ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಹುದ್ದೆ ಬಯಕೆ ತಪ್ಪೇನಲ್ಲ

ಶಾಸಕಾಂಗ ಪಕ್ಷ, ಹೈಕಮಾಂಡ್ ನಿರ್ಣಯಕ್ಕೆ ಬದ್ಧ- ಸಿದ್ದರಾಮಯ್ಯ
Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಹೌದು. ಆದರೆ, ಈ ವಿಷಯದಲ್ಲಿ ಶಾಸಕಾಂಗ ಪಕ್ಷ ಮತ್ತು ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳುವ ನಿರ್ಣಯಗಳಿಗೆ ಬದ್ಧನಾಗಿರುತ್ತೇನೆ' ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿದರು.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಪ್ರಸ್‌ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. `ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂಬುದನ್ನು ಹೇಳಿಕೊಳ್ಳುವುದು ತಪ್ಪಲ್ಲ' ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು.

`ಸರ್ಕಾರ ರಚನೆಗೆ ಅಗತ್ಯವಿರುವ 113ಕ್ಕಿಂತ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಈ ಚುನಾವಣೆಯಲ್ಲಿ ಪಡೆಯುವುದು ಖಚಿತ. ಈ ಕುರಿತು ಶೇಕಡ 200ರಷ್ಟು ವಿಶ್ವಾಸವಿದೆ. ನಾನು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಉಳ್ಳವನು. ಸರ್ಕಾರ ರಚನೆಯ ಅವಕಾಶ ದೊರೆತಾಗ ಪಕ್ಷದಿಂದ ಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನು ಶಾಸಕಾಂಗ ಪಕ್ಷವೇ ನಿರ್ಧರಿಸುತ್ತದೆ. ಶಾಸಕಾಂಗ ಪಕ್ಷ ಕೈಗೊಳ್ಳುವ ನಿರ್ಣಯಕ್ಕೆ ತಲೆ ಬಾಗುತ್ತೇನೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸುವ ಸಂಪ್ರದಾಯ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಹಲವು ಮಂದಿ ಸಮರ್ಥ ನಾಯಕರು ಪಕ್ಷದಲ್ಲಿ ಇದ್ದಾರೆ. ಅವರಲ್ಲಿ ಯಾರಾದರೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಹೇಳಿಕೊಂಡರೆ ತಪ್ಪೇನೂ ಇಲ್ಲ. ಕಾಂಗ್ರೆಸ್‌ನ ಹಲವು ನಾಯಕರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಎಂದು ಬಿಂಬಿಸಿಕೊಂಡಾಗ ಪಕ್ಷದಲ್ಲಿ ಭಿನ್ನಮತವಿದೆ ಎಂಬುದಾಗಿ ಬಿಜೆಪಿ ಮುಖಂಡರು ಭಾವಿಸಿದರೆ ಅದು ಅವರ ಭ್ರಮೆಯಾಗುತ್ತದೆ ಎಂದರು.

`ಜನತಾ ಪರಿವಾರದಿಂದ ಬಂದ ರಾಜಕಾರಣಿಯಾದ ನೀವು ಮುಖ್ಯಮಂತ್ರಿ ಆಯ್ಕೆಯ ವಿಷಯದಲ್ಲಿ ಹೈಕಮಾಂಡ್‌ನ ಯಾವುದೇ ಬಗೆಯ ನಿರ್ಣಯವನ್ನೂ ಒಪ್ಪಿಕೊಳ್ಳುತ್ತೀರಾ' ಎಂಬ ಮರುಪ್ರಶ್ನೆಗೆ, `ರಾಜಕಾರಣದಲ್ಲಿ ಯಾರೂ ಸ್ವಚ್ಛಂದವಾಗಿ ಇರಲು ಸಾಧ್ಯವಿಲ್ಲ. ಬಿಜೆಪಿ, ಜೆಡಿಎಸ್, ಕೆಜೆಪಿ ಪಕ್ಷಗಳಲ್ಲಿ ಇದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಇರಲು ಆಗದು. ಪ್ರಜಾಪ್ರಭುತ್ವದ ತತ್ವ, ಮೌಲ್ಯ ಹಾಗೂ ಸಂಸದೀಯ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ನಂಬಿಕೆ ಉಳ್ಳವನು ನಾನು. ಅದರಂತೆ ನಡೆದುಕೊಳ್ಳುತ್ತೇನೆ' ಎಂದು ಉತ್ತರಿಸಿದರು.

ನನ್ನ ಪಾತ್ರವಿದೆ: ಭದ್ರಾವತಿಯಲ್ಲಿ ಹಾಲಿ ಶಾಸಕ ಬಿ.ಕೆ.ಸಂಗಮೇಶ್ವರ ಅವರನ್ನು ಕಡೆಗಣಿಸಿ ಸಿ.ಎಂ.ಇಬ್ರಾಹಿಂ ಅವರಿಗೆ ಟಿಕೆಟ್ ನೀಡಿರುವುದಕ್ಕೆ, `ಭದ್ರಾವತಿ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸಂಗಮೇಶ್ವರ ಅವರೇ ಹಿಂದೆ ಯಾವುದೋ ಬಹಿರಂಗ ಸಭೆಯಲ್ಲಿ ಇಬ್ರಾಹಿಂ ಅವರಿಗೆ ಆಹ್ವಾನ ನೀಡಿದ್ದರಂತೆ. ಅಲ್ಲದೇ, ಇಬ್ರಾಹಿಂ ಅಲ್ಪಸಂಖ್ಯಾತ ಸಮುದಾಯದ ಹಿರಿಯ ನಾಯಕ. ಹೈಕಮಾಂಡ್ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿತು' ಎಂದು ಹೇಳಿದರು.

`ಇಬ್ರಾಹಿಂ ಅವರಿಗೆ ಟಿಕೆಟ್ ನೀಡಿರುವುದರಲ್ಲಿ ನನ್ನ ಪಾತ್ರವೂ ಇದೆ. ಇದನ್ನು ನೇರವಾಗಿ ನಾನು ಒಪ್ಪಿಕೊಳ್ಳುತ್ತೇನೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ' ಎಂದು ಸ್ಪಷ್ಟಪಡಿಸಿದರು.

ಟಿಕೆಟ್ ಹಂಚಿಕೆಯಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗಿದೆ ಎಂಬ ಆರೋಪವನ್ನು ಅಲ್ಲಗಳೆದ ಅವರು, ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿದೆ. ಲಿಂಗಾಯತರನ್ನು ಕಡೆಗಣಿಸಿಲ್ಲ. ಟಿಕೆಟ್ ವಂಚಿತರಾಗಿರುವ ಕೆಲವರು ಇಂತಹ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT