ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಾಫ್ ಬೆನ್ನು ತಟ್ಟಿದ ದೋನಿ

Last Updated 16 ಜನವರಿ 2011, 19:30 IST
ಅಕ್ಷರ ಗಾತ್ರ

ಜೋಹಾನ್ಸ್‌ಬಗ್: 43ನೇ ಓವರ್‌ನ ಕೊನೆಯ ಎಸೆತದಲ್ಲಿ ವೇಯ್ನ್ ಪಾರ್ನೆಲ್ ಔಟ್ ಆಗುವವರೆಗೆ ಭಾರತ ಗೆಲ್ಲುತ್ತೆ ಎನ್ನುವ ನಂಬಿಕೆ ಪ್ರೇಕ್ಷಕರಿಗೆ ಇರಲಿಲ್ಲ. ಆದರೆ ಐದು ವರ್ಷಗಳ ಬಳಿಕ ‘ಪಂದ್ಯ ಪುರುಷೋತ್ತಮ’ ಗೌರವಕ್ಕೆ ಪಾತ್ರರಾದ ವೇಗಿ ಮುನಾಫ್ ಪಟೇಲ್ ಅಪತ್ಬಾಂಧವರಾಗಿ ಹೊರಹೊಮ್ಮಿದರು.

ಪರಿಣಾಮ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ 1-1 ಸಮಬಲ ಸಾಧಿಸಲು ಪ್ರವಾಸಿ ಭಾರತಕ್ಕೆ ಸಾಧ್ಯವಾಯಿತು. ಹಾಗಾಗಿ ಮುನಾಫ್ ಬಗ್ಗೆ ನಾಯಕ ದೋನಿ ಮೆಚ್ಚುಗೆಯ ಸುರಿಮಳೆ ಹರಿಸಿದರು.

‘ಬೌಲರ್‌ಗಳು ತಂಡವನ್ನು ಗೆಲ್ಲಿಸಿಕೊಟ್ಟರು. ಮುನಾಫ್ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದರು. ಹಾಶೀಮ್ ಆಮ್ಲಾ ವಿಕೆಟ್ ಪಡೆದಿದ್ದು ಟರ್ನಿಂಗ್ ಪಾಯಿಂಟ್. ಅವರು ಚೆಂಡನ್ನು ನೇರವಾಗಿ ಹಾಕುತ್ತಾರೆ. ಜೊತೆಗೆ ಬೌಲಿಂಗ್‌ನಲ್ಲಿ ವೈವಿಧ್ಯತೆ ಇದೆ. ಮುನಾಫ್ ಪಂದ್ಯ ಶ್ರೇಷ್ಠ ಗೌರವಕ್ಕೆ ಅರ್ಹರು’ ಎಂದು ದೋನಿ ಮೆಚ್ಚುಗೆ ಸೂಚಿಸಿದರು.

ನ್ಯೂ ವಾಂಡರರ್ಸ್ ಕ್ರೀಡಾಂಣದಲ್ಲಿ ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಭಾರತದ 190 ರನ್‌ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಇನ್ನೂ 42 ಎಸೆತಗಳು ಇರುವಂತೆ 189 ರನ್‌ಗಳಿಗೆ ಆಲ್ ಔಟ್ ಆಗಿತ್ತು. ಹಾಗಾಗಿ ಭಾರತಕ್ಕೆ 1 ರನ್‌ನ ರೋಚಕ ಗೆಲುವು ಲಭಿಸಿತ್ತು. ಇದಕ್ಕೆ ಕಾರಣ ಮುನಾಫ್ (29ಕ್ಕೆ4) ಅವರ ಪ್ರಭಾವಿ ಬೌಲಿಂಗ್ ದಾಳಿ.
‘ಬ್ಯಾಟಿಂಗ್‌ನಲ್ಲಿ ಮತ್ತೆ ನಾವು ವಿಫಲರಾದೆವು. ಈ ಪಂದ್ಯದಲ್ಲಿ ನಿಧಾನವಾದರೂ ಉತ್ತಮ ಆರಂಭ ಪಡೆದಿದ್ದೆವು. ಆದರೆ ಕ್ರಮೇಣ ವಿಕೆಟ್‌ಗಳು ಪತನಗೊಂಡವು. ಪವರ್ ಪ್ಲೇನಲ್ಲೂ ವಿಕೆಟ್‌ಗಳು ಉರುಳಿದವು. ಹಾಗಾಗಿ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ’ ಎಂದರು.

‘ಹರಭಜನ್ ಬೌಲಿಂಗ್ ಕೂಡ ಚೆನ್ನಾಗಿತ್ತು. ಅವರು ಬೌಲ್ ಮಾಡಲು ಬರುವ ಮುನ್ನ ದಕ್ಷಿಣ ಆಫ್ರಿಕಾ ಸಂಪೂರ್ಣ ಮೇಲುಗೈ ಸಾಧಿಸಿತ್ತು. ಆದರೆ ಭಜ್ಜಿ ಎದುರಾಳಿಯನ್ನು ನಿಯಂತ್ರಿಸಿದರು. ಜೊತೆಗೆ ಎದುರಾಳಿ ತಂಡದ ಬ್ಯಾಟಿಂಗ್ ಯೋಜನೆ ಕೂಡ ಬದಲಾಯಿತು. ಇದು ಪಂದ್ಯವನ್ನು ನಮ್ಮ ಕಡೆ ತಿರುಗಿಸಿತು’ ಎಂದು ದೋನಿ ವಿವರಿಸಿದರು.
ಆದರೆ ಕೆಟ್ಟ ಹೊಡೆತಗಳು ತಂಡದ ಸೋಲಿಗೆ ಕಾರಣವಾದವು ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಗ್ರೇಮ್ ಸ್ಮಿತ್ ನುಡಿದರು. ಸ್ಮಿತ್ (77) ಮಾತ್ರ ಈ ಪಿಚ್‌ನಲ್ಲಿ ಕೊಂಚ ಪ್ರತಿರೋಧ ತೋರಿದರು. ‘ಈ ಪಿಚ್‌ನಲ್ಲಿ ಮನಸ್ಸಿಗೆ ಬಂದಂತೆ ಚೆಂಡನ್ನು ಬಾರಿಸಲು ಅಸಾಧ್ಯ. ಎಸೆತಗಳನ್ನು ತೂಗಿ ನೋಡಿ ಆಡಬೇಕು. ಹೊಡೆತಗಳ ಆಯ್ಕೆ ಬಗ್ಗೆ ಬ್ಯಾಟ್ಸ್‌ಮನ್‌ಗಳು ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT