ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡುಬಿದಿರೆಯಲ್ಲಿ ಇಂದಿನಿಂದ ಆಳ್ವಾಸ್‌ ವಿಶ್ವ ನುಡಿಸಿರಿ ವಿರಾಸತ್‌

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಂಗಳೂರು: ಸಾಹಿತ್ಯ ಚಿಂತನೆ­ಯೊಂದಿಗೆ ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸವನ್ನು ಕಳೆದ 9 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತ ಬಂದ ನುಡಿಸಿರಿಯ ದಶಮಾನೋತ್ಸವ ಮತ್ತು  ಜಗತ್ತಿನ ನಾನಾ ಭಾಗದ ಕಲಾವಿದರನ್ನು ಒಂದೆಡೆ ಸೇರಿಸಿ ಕಳೆದ 19 ವರ್ಷಗಳಿಂದ ರಸದೌತಣ ನೀಡುತ್ತ ಬಂದ ವಿರಾಸತ್‌ನ ದ್ವಿದಶ ಸಂಭ್ರಮ ಗುರುವಾರದಿಂದ ‘ಆಳ್ವಾಸ್‌ ವಿಶ್ವ ನುಡಿಸಿರಿ ವಿರಾಸತ್‌ 2013’ ರೂಪ­ದಲ್ಲಿ ಆರಂಭವಾಗಲಿದೆ.

ಮಧ್ಯಾಹ್ನ 3ರಿಂದ  ಚೌಟರ ಮನೆ­ಯಿಂದ ಹೊರಡುವ ಬೃಹತ್‌ ಜಾನಪದ ಸಾಂಸ್ಕೃತಿಕ ಮೆರ­ವ­ಣಿಗೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದ್ದು, ವಿದ್ಯಾಗಿರಿಯ ರತ್ನಾಕರ ವರ್ಣಿ ವೇದಿಕೆ­ಯಲ್ಲಿ ಸಂಜೆ 6ಕ್ಕೆ ಉದ್ಘಾಟನಾ ಸಮಾ­ರಂಭ ಆರಂಭವಾಗಲಿದೆ.

ಸಮಾರಂಭದ ಬಳಿಕ ರಾತ್ರಿ 9.15ಕ್ಕೆ ಇದೇ ವೇದಿಕೆಯಲ್ಲಿ ರಾಜ್ಯದ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ, ಡಾ.ವಿ.ಎಸ್‌.ಆಚಾರ್ಯ ವೇದಿಕೆ ಮತ್ತು ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರ­ದಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ  ಅವರು ತಿಳಿಸಿದ್ದಾರೆ.

ರತ್ನಾಕರ ವರ್ಣಿ ವೇದಿಕೆಯಲ್ಲಿ ಶುಕ್ರ­ವಾರದಿಂದ ಭಾನುವಾರದವರೆಗೆ ಸಾಹಿತ್ಯ ಗೋಷ್ಠಿಗಳು, ಕವಿತಾ ವಾಚನ, ಉಪನ್ಯಾಸಗಳು ನಡೆಯಲಿದ್ದರೆ, ಪಂಜೆ ಮಂಗೇಶರಾಯ ವೇದಿಕೆಯಲ್ಲಿ ವಿದ್ಯಾರ್ಥಿ ಸಿರಿ ಕಾರ್ಯಕ್ರಮಗಳು ನಡೆಯಲಿವೆ. ಎಚ್‌.ಎಲ್‌. ನಾಗೇಗೌಡ ವೇದಿಕೆಯಲ್ಲಿ ಮೂರೂ ದಿನ ಜಾನಪದ ಸಿರಿ ಕಾರ್ಯಕ್ರಮಗಳು, ವರ್ಗೀಸ್‌ ಕುರಿಯನ್‌ ವೇದಿಕೆಯಲ್ಲಿ ಕೃಷಿ ಸಿರಿ ಕಾರ್ಯಕ್ರಮಗಳು ನಡೆಯಲಿವೆ.

ವಿದ್ಯಾಗಿರಿಯಲ್ಲೇ ಆಳ್ವಾಸ್‌ ವಿರಾ­ಸತ್‌ ವೇದಿಕೆ ನಿರ್ಮಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಧಾನ ವೇದಿಕೆ ಇದಾಗಿರುತ್ತದೆ. (ಇದುವರೆಗೆ ಮಿಜಾರಿನ ಶೋಭಾವನದಲ್ಲಿ ವಿರಾಸತ್‌ ನಡೆಸಲಾಗುತ್ತಿತ್ತು). ಶುಕ್ರವಾರ ಸಂಜೆ 5.45ಕ್ಕೆ ವಿರಾಸತ್‌ನ ಉದ್ಘಾಟನೆ ಸಂದರ್ಭದಲ್ಲಿ ಖ್ಯಾತ ಪಾಂಡ್ವಾನಿ ಸಂಗೀತ ಕಲಾವಿದೆ ಡಾ.ತೀಜನ್‌ ಬಾಯಿ ಅವರಿಗೆ ಆಳ್ವಾಸ್‌ ವಿಶ್ವ ವಿರಾಸತ್‌ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ವಿರಾಸತ್‌ ವೇದಿಕೆ, ನುಡಿಸಿರಿಯ ಪ್ರಧಾನ ವೇದಿಕೆ ಮತ್ತು ಇತರ 7 ವೇದಿಕೆ­ಗಳಲ್ಲಿ ಶುಕ್ರವಾರದಿಂದ ಭಾನುವಾರ­ದವರೆಗೆ ಸಂಜೆ 6ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯ­ಲಿವೆ. ಈ ಪೈಕಿ ಡಾ.ವಿ.ಎಸ್‌.ಆಚಾರ್ಯ ವೇದಿಕೆಯಲ್ಲಂತೂ ಬೆಳಿಗ್ಗೆ 10ರಿಂದ ಮಧ್ಯರಾತ್ರಿಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯಲಿವೆ.

ನಾಲ್ಕು ದಿನಗಳ ಈ ಸಾಹಿತ್ಯ, ಸಾಂಸ್ಕೃತಿಕ, ಕೃಷಿ ಉತ್ಸವದಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇಟ್ಟು­ಕೊಳ್ಳಲಾಗಿದ್ದು,  ರೂ 15 ಕೋಟಿ  ವೆಚ್ಚ ಮಾಡಲಾಗುತ್ತಿದೆ. ಪ್ರತಿ ದಿನ 2 ಲಕ್ಷ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ತೆರೆದುಕೊಳ್ಳಲಿದೆ ಸಾಂಸ್ಕೃತಿಕ ಲೋಕ
ವಿರಾಸತ್‌ನ ಮೂರೂ ದಿನ ಸಂಜೆ ದೇಶ, ವಿದೇಶಗಳ ಮಹಾನ್ ಕಲಾವಿದರು ಮೂಡುಬಿದಿರೆಯ 9 ವೇದಿಕೆಗಳಲ್ಲಿ ಕಲಾ ರಸದೌತಣ ನೀಡಲಿದ್ದಾರೆ. ಫ್ಯೂಷನ್‌, ನೃತ್ಯ, ರಸಮಂಜರಿ, ಗಾಯನ, ಜಾನಪದ ಗೀತೆ, ಭಕ್ತಿಗೀತೆ, ಗೊಂಬೆಯಾಟ, ನಾಟಕ, ಯಕ್ಷಗಾನ ಸಹಿತ ಸಾವಿರಾರು ಕಲಾವಿದರು ತಮ್ಮ ಕಲಾ ಪ್ರೌಢಿಮೆ ತೋರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT