ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ವಂಚಿತ ಗಡಿಭಾಗದ ಗ್ರಾಮ

Last Updated 12 ಸೆಪ್ಟೆಂಬರ್ 2011, 8:20 IST
ಅಕ್ಷರ ಗಾತ್ರ

ಪರಶುರಾಂಪುರ: ಚಳ್ಳಕೆರೆ ತಾಲ್ಲೂಕು ಕೇಂದ್ರದಿಂದ ಸುಮಾರು 42 ಕಿ.ಮೀ. ದೂರದಲ್ಲಿರುವ ಆಂಧ್ರ ಗಡಿಭಾಗದ ಕಡೇಹುಡೇ ಗ್ರಾಮವು ಹೆಚ್ಚಾಗಿ ಪರಿಶಿಷ್ಟ ಜಾತಿ- ಪಂಗಡ ಜನರನ್ನು ಹೊಂದಿದ್ದು, ಮೂಲ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತವಾಗಿದೆ.

ಹಿಂದುಳಿದ ಸಮುದಾಯದ ಜನರು ಬಹುಪಾಲು ಈಗಲೂ ಗುಡಿಸಲುಗಳಲ್ಲಿ ವಾಸಿಸುವುದು ಸರ್ವೆ ಸಾಮಾನ್ಯವಾಗಿದ್ದು, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಗಳು ತಗ್ಗು-ಗುಂಡಿಗಳಿಂದ ಕೂಡಿದ್ದು, ಕೊಳಚೆ ನೀರು ರಸ್ತೆಗೆ ಹರಿದು ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭೀತಿಯನ್ನೂ ಇಲ್ಲಿನ ಜನರು ಎದುರಿಸುತ್ತಿದ್ದಾರೆ.

ಪಿ. ಮಹಾದೇವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮವು ಹಿಂದೆ ಆಂಧ್ರಪ್ರದೇಶಕ್ಕೆ ಒಳಪಟ್ಟಿದ್ದು, ಭಾಷವಾರು ಪ್ರಾಂತ್ಯಗಳ ಆಧಾರದಲ್ಲಿ ವಿಂಗಡಣೆಯಾದಾಗ ಈ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಗಳು ಕರ್ನಾಟಕಕ್ಕೆ ಸೇರ್ಪಡೆಯಾಗಿದ್ದು,  ಹಿಂದಿನ ದಾಖಲೆಗಳು ತೆಲುಗಿನಲ್ಲಿ ಇವೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

1,500 ಜನಸಂಖ್ಯೆ ಹೊಂದಿರುವ ಈ ಗ್ರಾಮಕ್ಕೆ ರಸ್ತೆಗಳ ವ್ಯವಸ್ಥೆ ಅಸಮರ್ಪಕವಾಗಿದ್ದು,  ಮುಖ್ಯರಸ್ತೆಗಳಾದ ಪಾವಗಡ- ಚಳ್ಳಕೆರೆ ಹಾಗೂ ಅಮರಾಪುರ- ಪರಶುರಾಂಪುರ ರಸ್ತೆಯಿಂದ 5 ಕಿ.ಮೀ. ನಡೆದುಕೊಂಡೆ ಊರನ್ನು ತಲುಪಬೇಕು. ಯತೇಚ್ಛವಾಗಿ ಮಳೆ ಬಂದರೆ ರಸ್ತೆಗಳು ಜಲಾವೃತಗೊಂಡು ಗ್ದ್ದದೆಬದುಗಳ ಮೇಲೆಯೇ ನಡೆದು ಹೋಗಬೇಕಾದ ಅನಿವಾರ್ಯತೆ ಇದೆ. ಸ್ಥಳೀಯರ ಹೋರಾಟದ ಫಲವಾಗಿ 2 ಖಾಸಗಿ ಬಸ್ಸು ಬಂದುಹೊಗುತ್ತಿವೆ. ಒಮ್ಮಮ್ಮೆ ಅವು ಸಹ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತವೆ ಎಂದು ಗ್ರಾಮದ ಯುವಕ ರಾಜೇಶ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಪ್ರಮುಖ ದೇವಸ್ಥಾನಗಳು: ಗ್ರಾಮ ದೇವತೆ ಅಚ್ಚವಳ್ಳಿ ಮಾರಮ್ಮ, ಶನೇಶ್ವರ, ಆಂಜನೇಯ, ಇದರಲ್ಲಿ ಮಾರಮ್ಮ ಹಾಗೂ ಆಂಜನೇಯ ದೇವರುಗಳು ಮೂಲ ದೇವರುಗಳಾಗಿವೆ. ಊರ ಹೊರಗೆ `ಅಚ್ಚವಳ್ಳಿ ಈಚಲು~ ಎಂಬ ಪ್ರದೇಶವನ್ನು ಈಗಲೂ ಕಾಣಬಹುದು.

ಶನೇಶ್ವರ ದೇವಸ್ಥಾನವು ಸುಮಾರು 70-80 ವರ್ಷಗಳ ಹಿಂದೆ ಸ್ಥಾಪಿತವಾಗಿದ್ದು, ಅಂದಿನಿಂದಲೂ ಶನೇಶ್ವರ ಹಾಗೂ ಮಾರಮ್ಮನ ಜಾತ್ರೆ ಪ್ರತಿವರ್ಷ ಮಾಘಮಾಸದಲ್ಲಿ ಒಟ್ಟಿಗೆ ಆಚರಣೆ ಮಾಡುತ್ತಿರುವುದು ಇಲ್ಲಿನ ವಿಶೇಷ.

ಸುಮಾರು 60 ವರ್ಷಗಳಿಂದ ಈ ಗ್ರಾಮದಲ್ಲಿ `ಥಿಯೋಸಾಫಿಕಲ್ ಸೊಸೈಟಿ~ ಅಸ್ತಿತ್ವದಲ್ಲಿದ್ದು, ನಿರಂತರ ಆಧ್ಯಾತ್ಮಿಕ ಕಾರ್ಯ ಚಟುವಟಿಕೆಗಳನ್ನು ಗ್ರಾಮೀಣ ಭಾಗದಲ್ಲಿ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಅಧ್ಯಕ್ಷ ವೆಂಕಟೇಶ್ ಹೇಳುತ್ತಾರೆ.

ಈ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿದ್ದು, ಒಂದು ಶಾಲೆಯ ಆವರಣದಲ್ಲಿರುವ ಸ್ವಂತ ಕಟ್ಟಡದಲ್ಲಿ ನಡೆಯುತ್ತಿದ್ದು, ಮತ್ತೊಂದು ಸುಮಾರು 27 ವರ್ಷಗಳಿಂದ ಕಟ್ಟಡವಿಲ್ಲದೇ ಶಿಥಿಲವಾದ ಕೋಣೆಯಲ್ಲಿ ನಡೆಯುತ್ತಿರುವುದು ಶೋಚನೀಯವಾಗಿದೆ.

ಮೂಲಸೌಲಭ್ಯಗಳಿಂದ ವಂಚಿತವಾದ ಈ ಗ್ರಾಮಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಸೌಲಭ್ಯ ಒದಗಿಸಿ,  ಗಡಿಭಾಗದ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂಬುದು ಸ್ಥಳೀಯರ ಆಗ್ರಹ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT