ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸುಕಿನ ಜೋಳದತ್ತ ಗಡಿ ರೈತರು

Last Updated 24 ಸೆಪ್ಟೆಂಬರ್ 2011, 9:15 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ಕಸಬಾ, ನಿಡಗಲ್ ಹೋಬಳಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮುಸುಕಿನಜೋಳ ಜನಪ್ರಿಯವಾಗುತ್ತಿದೆ.

ಗುಮ್ಮಗಟ್ಟೆ, ಅಕ್ಕಮನಹಳ್ಳಿ, ಚನ್ನಮ್ಮರೆಡ್ಡಿಹಳ್ಳಿ, ಬೋಡರಹಳ್ಳಿ, ಕನಕಾಪುರ, ಮುರಾನಹಳ್ಳಿ, ದೊಮ್ಮತ್ತಮರಿ ಗ್ರಾಮಗಳಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೂ ಬೆಳದು ನಿಂತ ಮುಸುಕಿನಜೋಳದ ಹೊಲಗಳು ಮತ್ತು ಡಾಂಬರು ರಸ್ತೆಯ ಮೇಲೆ ಜೋಳ ಒಣಗಿಸುತ್ತಿರುವ ರೈತರು ಕಾಣಿಸುತ್ತಾರೆ.

ಉತ್ತಮ ಗುಣಮಟ್ಟದ ಕಬ್ಬು, ಶ್ರೇಷ್ಠ ದರ್ಜೆಯ `ಶ್ರೀಮಾರ್ಕ್~ ಬೆಲ್ಲಕ್ಕೆ ಹೆಸರುವಾಸಿಯಾಗಿದ್ದ ದೊಮ್ಮತ್ತಮರಿ ಪಂಚಾಯಿತಿಯ ಗುಮ್ಮಗಟ್ಟೆ ಗ್ರಾಮದಲ್ಲಿ ಇದೀಗ ಹೈಬ್ರಿಡ್ ಮುಸುಕಿನಜೋಳದ್ದೇ ಮಾತು.

`ಮುಸುಕಿನಜೋಳ ಹೊಸ ಬೆಳೆ ಸ್ವಾಮಿ. 2009ರಿಂದೀಚೆಗೆ ಹೆಚ್ಚು ಬೆಳೆತಿದ್ದೀವಿ. ಮೊದ್ಲು ನಾವೆಲ್ಲಾ ಕಬ್ಬು ಬೆಳೀತಿದ್ವಿ. ಬೆಲ್ಲದಲ್ಲಿ ಒಳ್ಳೇ ದುಡ್ಡು ಆಗ್ತಿತ್ತು. ರಾತ್ರಿ ಹೊತ್ತು ಆಲೆಮನೆ ಕಾಯಿಸಲು ಕಾರ್ಮಿಕರು ಸಿಗ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಮುಸುಕಿನಜೋಳ ಬೆಳಿತಿದ್ದೀವಿ~ ಎನ್ನುತ್ತಾರೆ ಗುಮ್ಮಗಟ್ಟೆ ಗ್ರಾಮದ ರೈತ ಭಗವಂತರೆಡ್ಡಿ.

ಗುಮ್ಮಗಟ್ಟೆ ಊರಿನಲ್ಲಿಯೇ ಸುಮಾರು 200 ಎಕರೆ ಪ್ರದೇಶದಲ್ಲಿ ಮುಸುಕಿನಜೋಳ ನಗುತ್ತಿದೆ. ನೀರಾವರಿ ಅನುಕೂಲವಿರುವ ಈ ಗ್ರಾಮದಲ್ಲಿ ವರ್ಷಕ್ಕೆ ಸರಾಸರಿ 30ರಿಂದ 35 ಕ್ವಿಂಟಲ್ ಜೋಳದ ಇಳುವರಿ ದೊರೆಯುತ್ತಿದೆ. ಒಂದು ಎಕರೆ ಮುಸುಕಿನ ಜೋಳ ಬೆಳೆಯಲು ಸರಾಸರಿ ರೂ. 4000 ಖರ್ಚಾಗುತ್ತದೆ.

ಆಂಧ್ರ ಮೂಲದ ವ್ಯಾಪಾರಿಗಳು ಗ್ರಾಮಕ್ಕೇ ಬಂದು ಬಯಲಿನಲ್ಲಿ ಒಣ ಹಾಕಿರುವ ಜೋಳವನ್ನು ಖರೀದಿಸುತ್ತಾರೆ. ಹೀಗಾಗಿ ಮಾರುಕಟ್ಟೆ ಸಮಸ್ಯೆಯೂ ಇಲ್ಲ. ಪ್ರಸ್ತುತ ಪ್ರತಿ ಕ್ವಿಂಟಲ್ ಹೈಬ್ರಿಡ್ ಮುಸುಕಿನ ಜೋಳಕ್ಕೆ ರೂ. 1080 ಧಾರಣೆ ಇದೆ ಎಂದು ಲೆಕ್ಕಾಚಾರ ಬಿಡಿಸಿಡುತ್ತಾರೆ ಮತ್ತೊಬ್ಬ ರೈತ ವಿಶ್ವೇಶ್ವರಯ್ಯ.

ಮುಸುಕಿನಜೋಳ ಬಿತ್ತುವ ಮೊದಲು ನೀರಿನ ಅನುಕೂಲತೆ ಗಮನಿಸಿಕೊಳ್ಳಬೇಕು. ಮಳೆ ಕೈಕೊಟ್ರೆ ಮುಸುಕಿನ ಜೋಳದಲ್ಲಿ ಅಸಲೂ ಹುಟ್ಟುವುದಿಲ್ಲ ಎಂದು ಎಚ್ಚರಿಸಲು ಅವರು ಮರೆಯುವುದಿಲ್ಲ.

ಸೂಕ್ತವಲ್ಲ: ಮಳೆಯೊಂದಿಗೆ ನಿರಂತರ ಜೂಜಾಡುವ ಪಾವಗಡದಂಥ ತಾಲ್ಲೂಕಿಗೆ ಮುಸುಕಿನ ಜೋಳ ಯಾವ ರೀತಿಯಲ್ಲೂ ಸೂಕ್ತ ಬೆಳೆಯಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀರಾಮರೆಡ್ಡಿ, ಪಾವಗಡ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಶ್ರೀಧರ್.

ಆಂಧ್ರ ಗಡಿಯಲ್ಲಿರುವ ಕೆಲವು ಗ್ರಾಮಗಳ ರೈತರು ಇತ್ತೀಚೆಗೆ ಮುಸುಕಿನಜೋಳ ಹಾಕುತ್ತಿರುವ ಮಾಹಿತಿ ಇದೆ. ಆದರೆ ಇಲ್ಲಿನ ನೆಲಕ್ಕೆ ಆ ಬೆಳೆ ಹೊಂದುವುದಿಲ್ಲ. ಈ ಕುರಿತು ಇನ್ನಷ್ಟು ಸಂಶೋಧನೆಯಾಗಬೇಕಾದ ಅಗತ್ಯವಿದೆ ಎನ್ನುವುದು ಶ್ರೀಧರ್ ಅಭಿಪ್ರಾಯ.

ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಪಾವಗಡ ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 825 ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗಿದೆ.

ದುಬಾರಿ ಬೆಳೆ: ಅಕ್ಕಡಿಗೆ ಅವಕಾಶವೇ ಇಲ್ಲದ ಮುಸುಕಿನ ಜೋಳದಂಥ ಏಕ ವಾಣಿಜ್ಯ ಬೆಳೆಯತ್ತ ರೈತರು ವಾಲುತ್ತಿರುವುದು ಕೆಲವು ಗ್ರಾಮಗಳಲ್ಲಿ ಸಾಂಸ್ಕೃತಿಕ ತಲ್ಲಣಗಳನ್ನೂ ಹುಟ್ಟುಹಾಕಿದೆ.

`ಮುಸುಕಿನ ಜೋಳ ಹೆಸರಿಗೆ ಧಾನ್ಯವಾದರೂ ವಾಸ್ತವವಾಗಿ ವಾಣಿಜ್ಯ ಬೆಳೆ. ಕೋಳಿ ಸಾಕಣೆ ಉದ್ಯಮದ ಸ್ಥಿತಿಗತಿಯ ಮೇಲೆ ಮುಸುಕಿನ ಜೋಳದ ಬೆಲೆ ಅವಲಂಭಿಸಿರುತ್ತದೆ. ಕೋಳಿಜ್ವರದಂಥ ಸಾಮೂಹಿಕ ದುರಂತ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಮುಸುಕಿನ ಜೋಳದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಯಬಹುದು. ಅಕ್ಕಡಿ ಬೆಳೆಯುವ ಅವಕಾಶವೂ ಇಲ್ಲದ ಕಾರಣ ರೈತರು ಸಂಪೂರ್ಣ ನೆಲಕಚ್ಚುವ ಸಾಧ್ಯತೆ ಇರುತ್ತದೆ~ ಎಂದು ವಿಶ್ಲೇಷಿಸುತ್ತಾರೆ `ಕೃಷಿ ಮಾಧ್ಯಮ ಕೇಂದ್ರ~ದ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ಹೊಸಪಾಳ್ಯ.

`ಮುಸುಕಿನ ಜೋಳಕ್ಕೆ ಭೂಮಿಯ ಪಸೆ ಆರದಂತೆ ನೀರುಕೊಡಬೇಕು. ಶಾಶ್ವತ ನೀರಾವರಿ ಸೌಕರ್ಯ, ವಿಪುಲ ಅಂತರ್ಜಲ, ಯಥೇಚ್ಛ ಮಳೆಯ ಯಾವ ಸಾಧ್ಯತೆಯೂ ಇಲ್ಲದ ಪಾವಗಡದಲ್ಲಿ ಇದು ಖಂಡಿತ ದುಬಾರಿ ಬೆಳೆ.

ನೆರೆಯ ಮಡಕಶಿರಾ ತಾಲ್ಲೂಕಿನಲ್ಲಿ ಈಗಾಗಲೇ ಕೊಳವೆಬಾವಿ ಕೊರೆಸುವುದನ್ನು ಅನಂತಪುರ ಜಿಲ್ಲಾಡಳಿತ ಸಂಪೂರ್ಣ ನಿಷೇಧಿಸಿದೆ. ಈ ದೃಷ್ಟಿಯಿಂದ ಗಮನಿಸಿದರೆ, ಮುಸುಕಿನಜೋಳ ತಕ್ಷಣಕ್ಕೆ ಲಾಭ ತಂದುಕೊಟ್ಟರೂ ದೀರ್ಘಕಾಲದಲ್ಲಿ ದುಷ್ಟಪರಿಣಾಮ ಬೀರುತ್ತದೆ~ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT