ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯದ ಮುಷ್ಕರ; ಪ್ರಯಾಣಿಕರ ಪರದಾಟ

Last Updated 20 ಜನವರಿ 2012, 5:45 IST
ಅಕ್ಷರ ಗಾತ್ರ

ತುಮಕೂರು: ತಮ್ಮ ವಿವಿಧ ಬೇಡಿಕೆ ಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ನಗರದ ಆಟೊ ಚಾಲಕರು ಆರಂಭಿಸಿ ರುವ ಪ್ರತಿಭಟನೆ ಗುರುವಾರವೂ ಮುಂದುವರೆಯಿತು.

ಶಾಲಾ ಮಕ್ಕಳು, ಕೂಲಿ ಕಾರ್ಮಿ ಕರು, ನೌಕರರು ಸರಿಯಾದ ವೇಳೆಗೆ ಶಾಲೆ, ಕಚೇರಿಗೆ ತಲುಪದೆ ತೊಂದರೆ ಅನುಭವಿಸಿದರು. ನಗರ ಸಾರಿಗೆ ಬಸ್‌ಗಳು ಭರ್ತಿಯಾಗಿ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನಗರದ ಟೌನ್‌ಹಾಲ್ ವೃತ್ತದಲ್ಲಿ ಬುಧವಾರದಿಂದಲೇ ಧರಣಿ ಪ್ರಾರಂಭಿ ಸಿದ ಆಟೊ ಚಾಲಕರು ಮತ್ತು ಮಾಲೀ ಕರು ಹೆಚ್ಚುವರಿ ನಗರ ಸಾರಿಗೆ ಬಸ್‌ಗಳನ್ನು ತಕ್ಷಣ ಹಿಂಪಡೆಯಬೇಕೆಂದು ಗುರುವಾರವೂ ಆಗ್ರಹಿಸಿದರು.

ಜಿಲ್ಲಾಧಿಕಾರಿ ಸಭೆ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಜೆ 4.30ಕ್ಕೆ ನಡೆದ ಸಭೆಯಲ್ಲಿ ಆಟೊ ಚಾಲಕರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಗಣಿಸುವುದಾಗಿ ಜಿಲ್ಲಾಧಿಕಾರಿ ಡಾ.ರಾಜು ಭರವಸೆ ನೀಡಿದರು.

`ನಗರ ಸಾರಿಗೆ ಬಸ್‌ಗಳಿಂದ ತೊಂದರೆಯಾಗಿದೆ. ಕೇವಲ 23 ಬಸ್‌ಗಳಿಗೆ ಪರ್ಮಿಟ್ ಪಡೆದು 40ಕ್ಕೂ ಹೆಚ್ಚು ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಓಡಿಸುತ್ತಿದೆ. ಪ್ರಯಾಣಿಕರು ಕೈ ಅಡ್ಡ ಹಾಕಿದ ಕಡೆ ಬಸ್‌ಗಳು ನಿಲ್ಲುತ್ತಿವೆ. ನಗರ ವ್ಯಾಪ್ತಿಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ನಮ್ಮ ಹೊಟ್ಟೆ ಪಾಡು ನಡೆಯುವುದೇ ಕಷ್ಟವಾಗುತ್ತಿದೆ~ ಎಂದು ಆಟೊ ಚಾಲಕರು ತಮ್ಮ ಸಮಸ್ಯೆ ವಿವರಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿ ಕಾರಿ ಡಾ.ರಾಜು, ಹೆಚ್ಚುವರಿ ಯಾಗಿ ಸಂಚರಿಸುತ್ತಿರುವ 10 ಬಸ್‌ಗಳನ್ನು ನಿಲ್ಲಿಸುವಂತೆ ಕೆಎಸ್‌ಆರ್‌ಟಿಸಿಗೆ ಸೂಚಿಸಿದರು. ಜನರ ಬೇಡಿಕೆ ಹಿನ್ನೆಲೆಯಲ್ಲಿ ಸಿಟಿ ಬಸ್ ಸಂಚಾರ ಅನಿವಾರ್ಯ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವಿವರಿಸಿದರು.

ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲು ಎಷ್ಟು ಬಸ್‌ಗಳಿಗೆ ಕೆಎಸ್‌ಆರ್‌ಟಿಸಿ ಅನುಮತಿ ಪಡೆದಿದೆ? ವಾಸ್ತವವಾಗಿ ಕೆಎಸ್‌ಆರ್‌ಟಿಸಿ ನಗರ ವ್ಯಾಪ್ತಿಯಲ್ಲಿ ಎಷ್ಟು ಬಸ್ ಓಡಿಸುತ್ತಿದೆ? ಎಂಬ ನಿಖರ ಮಾಹಿತಿ ಪಡೆದು ಶುಕ್ರವಾರ ಮತ್ತೊಂ ದು ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿ ಪ್ರಕಟಿಸಿದರು.

ಆದಷ್ಟೂ ಶೀಘ್ರ ನಗರ ವ್ಯಾಪ್ತಿಯಲ್ಲಿ ರಸ್ತೆಗಳ ಗುಂಡಿ ಮುಚ್ಚಿ ಸಂಚಾರ ಯೋಗ್ಯ ಮಾಡುತ್ತೇನೆ. ಮುಷ್ಕರ ಹಿಂದಕ್ಕೆ ಪಡೆಯಿರಿ ಎಂದು ಜಿಲ್ಲಾಧಿ ಕಾರಿ ಆಟೊ ಚಾಲಕರಿಗೆ ವಿನಂತಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ದೊಡ್ಡಪ್ಪ, ಉಪ ವಿಭಾಗಾಧಿಕಾರಿ ರೋಹಿಣಿ ಸಿಂಧೂರಿ, ಆರ್‌ಟಿಓ ರಘುನಾಥ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಶ್ವನಾಥ್ ಸಭೆಯಲ್ಲಿದ್ದರು.

ಗೊಂದಲ: ತಮ್ಮ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ನಡೆಸಿದ ಸಭೆಯನ್ನೇ ಒಪ್ಪದ ಆಟೊ ಚಾಲಕರು, `ನಮಗೆ ಯಾರೂ ನಾಯಕರಿಲ್ಲ. ನಮಗೆ ನಾವೇ ನಾಯಕರು. ನಮ್ಮ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ~ ಎಂದು ಘೋಷಿಸಿದರು. ಆಟೊ ಚಾಲಕರು ಮತ್ತು ಮಾಲೀಕರ ಸಂಘಗಳ ಒಕ್ಕೂಟ ದ ಪದಾಧಿಕಾರಿಗಳು ಶುಕ್ರವಾರ ಮುಷ್ಕರ ಹಿಂಪಡೆಯುವುದಾಗಿ ಸಭೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟರು ಎಂದು ಡಿವೈಎಸ್‌ಪಿ ವಿಜಯ್‌ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT