ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಪಕ್ಷಗಳಿಗೂ ಅವಕಾಶ ನೀಡಿದ ಕ್ಷೇತ್ರ

Last Updated 14 ಏಪ್ರಿಲ್ 2013, 9:38 IST
ಅಕ್ಷರ ಗಾತ್ರ

ಬೆಳ್ತಂಗಡಿ:ಉತ್ತರ ಭಾಗದಲ್ಲಿ ನಿತ್ಯಹರಿದ್ವರ್ಣದ ಕುದುರೆಮುಖ ಪರ್ವತ ಶ್ರೇಣಿಯ ನೆರಳು, ಪೂರ್ವಕ್ಕೆ ಪಶ್ಚಿಮ ಘಟ್ಟದ ತಪ್ಪಲು, ದಕ್ಷಿಣದಲ್ಲಿ ಪುತ್ತೂರು ತಾಲ್ಲೂಕು, ಪಶ್ಚಿಮಾಭಿ ಮುಖಕ್ಕೆ ಬಂಟ್ವಾಳ ತಾಲ್ಲೂಕು ಸುತ್ತುವ ರಿದಿರುವ ಬೆಳ್ತಂಗಡಿ ತಾಲ್ಲೂಕಿನ ಹೆಚ್ಚಿನ ಭಾಗ ಸರ್ವ ಋತುವಿನಲ್ಲೂ ಹಸಿರಾಗಿ ಕಂಗೊಳಿಸುತ್ತದೆ.

ತಾಲ್ಲೂಕಿನಲ್ಲಿ ಜಲ ಸೆಲೆಗಳಾದ ನೇತ್ರಾವತಿ, ಫಲ್ಗುಣಿ, ಕಪಿಲಾ ಮೊದಲಾದ ನದಿಗಳ ಜತೆಗೆ ಉಪನದಿಗಳು ಹರಿಯುತ್ತವೆ. ಕೃಷಿ ಪ್ರಧಾನ ಪ್ರದೇಶ ಎಂಬ ಹೆಗ್ಗಳಿಕೆಯೂ ಬೆಳ್ತಂಗಡಿ ತಾಲ್ಲೂಕಿಗೆ ಇದೆ.

ಸರ್ವಧರ್ಮ ಸಮನ್ವಯ ಕೇಂದ್ರ ಹಾಗೂ ನಾಡಿನ ಪವಿತ್ರ ಯಾತ್ರಾಸ್ಥಳ ಧರ್ಮಸ್ಥಳ, ವೇಣೂರು, ಮುಸ್ಲಿಮರ ಪವಿತ್ರ ಕ್ಷೇತ್ರ ಕಾಜೂರು, ಐತಿಹಾಸಿಕ ಜಮಲಾಬಾದ್ ಇಲ್ಲಿದೆ. ಬಂಗಾಡಿ, ವೇಣೂರು ಮತ್ತು ಅಳದಂಗಡಿ ಐತಿಹಾಸಿಕವಾಗಿಯೂ ಪ್ರಸಿದ್ಧವಾಗಿವೆ.

ಪುತ್ತೂರು ತಾಲ್ಲೂಕು ವ್ಯಾಪ್ತಿಗೆ ಸೇರಿದ್ದ ಬೆಳ್ತಂಗಡಿ 1952ರಲ್ಲಿ ತಾಲ್ಲೂಕಾಗಿ ಅಸ್ತಿತ್ವ ಕಂಡುಕೊಂಡಿತು. ಬೆಳ್ತಂಗಡಿ ಹೋಬಳಿಯ 25, ಕೊಕ್ಕಡ ಹೋಬಳಿಯ 25,ಉಪ್ಪಿನಂಗಡಿ ಹೋಬಳಿಗೆ ಸೇರಿದ್ದ 2 ಹಾಗೂ ಕಾರ್ಕಳ ತಾಲ್ಲೂಕಿಗೆ ಸೇರಿದ್ದ ವೇಣೂರು ಹೋಬಳಿಯ 29 ಗ್ರಾಮಗಳನ್ನು ಒಟ್ಟು ಸೇರಿಸಿ ಆ ಸಂದರ್ಭದಲ್ಲಿ ಬೆಳ್ತಂಗಡಿ ತಾಲ್ಲೂಕನ್ನಾಗಿ ರೂಪಿಸಲಾಯಿತು.

ಹೀಗಿರುವ ಬೆಳ್ತಂಗಡಿ ತಾಲ್ಲೂಕಿನಲ್ಲಿ ಒಟ್ಟು 81 ಗ್ರಾಮಗಳಿವೆ. 1,37, 510 ಹೆಕ್ಟೆರ್ ವಿಸ್ತೀರ್ಣ ಹೊಂದಿರುವ ಬೆಳ್ತಂಗಡಿಯಲ್ಲಿ 1,89, 625 ಮತದಾರರಿದ್ದಾರೆ. ಈ ಪೈಕಿ 96,494 ಪುರುಷರು, 93,131 ಮಹಿಳೆಯರು ಇದ್ದಾರೆ. ಮತದಾರರ ಪಟ್ಟಿಗೆ 11,052 ಮಂದಿ ಹೊಸ ಸೇರ್ಪಡೆ ಯಾದರೆ, 2,989 ಮಂದಿ ತಮ್ಮ ಹೆಸರು ತೆಗೆಯಲು ಅರ್ಜಿ ಸಲ್ಲಿಸಿದ್ದಾರೆ.

ಗಮನ ಸೆಳೆದ ಕ್ಷೇತ್ರ: ರಾಜಕೀಯವಾಗಿ ಹಲವು ಬಾರಿ ರಾಜ್ಯ, ರಾಷ್ಟ್ರದ ಗಮನವನ್ನು ಬೆಳ್ತಂಗಡಿ ಸೆಳೆದಿದೆ. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ಪರ್ಧೆಯಿಂದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಸಹೋದರರಾದ ಶಾಸಕ ವಸಂತ ಬಂಗೇರ ಹಾಗೂ ಮಾಜಿ ಶಾಸಕ ಪ್ರಭಾಕರ ಬಂಗೇರ ಅವರ ಮುಖಾಮುಖಿ ಸ್ಪರ್ಧೆಯಿಂದಾಗಿ ರಾಜ್ಯಮಟ್ಟದಲ್ಲೂ ಬೆಳ್ತಂಗಡಿಯ ಚುನಾವಣಾ ಕಣ ಗಮನ ಸೆಳೆದಿತ್ತು.

ಬೆಳ್ತಂಗಡಿ ತಾಲ್ಲೂಕಿನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಿಪಿಎಂ, ಬಿಎಸ್‌ಪಿ ಹಾಗೂ ಎಸ್‌ಡಿಪಿಐ ಪಕ್ಷಗಳು ಕಣದಲ್ಲಿವೆ. ಈ ಹಿಂದೆ 14 ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಶಾಸಕರು 9 ಬಾರಿ, ಬಿಜೆಪಿ ಬೆಂಬಲಿತ ಶಾಸಕರು 4 ಬಾರಿ, ಜೆಡಿಎಸ್ ಬೆಂಬಲಿತ ಶಾಸಕರು 1 ಬಾರಿ ಜಯ ಗಳಿಸಿದ್ದಾರೆ.

ಸುಳ್ಯ ತಾಲ್ಲೂಕಿನ ಬಾಳುಗೋಡು ವೆಂಕಟ್ರಮಣ ಗೌಡ, ಧರ್ಮಸ್ಥಳದ ರತ್ನವರ್ಮ ಹೆಗ್ಗಡೆ, ಕೆ.ಸುಬ್ರಹ್ಮಣ್ಯ ಗೌಡ, ಚಿದಾನಂದ ಪೂಜಾರಿ ಒಂದು ಅವಧಿಗೆ, ವೈಕುಂಠ ಬಾಳಿಗ, ಕೆ.ಗಂಗಾಧರ ಗೌಡ, ಕೆ.ಪ್ರಭಾಕರ ಬಂಗೇರ ಎರಡು ಅವಧಿಯಲ್ಲಿ ಹಾಗೂ ಕೆ.ವಸಂತ ಬಂಗೇರ 4 ಬಾರಿ ಶಾಸಕರಾಗಿ ತಾಲ್ಲೂಕನ್ನು ಪ್ರತಿನಿಧಿಸಿದ್ದಾರೆ.

ಶಾಸಕರ ಜವಾಬ್ದಾರಿ: ಬೆಳ್ತಂಗಡಿ ತಾಲ್ಲೂಕಿನ ಶಾಸಕರಾಗಿದ್ದ ವೈಕುಂಠ ಬಾಳಿಗ ಅವರು ಹಣಕಾಸು ಸಚಿವರಾಗಿ, ವಿಧಾನಸಭೆಯ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕೆ.ಗಂಗಾಧರ ಗೌಡ ಅವರು ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿ ಸೇವೆಸಲ್ಲಿಸಿದ್ದರೆ, ಕೆ.ವಸಂತ ಬಂಗೇರ ಅವರು ಸರ್ಕಾರದ ಮುಖ್ಯ ಸಚೇತಕರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಚಿದಾನಂದ, ಕೆ.ವಸಂತ ಬಂಗೇರ, ಕೆ.ಪ್ರಭಾಕರ ಬಂಗೇರ ಸೇರಿ ಒಂದೇ ಕುಟುಂಬದ ಮೂವರು ಶಾಸಕರಾದ ದಾಖಲೆಯಿದೆ. ಪ್ರಸ್ತುತ ಶಾಸಕರಾ ಗಿರುವ ಕೆ.ವಸಂತ ಬಂಗೇರ ಅವರು ಮೊದಲ ಬಾರಿಗೆ ಬಿಜೆಪಿ ಬಳಿಕ ಜೆಡಿಎಸ್ ಅನಂತರ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಶಾಸಕರಾದ ಏಕೈಕ ವ್ಯಕ್ತಿ. ಅವರ ಪ್ರತಿಸ್ಪರ್ಧಿಯಾಗಿದ್ದ ಕೆ.ಗಂಗಾಧರ ಗೌಡ ಅವರು ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಆದರೆ ಅವರಿಗೆ ಕಾಂಗ್ರೆಸ್ ಪಕ್ಷ ಮಾತ್ರ ಗೆಲುವು ತಂದು ಕೊಟ್ಟಿದ್ದು.

ಚುನಾವಣಾ ಸಮರ: ಕಾಂಗ್ರೆಸ್‌ನಿಂದ ಶಾಸಕ ಕೆ.ವಸಂತ ಬಂಗೇರ, ಜಾತ್ಯತೀತ ಜನತಾದಳದಿಂದ ರಾಜಶ್ರೀ ಎಸ್. ಹೆಗ್ಡೆ, ಸಿಪಿಎಂನಿಂದ ವಕೀಲ ಬಿ.ಎಂ. ಭಟ್ ಅಧಿಕೃತ ಅಭ್ಯರ್ಥಿ ಗಳಾಗಿದ್ದು ಈಗಾಗಲೇ ಮತಬೇಟೆಯಲ್ಲಿ ತೊಡಗಿದ್ದಾರೆ.
ಹಿಂದೂ ಮುಖಂಡ ಮಹೇಶ ಶೆಟ್ಟಿ ತಿಮರೋಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.

ಕೆ.ವಸಂತ ಬಂಗೇರ ಅವರ ಎದುರು ಹೋರಾಡುವ ಸಮರ್ಥ ಅಭ್ಯರ್ಥಿ ಆಯ್ಕೆ ಬಗ್ಗೆ ಇನ್ನೂ ಬಿ.ಜೆ.ಪಿ ಯಲ್ಲಿ ಗೊಂದಲವಿದೆ. ಒಂದೆರಡು ದಿನಗಳಲ್ಲಿ ಅಭ್ಯರ್ಥಿಯ ಹೆಸರು ಪ್ರಕಟಿಸುವ ಸಾಧ್ಯತೆ ಇದೆ.

1952ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ತಾಲ್ಲೂಕಿನ ಬಾಳುಗೋಡು ವೆಂಕಟರಮಣ ಗೌಡ ಶಾಸಕರಾಗಿ ಆಯ್ಕೆಯಾದರು. 1957ರಲ್ಲಿ ಕಾಂಗ್ರೆಸ್‌ನ ಬೆಂಬಲದಿಂದ ಧರ್ಮಸ್ಥಳದ ರತ್ನವರ್ಮ ಹೆಗ್ಗಡೆ ಶಾಸಕರಾಗಿದ್ದರು. ಅವರಿಗೆ ಪ್ರತಿಸ್ಪರ್ಧಿಯಾಗಿ ರಮಾನಾಥ ಶೆಣೈ ಪಕ್ಷೇತರರಾಗಿ ಸ್ಪರ್ಧಿಸಿದ್ದರು.

1962ರಲ್ಲಿ ವೈಕುಂಠ ಬಾಳಿಗ ಅವರು ಕಾಂಗ್ರೆಸ್ ಬೆಂಬಲದಲ್ಲಿಶಾಸಕರಾಗಿ ಆಯ್ಕೆಯಾಗಿ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. 1967ರಲ್ಲಿ ಮತ್ತೆ ಶಾಸಕರಾದ ವೈಕುಂಠ ಬಾಳಿಗ ಅವರು ವಿಧಾನಸಭೆಯ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

ಶಾಸಕರಾಗಿದ್ದ ಅವಧಿಯಲ್ಲೇ ನಿಧನರಾದ ವೈಕುಂಠ ಬಾಳಿಗ ಅವರ ಸ್ಥಾನಕ್ಕೆ 1968ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದಿಂದ ಕೆ.ಚಿದಾನಂದ ಪೂಜಾರಿ ಅವರು ಶಾಸಕರಾದರು. 1972ರಲ್ಲಿ ಕಾಂಗ್ರೆಸ್ ಬೆಂಬಲದಲ್ಲಿ ಸ್ಪರ್ಧಿಸಿದ ಕೆ.ಸುಬ್ರಹ್ಮಣ್ಯ ಗೌಡ ಅವರು ಶಾಸಕರಾಗಿ ಆಯ್ಕೆಯಾದರು.

1978ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕೆ.ಗಂಗಾಧರ ಗೌಡ ಅವರು ವಿಧಾನಭೆಯ ಮೆಟ್ಟಿಲೇರಿದರು. ಬಳಿಕ 1983ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಕೆ.ವಸಂತ ಬಂಗೇರ ಅವರು ಚೊಚ್ಚಲ ಬಾರಿಗೆ ಶಾಸಕರಾದರು. 1985ರಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದ ಅವರು ಎರಡನೇ ಬಾರಿಗೆ ಶಾಸಕರಾದರು. ಅವರಿಗೆ ಎದುರಾಳಿಗಳಾಗಿ ಕಾಂಗ್ರೆಸ್‌ನಿಂದ ಲೋಕೇಶ್ವರಿ ವಿನಯಚಂದ್ರ, ಜನತಾ ಪಕ್ಷದಿಂದ ಪ್ರಭಾಕರ ಸಂಪಿಗೆತ್ತಾಯ ಸ್ಪರ್ಧಿಸಿದ್ದರು.

1989ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ ಕೆ.ಗಂಗಾಧರ ಗೌಡ ಅವರು ಎರಡನೇ ಬಾರಿಗೆ ಶಾಸಕರಾದರು. ಇದೇ ಅವಧಿಯಲ್ಲಿ ವಸಂತ ಬಂಗೇರ ಅವರು ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಅವರ ಸಹೋದರ ಕೆ.ಪ್ರಭಾಕರ ಬಂಗೇರ ಸ್ಪರ್ಧಿಸಿದ್ದರು. ಇದೇ ಅವಧಿಯಲ್ಲಿ ಆಯ್ಕೆಯಾದ ಕೆ.ಗಂಗಾಧರ ಗೌಡ ಅವರು ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿದ್ದರು.

1994ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಕೃಪೆಯಿಂದ ಮೂರನೇ ಬಾರಿಗೆ ಶಾಸಕರಾದ ಕೆ.ವಸಂತ ಬಂಗೇರ ಅವರು ವಿಧಾನಸಭೆಯ ಮುಖ್ಯ ಸಚೇತಕರಾದರು. ಇದೇ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಗಂಗಾಧರ ಗೌಡ, ಬಿಜೆಪಿಯಿಂದ ಪ್ರಭಾಕರ ಬಂಗೇರ, ಕರ್ನಾಟಕ ಕಾಂಗ್ರೆಸ್‌ನಿಂದ ಚಂದ್ರಶೇಖರ ಪೂಜಾರಿ ಸ್ಪರ್ಧಿಸಿದ್ದರು. 1999ರಲ್ಲಿ ಬಿಜೆಪಿ ಬೆಂಬಲದಿಂದ ಸ್ಪರ್ಧಿಸಿದ್ದ ಕೆ.ಪ್ರಭಾಕರ ಬಂಗೇರ ಪ್ರಥಮ ಬಾರಿಗೆ ಶಾಸಕರಾದರು. ಅವರಿಗೆ ಎದುರಾಳಿಗಳಾಗಿ ಕಾಂಗ್ರೆಸ್‌ನಿಂದ ಗಂಗಾಧರ ಗೌಡ, ಜೆಡಿಎಸ್‌ನಿಂದ ವಸಂತ ಬಂಗೇರ ಸ್ಪರ್ಧೆ ನೀಡಿದ್ದರು.

2004ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಭಾಕರ ಬಂಗೇರ ಎರಡನೇ ಅವಧಿಗೆ ಶಾಸಕರಾದರು. ಕಾಂಗ್ರೆಸ್‌ನಿಂದ ಹರೀಶ್ ಕುಮಾರ್, ಜೆಡಿಎಸ್‌ನಿಂದ ವಸಂತ ಬಂಗೇರ, ಬಿಎಸ್‌ಪಿಯಿಂದ ಚಂದು ಎಲ್., ಕನ್ನಡ ನಾಡು ಪಕ್ಷದಿಂದ ಜನಾರ್ದನ ಗೌಡ, ಪಕ್ಷೇತರರಾಗಿ ವೆಂಕಪ್ಪ ನಾಯ್ಕ, ಕೃಷ್ಣಪ್ಪ ಕೋಟ್ಯಾನ್ ಸ್ಪರ್ಧಿಸಿದ್ದರು.

2008ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಕೈ ಹಿಡಿದ ಕೆ.ವಸಂತ ಬಂಗೇರ ಅವರು ಶಾಸಕರಾದರು. ಅವರ ಎದುರಾಳಿ ಗಂಗಾಧರ ಗೌಡ ಅವರು ಕಾಂಗ್ರೆಸ್ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಪ್ರಭಾಕರ ಬಂಗೇರ, ಪಕ್ಷೇತರರಾಗಿ ಮಹೇಶ್ ಶೆಟ್ಟಿ ತಿಮರೋಡಿ, ಬಿಎಸ್‌ಪಿಯಿಂದ ರಘು ಧರ್ಮಸೇನ ಸ್ಪರ್ಧಿಸಿದ್ದರು.

ಬದಲಾದ ಕಾಲಘಟ್ಟದಲ್ಲಿ ಮತ್ತೆ ಪಕ್ಷಾಂತರ ಮಾಡಿದ ಕೆ.ಗಂಗಾಧರ ಗೌಡ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರಿಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT