮಾಡಲಾಗುವುದಿಲ್ಲ~ ಎಂದು ಅವರು ನಿರ್ಭಯವಾಗಿ ಹೇಳುತ್ತಿದ್ದಾರೆ~ ಎಂದು ನಿರ್ಮಲಾ ದೂರಿದರು.

ಜಿಲ್ಲಾಧಿಕಾರಿ ಮೋಹನ್ ರಾಜ್ ಬಂದು ಮಕ್ಕಳು ಹಾಗೂ ಪಾಲಕರನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ಮಕ್ಕಳು ತಾವು ಅನುಭವಿಸುತ್ತಿರುವ ಕಷ್ಟಗಳನ್ನು ವಿವರಿಸಿದರು. ಶಿಕ್ಷಕಿಯನ್ನೇ ಸ್ಥಳಕ್ಕೆ ಕರೆಸಿ ಎಂದು ಪಾಲಕರು ಪಟ್ಟು ಹಿಡಿದರು. ಕೊನೆಗೆ ಶಿಕ್ಷಕಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆಕೊನೆಗೊಳಿಸಿದರು.


`ಆ ಶಿಕ್ಷಕಿ ನಮ್ಮ ಶಾಲೆಗೆ ಬೇಡವೇ ಬೇಡ, ಅವರನ್ನು ಶಾಲೆಗೆ ಬರಲು ಬಿಡುವುದಿಲ್ಲ~ ಎಂದು ಪಾಲಕರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT