ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಕೊಲೆಗಡುಕರಿಗೆ ಗಲ್ಲು

ಕುವೈತ್‌ನಲ್ಲಿ 2007ರ ನಂತರ ಮೊದಲ ಬಾರಿ ಶಿಕ್ಷೆ ಜಾರಿ
Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕುವೈತ್ (ಎಎಫ್‌ಪಿ): ಮೂವರು ಕೊಲೆ ಪಾತಕಿಗಳನ್ನು ಕುವೈತ್‌ನಲ್ಲಿ ಸೋಮವಾರ ಗಲ್ಲಿಗೇರಿಸಲಾಯಿತು. 2007ರ ಮೇ ಬಳಿಕ ಕೊಲ್ಲಿ ರಾಷ್ಟ್ರದಲ್ಲಿ ಈ ಶಿಕ್ಷೆ ಜಾರಿಯಾಗಿರುವುದು ಇದೇ ಮೊದಲು ಎಂದು ಕಾನೂನು ಸಚಿವಾಲಯ ತಿಳಿಸಿದೆ.

ಈ ಮೂವರಲ್ಲಿ ಒಬ್ಬ ಪಾಕಿಸ್ತಾನದವನು. ಇನ್ನೊಬ್ಬ ಸೌದಿ ಪ್ರಜೆ. ಮತ್ತೊಬ್ಬ ಯಾವುದೇ ರಾಷ್ಟ್ರದ ಪೌರತ್ವ ಹೊಂದಿರದ ವ್ಯಕ್ತಿ ಎಂದು ತಿಳಿಸಿದೆ.ಕುವೈತ್‌ನ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಮತ್ತು ಭದ್ರತಾ ಅಧಿಕಾರಿಗಳ ಸಮ್ಮುಖದಲ್ಲಿ ಈ ಮೂವರನ್ನು ಗಲ್ಲಿಗೇರಿಸಲಾಯಿತು.

ಕುವೈತ್ ಮೂಲದ ದಂಪತಿಯನ್ನು ಕೊಲೆ ಮಾಡಿದ ಆರೋಪ ಪಾಕ್ ಪ್ರಜೆಯ ಮೇಲೆ ಇತ್ತು. ತನ್ನದೇ ದೇಶದ ಪ್ರಜೆಯನ್ನು ಹತ್ಯೆ ಮಾಡಿದ್ದಕ್ಕಾಗಿ ಸೌದಿ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ತನ್ನನ್ನು ಇಮಾಮ್ ಎಂದೇ ಗುರುತಿಸಿಕೊಳ್ಳುತ್ತಿದ್ದ, ಪೌರತ್ವ ಹೊಂದಿರದ ಇನ್ನೊಬ್ಬ ಆರೋಪಿಗೆ, ಹೆಂಡತಿ ಮತ್ತು ಐವರು ಮಕ್ಕಳನ್ನು ಕೊಂದಿದ್ದಕ್ಕಾಗಿ ಶಿಕ್ಷೆ ವಿಧಿಸಲಾಗಿತ್ತು. ಯಾವುದೇ ನಿಖರ ಕಾರಣ ನೀಡದೇ ಕುವೈತ್ ಸರ್ಕಾರ ಆರು ವರ್ಷಗಳ ಹಿಂದೆ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿತ್ತು.

ಇನ್ನೂ ಕನಿಷ್ಠ 44 ಮಂದಿ ಈ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಇವರಲ್ಲಿ ಕೊಲೆ ಹಾಗೂ ಮಾದಕ ದ್ರವ್ಯ ಸಾಗಾಟಕ್ಕಾಗಿ ಶಿಕ್ಷೆಗೆ ಒಳಗಾಗಿರುವ ಅಲ್ ಸಬಾ ಕುಟುಂಬದ ಇಬ್ಬರು ಸದಸ್ಯರು ಹಾಗೂ 2009ರಲ್ಲಿ ಮದುವೆ ಶಾಮಿಯಾನಕ್ಕೆ ಬೆಂಕಿ ಹಚ್ಚಿ 57 ಜನರ ಸಾವಿಗೆ ಕಾರಣವಾದ ಮಹಿಳೆ ಕೂಡ ಸೇರಿದ್ದಾಳೆ.

ಕುವೈತ್‌ನಲ್ಲಿ 1960ರಲ್ಲಿ ಮೊದಲ ಬಾರಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲಾಗಿತ್ತು. ಅಂದಿನಿಂದ ಈವರೆಗೆ ವಿವಿಧ ಅಪರಾಧಕ್ಕಾಗಿ 69 ಪುರುಷರು ಮತ್ತು ಮೂವರು ವಿದೇಶಿ ಮಹಿಳೆಯರನ್ನು ಗಲ್ಲಿಗೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT