ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಪ್ರಯಾಣ ದರ ಏರಿಕೆ ಇಲ್ಲ

Last Updated 20 ಅಕ್ಟೋಬರ್ 2012, 19:00 IST
ಅಕ್ಷರ ಗಾತ್ರ

ಬೆಂಗಳೂರು: `ಮೆಟ್ರೊ ಮಾರ್ಗ ನಿರ್ಮಾಣ ಮಾಡುವ ಸಂದರ್ಭದಲ್ಲಿ ಹಾಳಾದ ರಸ್ತೆಗಳನ್ನು ಮಳೆಗಾಲ ಮುಗಿದ ತಕ್ಷಣವೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜೊತೆಯಲ್ಲಿ ಸೇರಿಕೊಂಡು ದುರಸ್ತಿ ಮಾಡಲಾಗುವುದು~ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿ)ದ ವ್ಯವಸ್ಥಾಪಕ ನಿರ್ದೇಶಕ ಎಂ. ಶಿವಶೈಲಂ ಪ್ರಕಟಿಸಿದರು.


ಬೈಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಶನಿವಾರ ಏರ್ಪಡಿಸಿದ್ದ `ನಮ್ಮ ಮೆಟ್ರೊ~ ಮೊದಲ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ವಿಜಯನಗರ ಮತ್ತು ಶ್ರೀರಾಂಪುರ ಪ್ರದೇಶದಲ್ಲಿ ನಡೆದಿರುವ ರೀಚ್-4ರ ನಿರ್ಮಾಣ ಕಾಮಗಾರಿ ಪ್ರಸ್ತಾಪಿಸಿದ ಅವರು,  `ದೊಡ್ಡ ಯೋಜನೆಯನ್ನು ಅನುಷ್ಠಾನಕ್ಕೆ ತರುವಾಗ ಇಂತಹ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎನ್ನುವ ಅರಿವು ನಮಗೂ ಇದೆ~ ಎಂದು ಹೇಳಿದರು.


`ಬಿಬಿಎಂಪಿ ಹಾಗೂ ಬಿಎಂಆರ್‌ಸಿಗಳು ಒಟ್ಟಾಗಿ ರಸ್ತೆಗಳ ದುರಸ್ತಿ ಮಾಡುವಂತೆ ರಾಜ್ಯ ಸರ್ಕಾರದಿಂದ ನಿರ್ದೇಶನ ಬಂದಿದ್ದು, ಇದಕ್ಕೆ ಆರ್ಥಿಕ ನೆರವೂ ಸಿಗಲಿದೆ~ ಎಂದು ವಿವರಿಸಿದರು. `ಪ್ರಯಾಣ ದರ ಹೆಚ್ಚಳಕ್ಕೆ ಬಿಎಂಆರ್‌ಸಿ ನಿಯಮಾವಳಿಯಲ್ಲಿ ಅವಕಾಶವಿದ್ದರೂ ಮಾರ್ಚ್ ವರೆಗೆ ಹೆಚ್ಚಳ ಮಾಡುವುದಿಲ್ಲ. ಬಳಿಕ ಸಂಸ್ಥೆಯ ವೆಚ್ಚ ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು~ ಎಂದು ಮಾಹಿತಿ ನೀಡಿದರು.

`ಪೀಣ್ಯಕ್ಕೆ ಸಂಪರ್ಕ ಕಲ್ಪಿಸುವ ರೀಚ್-3ರ ಮಾರ್ಗದಲ್ಲಿ ಮುಂದಿನ ಜೂನ್ ವೇಳೆಗೆ ಮೆಟ್ರೊ ಸಂಚಾರ ಆರಂಭವಾಗಲಿದೆ~ ಎಂದು ವಿಶ್ವಾಸದಿಂದ ಹೇಳಿದ ಅವರು, `ಈ ಭಾಗದ ಸುಮಾರು ಐದು ಲಕ್ಷ ಜನ ನಿತ್ಯದ ಓಡಾಟಕ್ಕೆ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನೇ ಅವಲಂಬಿಸಿದ್ದು, ಮೆಟ್ರೊ ಪಾಲಿಗೆ ಇದೊಂದು ಪ್ರಮುಖ ಮಾರ್ಗವಾಗಿದೆ~ ಎಂದು ತಿಳಿಸಿದರು.

`ರೀಚ್-3ರ ಮಾರ್ಗದಲ್ಲಿ ಫೆಬ್ರುವರಿಯಲ್ಲಿ ಪರೀಕ್ಷಾರ್ಥ ಸಂಚಾರ ಶುರುವಾಗಲಿದೆ~ ಎಂದ ಅವರು, `ಮಾರ್ಗ ಮಧ್ಯದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಆಗಬೇಕಿದ್ದರಿಂದ ತುಸು ಕಾಲಾವಕಾಶ ಬೇಕಾಗಿದೆ~ ಎಂದರು. `ನಮ್ಮ ಮೆಟ್ರೊ~ ಮಹಾನಗರದ ಜನರ ಸೇವೆಯಲ್ಲಿ ಒಂದು ವರ್ಷ ಕಳೆದಿದ್ದರಿಂದ ನಮಗೆಲ್ಲ ಸಂತೋಷವಾಗಿದ್ದು, ಹೊಸ ಯೋಜನೆಗಳಿಗೆ ಕೈಹಾಕಲು ಉತ್ಸಾಹ ಹೆಚ್ಚಿಸಿದೆ~ ಎಂದು ಹೇಳಿದರು.ಬಿಎಂಆರ್‌ಸಿ ನಿರ್ದೇಶಕರಾದ ಎಸ್.ವಿ.ನರಸಿಂಹನ್, ಬಿ.ವಿ. ಸುಧೀರಚಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT