ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರಿಗೆ ಭಾರತೀಯ ವಿದ್ಯಾಭವನದ ಗೌರವ ಸದಸ್ಯತ್ವ

Last Updated 26 ಡಿಸೆಂಬರ್ 2012, 19:58 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದೂಸ್ತಾನಿ ಸಂಗೀತ ಗಾಯಕಿ ಕಿಶೋರಿ ಅಮೋಂಕರ್, ಸಮಾಜಸೇವಕಿ ಇಳಾ ರಮೇಶ್ ಭಟ್ ಹಾಗೂ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರಿಗೆ ಭಾರತೀಯ ವಿದ್ಯಾಭವನದ ಗೌರವ ಸದಸ್ಯತ್ವ ನೀಡಲು ನಿರ್ಧರಿಸಲಾಗಿದೆ.

ಭವನದ ಸಂಸ್ಥಾಪಕ ಡಾ.ಕೆ.ಎಂ.ಮುನ್ಷಿ ಅವರ ಜನ್ಮದಿನವಾದ ಇದೇ 30ರಂದು ವಿದ್ಯಾಭವನದ ಮುಂಬೈಯ ಕೇಂದ್ರ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಗೌರವ ಸದಸ್ಯತ್ವದ ತಾಮ್ರಪತ್ರವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪ್ರದಾನ ಮಾಡುವರು ಎಂದು ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಡಾ.ಕೆ.ಎಂ. ಮುನ್ಷಿ ಅವರ ಭಾವಶಿಲ್ಪಗಳನ್ನು ರಾಷ್ಟ್ರಪತಿ ಅನಾವರಣ ಮಾಡುವರು. ಭವನದ ಅಮೃತ ಮಹೋತ್ಸವದ ಜೊತೆಗೆ ಡಾ.ಮುನ್ಷಿ ಅವರ 125ನೇ ಜನ್ಮದಿನಾಚರಣೆಯ ಹಲವು ಕಾರ್ಯಕ್ರಮಗಳಿಗೆ ಈ ಸಮಾರಂಭ ನಾದಿಯಾಗಲಿದೆ. ಡಾ. ಮುನ್ಷಿ ಕುರಿತ `ಭವನ್ಸ್ ಜರ್ನಲ್' ವಿಶೇಷ ಸಂಚಿಕೆಯ ಲೋಕಾರ್ಪಣೆ ನಡೆಯಲಿದೆ. ಮಹಾರಾಷ್ಟ್ರ ರಾಜ್ಯಪಾಲ ಎಂ.ಕೆ.ಶಂಕರನಾರಾಯಣ್ ಅಧ್ಯಕ್ಷತೆ ವಹಿಸುವರು ಎಂದರು.

30ಕ್ಕೆ ಉಪನ್ಯಾಸ: ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ರಾಜಭವನ ದಲ್ಲಿ ಇದೇ 30ರಂದು ಬೆಳಿಗ್ಗೆ 11 ಗಂಟೆಗೆ `ಡಾ.ಮುನ್ಷಿ ಜೀವನ ಮತ್ತು ಸಂದೇಶ' ಕುರಿತು ವಿಶೇಷ ಉಪನ್ಯಾಸ ನೀಡುವರು. ಈ ಮೂಲಕ ನಗರದಲ್ಲಿ ವರ್ಷವಿಡಿ ನಡೆಯುವ ಸಮಾರಂಭಗಳಿಗೆ ಚಾಲನೆ ನೀಡುವರು.

ಡಾ.ಮುನ್ಷಿ ಅವರ ಗುಜರಾತಿ ಕಾದಂಬರಿ `ಪಾಟಣ ನೀ ಪ್ರಭುತಾ'ದ ಕನ್ನಡದ ಅನುವಾದದ ಲೋಕಾರ್ಪಣೆ ಮಾಡಲಾಗುವುದು. ರಾಮಕೃಷ್ಣ ಮಠದ ಅಧ್ಯಕ್ಷ ಹರ್ಷನಂದಜೀ ಮಹಾರಾಜ್ ಮುಖ್ಯ ಅತಿಥಿಯಾಗಿರುವರು ಎಂದರು.

1 ಲಕ್ಷ ಸಸಿ ನೆಡಲು ಸಂಕಲ್ಪ
`ಭವನದ ಅಮೃತಮಹೋತ್ಸವದ ಅಂಗವಾಗಿ 2013ನೇ ಸಾಲಿನಲ್ಲಿ ರಾಜ್ಯದಾದ್ಯಂತ ಒಂದು ಲಕ್ಷ ಸಸಿಗಳನ್ನು ನೆಡಲು ಸಂಕಲ್ಪಿಸಲಾಗಿದೆ ಎಂದು ಎಚ್.ಎನ್. ಸುರೇಶ್ ತಿಳಿಸಿದರು.

`ಅರಣ್ಯ ಇಲಾಖೆಯ ಸಹಯೋಗದಲ್ಲಿ ಬೆಂಗಳೂರು, ಮಡಿಕೇರಿ, ಮೈಸೂರು, ಶಿವಮೊಗ್ಗ, ಬೆಳಗಾವಿ ಹಾಗೂ ಮಂಗಳೂರಿನಲ್ಲಿ ವನಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT