ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಗಾ ಅಪ್‌ಲೋಡ್ ಮುಟ್ಟುಗೋಲು

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಆನ್‌ಲೈನ್ ಪೈರಸಿಗೆ ಲಗಾಮು ಹಾಕುವ ಉದ್ದೇಶಿತ ಮಸೂದೆಯು ಅಮೆರಿಕದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವಾಗಲೇ, ಎಫ್‌ಬಿಐ ಅಧಿಕಾರಿಗಳು ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣದಲ್ಲಿ Megaupload.com ಎಂಬ ಪ್ರಸಿದ್ಧ ದಾಖಲೆ ವಿನಿಮಯ ವೆಬ್‌ಸೈಟ್ ಅನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಇದೇ ಮೊದಲ ಬಾರಿ ಇಂಥದ್ದೊಂದು ದೊಡ್ಡ ಜಾಲವನ್ನು ಎಫ್‌ಬಿಐ ಅಧಿಕಾರಿಗಳು ಭೇದಿಸಿದ್ದು, ಈ ಮೂಲಕ ಸಾರ್ವಜನಿಕ ಮಾಹಿತಿಯ ದುರ್ಬಳಕೆಗೆ ಅಂಕುಶ ಹಾಕಿದ್ದಾರೆ.

ವಿಶ್ವದಾದ್ಯಂತ ಆನ್‌ಲೈನ್ ಮೂಲಕ ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಮೆಗಾಅಪ್‌ಲೋಡ್,ಲಿಮಿಟೆಡ್‌ವೆಸ್ಟರ್ ಲಿಮಿಡೆಟ್ ಮತ್ತು ಏಳು ವ್ಯಕ್ತಿಗಳ ವಿರುದ್ಧ ತನಿಖಾ ತಂಡವು ಆರೋಪ ಹೊರಿಸಿದೆ.

ಆನ್‌ಲೈನ್ ಪೈರಸಿಯಿಂದಾಗಿ ಹಕ್ಕುಸ್ವಾಮ್ಯ ಹೊಂದಿದ ಮಾಲೀಕರಿಗೆ ಅರ್ಧ ಶತಕೋಟಿ ಡಾಲರ್‌ಗೂ ಹೆಚ್ಚು ನಷ್ಟವಾಗಿದ್ದರೆ, ಅಕ್ರಮ ಎಸಗಿದ ಕಂಪೆನಿಗಳಿಗೆ ಸುಮಾರು 175 ದಶಲಕ್ಷ  ಡಾಲರ್ ಆದಾಯವಾಗಿದೆ.

ಜಾಹೀರಾತು, ಸದಸ್ಯತ್ವ ಮಾರಾಟದ ಮೂಲಕ ಆರೋಪಿಗಳು ಭಾರಿ ಪ್ರಮಾಣದಲ್ಲಿ ಹಣ ಬಾಚಿಕೊಂಡಿದ್ದಾರೆ ಎಂದು ಎಫ್‌ಬಿಐ ಹಾಗೂ ನ್ಯಾಯಾಂಗ ಇಲಾಖೆ ಶುಕ್ರವಾರ ತಿಳಿಸಿವೆ.

ಆರೋಪಿಗಳಲ್ಲಿ ಮೂವರು ಜರ್ಮನಿ ಪ್ರಜೆಗಳಾಗಿದ್ದಾರೆ. ಅಲ್ಲದೆ ಸ್ಲೊವಾಕಿಯಾ, ಎಸ್ಟೊನಿಯಾ ಹಾಗೂ ಡಚ್‌ನ ತಲಾ ಒಬ್ಬೊಬ್ಬರು ಇದ್ದಾರೆ. ಅಪರಾಧ ಸಂಚಿನ ಆರೋಪದಲ್ಲಿ ಕನಿಷ್ಠ 20 ವರ್ಷ, ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದಲ್ಲಿ ಐದು ವರ್ಷ, ಅಕ್ರಮ ಹಣ ಚಲಾವಣೆಗಾಗಿ ಮಾಡಿದ ಸಂಚಿನ ಆರೋಪದಲ್ಲಿ 20 ವರ್ಷ ಹಾಗೂ ಈ ಎಲ್ಲ ಆರೋಪಗಳಲ್ಲಿ ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಘನೆಗಾಗಿ ಐದು ವರ್ಷ ಜೈಲು ಶಿಕ್ಷೆಯನ್ನು  ಅನುಭವಿಸಬೇಕಾಗುತ್ತದೆ.

ಹಾಂಕಾಂಗ್ ಮತ್ತು ನ್ಯೂಜಿಲೆಂಡ್ ನಿವಾಸಿಯಾದ ಕಿಂ ಡಾಟ್‌ಕಾಂ ಅಲಿಯಾಸ್ ಕಿಂ ಸ್ಕಿಮಿಟ್ಜ್ ಹಾಗೂ ಕಿಂ ಟಿಂ ಜಿಂ ವೆಸ್ಟರ್ ನೇತೃತ್ವದಲ್ಲಿ ಈ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.

ಡಾಟ್‌ಕಾಂ ಅವರು ಮೆಗಾಅಪ್‌ಲೋಡ್ ಲಿಮಿಟೆಡ್ ಸ್ಥಾಪಕರಾಗಿದ್ದು, ವೆಸ್ಟರ್ ಲಿಮಿಟೆಡ್‌ನ ನಿರ್ದೇಶಕ ಹಾಗೂ ಏಕೈಕ ಷೇರುದಾರರು ಆಗಿದ್ದಾರೆ.

ಸಿನಿಮಾ, ಸಂಗೀತ, ಟಿ.ವಿ ಕಾರ್ಯಕ್ರಮಗಳು, ಇ-ಪುಸ್ತಕಗಳು, ಉದ್ಯಮ ಹಾಗೂ ಮನರಂಜನಾ ಸಾಫ್ಟ್‌ವೇರ್ ಗಳನ್ನು ಸುಮಾರು 5 ವರ್ಷಗಳಿಗೂ ಹೆಚ್ಚು ಕಾಲ ಆನ್‌ಲೈನ್ ಪೈರಸಿ ಮಾಡಲಾಗಿದೆ.

ಈ ಪ್ರಕರಣದ ಸೂತ್ರಧಾರರು, ಹಕ್ಕುಸ್ವಾಮ್ಯ ಹೊಂದಿರುವ ಅತ್ಯಂತ ಜನಪ್ರಿಯ ಕೃತಿಗಳನ್ನು ಅಕ್ರಮವಾಗಿ ಅಪ್‌ಲೋಡ್ ಮಾಡಿದ್ದಾರೆ ಎಂದೂ ಎಫ್‌ಬಿಐ ಹೇಳಿದೆ.


 ಪೈರಸಿ ವಿರೋಧಿ ಮಸೂದೆಗೆ ಆಕ್ಷೇಪ
ವಾಷಿಂಗ್ಟನ್ (ಪಿಟಿಐ): ಇಂಟರ್‌ನೆಟ್ ಪೈರಸಿ ವಿರೋಧಿ ಮಸೂದೆಗೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದು ಇಂಟರ್‌ನೆಟ್ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ ಹಾಗೂ ಮುಕ್ತ ಸೈಬರ್ ಜಗತ್ತನ್ನು ಸರ್ಕಾರಿ ನಿಯಂತ್ರಣಕ್ಕೆ ಒಳಪಡಿಸುತ್ತದೆ ಎಂದು ಟೀಕಿಸಿದ್ದಾರೆ.

ಆನ್‌ಲೈನ್ ಪೈರಸಿ ತಡೆ ಕಾಯ್ದೆ (ಎಸ್‌ಒಪಿಎ) ಹಾಗೂ ಐಪಿ ರಕ್ಷಣೆ ಕಾಯ್ದೆ (ಪಿಐಪಿಎ) ಅಡಿಯಲ್ಲಿ ಸರ್ಕಾರವು, ಹಕ್ಕುಸ್ವಾಮ್ಯ ವಿಷಯಗಳನ್ನು ಪಡೆಯುವ ವೆಬ್‌ಸೈಟ್‌ಗಳ ಸ್ವಾತಂತ್ರ್ಯವನ್ನು ನಿಯಂತ್ರಿಸಬಹುದಾಗಿದೆ.

ಈ ಕಾಯ್ದೆಯು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆತಂಕಕಾರಿಯಾಗಲಿದೆ. ಅಲ್ಲದೆ ಇಂಟರ್‌ನೆಟ್‌ನಲ್ಲಿ ಮಾಹಿತಿಯ ಹರಿವಿಗೆ ಕಡಿವಾಣ ಹಾಕಲಿದೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮಿಟ್ ರೋಮ್ನಿ ಆಕ್ಷೇಪಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT