ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಉತ್ತರ- ದಕ್ಷಿಣ ಕಾರಿಡಾರ್: ಸೆಪ್ಟೆಂಬರ್‌ನಲ್ಲಿ ಸುರಂಗ ಕೊರೆಯುವ ಕಾರ್ಯ

Last Updated 14 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಜಕ್ಕರಾಯನಕೆರೆ ಮೈದಾನದ ಬಳಿಯಿಂದ ಮೆಜೆಸ್ಟಿಕ್ ಕಡೆಗೆ `ನಮ್ಮ ಮೆಟ್ರೊ~ ಮಾರ್ಗಕ್ಕಾಗಿ ಸುರಂಗ ಕೊರೆಯುವ ಕಾರ್ಯ ಸೆಪ್ಟೆಂಬರ್‌ನಿಂದ ಪ್ರಾರಂಭವಾಗಲಿದೆ. ಮೆಟ್ರೊದ ಉತ್ತರ- ದಕ್ಷಿಣ ಕಾರಿಡಾರ್‌ನ ಭಾಗವಾಗಲಿರುವ ಈ ಸುರಂಗವು ಮೆಜೆಸ್ಟಿಕ್‌ನಿಂದ ಕೃಷ್ಣ ರಾಜೇಂದ್ರ (ಕೆ.ಆರ್.) ರಸ್ತೆವರೆಗೆ ನಿರ್ಮಾಣಗೊಳ್ಳಲಿದೆ.

ಚೀನಾದ ಹೆರೆನ್‌ನೆಂಚ್ಟ್ ಕಂಪೆನಿಯ ಒಂದು `ಅರ್ಥ್ ಪ್ರೆಷರ್ ಬ್ಯಾಲೆನ್ಸ್‌ಡ್ ಮೆಷಿನ್~ (ಇಪಿಬಿಎಂ) ಎಂಬ ಸುರಂಗ ಕೊರೆಯುವ ಯಂತ್ರ ನಗರಕ್ಕೆ ಬಂದಿದ್ದು ಜಕ್ಕರಾಯನಕೆರೆ ಮೈದಾನದ ಬಳಿ ಅದನ್ನು ಜೋಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದೇ ಕಂಪೆನಿಯ ಮತ್ತೊಂದು `ಇಪಿಬಿಎಂ~ ಸದ್ಯದಲ್ಲೇ ನಗರಕ್ಕೆ ಬರಲಿದೆ.

ಚೀನಾದ ಸೆಲಿ ಕಂಪೆನಿಯಿಂದ ಮತ್ತೊಂದು ಸುರಂಗ ಕೊರೆಯುವ ಯಂತ್ರ ಬರಲಿದ್ದು, ಅದನ್ನು ಕೆ.ಆರ್.ರಸ್ತೆಯ ಶಿವಶಂಕರ್ ವೃತ್ತದ ಬಳಿಯಿಂದ ವಿಕ್ಟೋರಿಯಾ ಆಸ್ಪತ್ರೆ ಮುಂಭಾಗದವರೆಗೆ ಸುರಂಗ ಕೊರೆಯಲು ಬಳಸಲು ಉದ್ದೇಶಿಸಲಾಗಿದೆ.

ಒಟ್ಟು 24.20 ಕಿ.ಮೀ. ಉದ್ದದ ಉತ್ತರ- ದಕ್ಷಿಣ ಕಾರಿಡಾರ್‌ನಲ್ಲಿ ನಿರ್ಮಾಣವಾಗಲಿರುವ ಸುರಂಗದ ಉದ್ದ 4 ಕಿ.ಮೀ. 18.10 ಕಿ.ಮೀ. ಉದ್ದದ ಪೂರ್ವ- ದಕ್ಷಿಣ ಕಾರಿಡಾರ್‌ನಲ್ಲಿ ನಿರ್ಮಾಣವಾಗುವ ಸುರಂಗದ ಉದ್ದ 4.4 ಕಿ.ಮೀ. ಪೂರ್ವ- ಪಶ್ಚಿಮ ಕಾರಿಡಾರ್‌ನಲ್ಲಿ ಮೆಜೆಸ್ಟಿಕ್‌ನಿಂದ ಸೆಂಟ್ರಲ್ ಕಾಲೇಜುವರೆಗೆ ಜೋಡಿ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.

ಸೆಂಟ್ರಲ್ ಕಾಲೇಜಿನಿಂದ ವಿಧಾನಸೌಧದವರೆಗೆ ಸುರಂಗ ಕೊರೆಯುವ ಕಾರ್ಯವನ್ನು ಹೆಲೆನ್ ಹೆಸರಿನ ಟನೆಲ್ ಬೋರಿಂಗ್ ಮೆಷಿನ್ ಪ್ರಾರಂಭಿಸಿದ್ದು, ಇದುವರೆಗೆ 50 ಮೀಟರ್‌ಗಳಷ್ಟು ಸುರಂಗ ಸಿದ್ಧವಾಗಿದೆ. ಮತ್ತೊಂದು ಯಂತ್ರದ ಕಾರ್ಯಾಚರಣೆ ಸದ್ಯದಲ್ಲೇ ಪ್ರಾರಂಭವಾಗಲಿದೆ.

ಮೆಜೆಸ್ಟಿಕ್‌ನಿಂದ ನಗರ ರೈಲು ನಿಲ್ದಾಣ, ವಿಧಾನಸೌಧದಿಂದ ಮಿನ್ಸ್ಕ್ ಚೌಕದವರೆಗೆ, ಮಿನ್ಸ್ಕ್‌ಚೌಕದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಸುರಂಗ ನಿರ್ಮಾಣ ಆಗಬೇಕಿದೆ.

ವಿಧಾನಸೌಧದ ಮುಂದೆ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ಆಗದೇ ಇರುವ ಹಾಗೂ ಮಿನ್ಸ್ಕ್ ಚೌಕದ ನೆಲದಡಿ ನಿಲ್ದಾಣಕ್ಕಾಗಿ ಅಗತ್ಯವಿರುವ ಜಮೀನಿನ ಸ್ವಾಧೀನ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಿನ್ನೆಲೆಯಲ್ಲಿ ಪೂರ್ವ ಮತ್ತು ಪಶ್ಚಿಮ ಕಾರಿಡಾರ್‌ನ ಸುರಂಗ ಮಾರ್ಗ ಪೂರ್ಣಗೊಳ್ಳುವುದು ವಿಳಂಬವಾಗಲಿದೆ.

ಮೆಜೆಸ್ಟಿಕ್‌ನಲ್ಲಿ ಎರಡೂ ಕಾರಿಡಾರ್‌ಗಳು ಸಂಧಿಸಲಿವೆ. ಅಲ್ಲಿ ಒಂದರ ಮೇಲೊಂದರಂತೆ ಎರಡೂ ಕಾರಿಡಾರ್‌ನ ಮೆಟ್ರೊ ನಿಲ್ದಾಣಗಳು ನಿರ್ಮಾಣವಾಗಲಿವೆ. ಅದಕ್ಕಾಗಿ ಸಿದ್ಧತಾ ಕಾರ್ಯಗಳು ನಡೆದಿವೆ. ಬ್ಯಾರಿಕೇಡ್ ಹಾಕುವ ಕಾರ್ಯ ಮುಗಿದಿದೆ. ನೆಲ ಅಗೆಯುವ ಕಾರ್ಯ ಪ್ರಾರಂಭವಾಗಿದೆ.

ನಿಲ್ದಾಣ ಕಾಮಗಾರಿ ಚುರುಕು

ನ್ಯಾಯಾಲಯದಲ್ಲಿ ಭೂ ವ್ಯಾಜ್ಯದ ಪ್ರಕರಣ ಇತ್ಯರ್ಥಗೊಂಡಿರುವ ಹಿನ್ನೆಲೆಯಲ್ಲಿ ಸಾಬೂನು ಕಾರ್ಖಾನೆ ಬಳಿಯ ಮೆಟ್ರೊ ನಿಲ್ದಾಣ ಕಾರ್ಯವನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು ಚುರುಕುಗೊಳಿಸಿದೆ. ಇಲ್ಲಿ ಭೂ ಸ್ವಾಧೀನ ಕಾರ್ಯ ತಡವಾಗಿದ್ದರಿಂದ ನಿಲ್ದಾಣದ ನಿರ್ಮಾಣ ಕಾರ್ಯ ಹತ್ತು ತಿಂಗಳಷ್ಟು ವಿಳಂಬವಾಗಿದೆ.

ಆದರೂ ನಿಲ್ದಾಣದ ನಿರ್ಮಾಣವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಗುತ್ತಿಗೆ ಪಡೆದಿರುವ ಎಲ್ ಅಂಡ್ ಟಿ ಕಂಪೆನಿಗೆ ಸೂಚಿಸಲಾಗಿದೆ ಎಂದು ನಿಗಮವು ತನ್ನ ವಾರ್ತಾ ಪತ್ರದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT