ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಣಸಿನ ಕಾಯಿ ವ್ಯಾಪಾರ ಜೋರು

Last Updated 17 ಫೆಬ್ರುವರಿ 2012, 10:00 IST
ಅಕ್ಷರ ಗಾತ್ರ

ಶಿರಸಿ: ಒಂದು ಕೆಜಿಗೆ ಅರವತ್ತೈದು ರೂಪಾಯಿ ಮಾಲು ಐತ್ರಿ, ಎಪ್ಪತ್ತೈದು ರೂಪಾಯಿ ಮಾಲೂ ಐತ್ರಿ. 10ಕೆಜಿ ತಗೊಂಡ್ರೆ ಕಡಿಮೆ ದರ ಹಾಕ್ಕೊಡ್ತೇನೆ ನೋಡ್ರಿ~ ಎನ್ನುತ್ತ ಮಹಮ್ಮದ್ ಗೌಸ್ ಕೂಗಿ ಹೇಳುತ್ತಿದ್ದ.

ನಗರದ ಕೋಟೆಕೆರೆ ಎದುರು ಗದ್ದೆ ಬಯಲಿನಲ್ಲಿ ಒಣಮೆಣಸಿನ ಕಾಯಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಈ ಬಾರಿ ಬ್ಯಾಡಗಿ ಮೆಣಸಿನ ಘಾಟು ಕಡಿಮೆ. ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನ ದರ ಹಿಂದಿನ ವರ್ಷದ ದರಕ್ಕಿಂತ ಅರ್ಧದಷ್ಟು ಕಡಿಮೆಯಾ ಗಿದೆ. ಶಿರಸಿ ಒಣ ಮೆಣಸಿನ ಪ್ರಮುಖ ಮಾರುಕಟ್ಟೆ ಕೇಂದ್ರ.
 
ಅದರಲ್ಲೂ ಬ್ಯಾಡಗಿ ಮೆಣಸು ಎಂದರೆ ಗ್ರಾಹಕರಿಗೆ ವಿಶೇಷ ಒಲವು. ಹೀಗಾಗಿ ಬ್ಯಾಡಗಿ ಮೆಣಸಿನ ಬೆಳೆಗಾರರು ನೇರವಾಗಿ ಗ್ರಾಹಕರ ಬಳಿ ಬಂದಿದ್ದಾರೆ. ಇನ್ನಷ್ಟು ರೈತರು ವಾಹನದಲ್ಲಿ ಮಾಲು ತಂದು ಹೋಲ್‌ಸೇಲ್ ವ್ಯಾಪಾರ ಮಾಡುತ್ತಿದ್ದಾರೆ. ಅದನ್ನು ಖರೀದಿಸಿ ವ್ಯಾಪಾರಸ್ಥರು ಸಗಟು ವ್ಯಾಪಾರ ನಡೆಸುತ್ತಿದ್ದಾರೆ. ಮೆಣಸಿನ ವ್ಯಾಪಾರ ಸ್ಥರು, ಬೆಳೆಗಾರರು ಸೇರಿ 8-10 ಜನರು ಸಾಲಿನಲ್ಲಿ ಕುಳಿತು ಒಣ ಮೆಣಸು ವ್ಯಾಪಾರ ನಡೆಸಿದ್ದಾರೆ.
 
ಪ್ರತಿ ಯೊಬ್ಬರು ಹತ್ತಾರು ಮೂಟೆಗಳಲ್ಲಿ ಮೆಣಸನ್ನು ಸಂಗ್ರಹಿಸಿ ಗ್ರಾಹಕರಿಗೆ ಕಾಯುತ್ತಿದ್ದಾರೆ. `ಬ್ಯಾಡಗಿ ಮೆಣಸು ತಗೊಳ್ರಿ, ಸಸ್ತಾ ಐತಿ~ ಎಂದು ಗಿರಾಕಿ ಗಳನ್ನು ಕರೆಯತ್ತಾರೆ. ಹಿಂದಿನ ವರ್ಷ ಒಂದು ಕೆಜಿ ಒಣ ಮೆಣಸಿಕಾಯಿ ದರ ರೂ.180ರ ತನಕ ತಲುಪಿತ್ತು. ಈ ವರ್ಷ ಉತ್ತಮ ಗುಣಮಟ್ಟದ ಮೆಣಸಿಗೆ ಗರಿಷ್ಠ ರೂ.100 ದರ ಇದೆ. ಸಾಮಾನ್ಯ ಮೆಣಸು ರೂ.70-60ಕ್ಕೆ ದೊರೆಯುತ್ತಿದೆ.

ಒಂದೇ ಪ್ರದೇಶದಲ್ಲಿ ಹತ್ತಾರು ಮಾರಾಟಗಾರರು ಕುಳಿತರೂ ದಿನಕ್ಕೆ ಐದು ಕ್ವಿಂಟಾಲ್‌ನಷ್ಟು ವ್ಯಾಪಾರ ನಡೆಯುತ್ತದೆ. `ಬ್ಯಾಡಗಿ ಮೆಣಸಿನ ವ್ಯಾಪಾರ ಪ್ರಾರಂಭಿಸಿ ಒಂದು ವಾರ ಆಯಿತು ದರ ಸಸ್ತಾ ಇದ್ದರೂ ವ್ಯಾಪಾರ ಕಡಿಮೆ. ಹೆಚ್ಚಿನ ಪ್ರಮಾಣ ದಲ್ಲಿ ಖರೀದಿಸಿದರೆ ಕಡಿಮೆ ದರದಲ್ಲಿ ಮಾರುತ್ತೇವೆ. ದಿನಕ್ಕೆ 50ಕೆಜಿಯಷ್ಟು ಮೆಣಸು ವ್ಯಾಪಾರ ಆಗುತ್ತದೆ~ ಎಂದು ಮಹಮ್ಮದ್ ಗೌಸ್ ಹೇಳಿದರು.
 
`ನಾವೇ ಹೊಲದಲ್ಲಿ ಬ್ಯಾಡಗಿ ಮೆಣಸು ಬೆಳೆದು ವ್ಯಾಪಾರ ಮಾಡುತ್ತೇವೆ. ಹಿಂದಿನ ವರ್ಷ ಒಳ್ಳೆಯ ದರ ಇತ್ತು. ಈ ವರ್ಷ ದರ ನೋಡ್ರಿ.  ಶಿರಸಿ ಜಾತ್ರೆ ಬಂದಾಗ ಮೆಣಸಿನ ದರ ಕಡಿಮೆ ಆಗುತ್ತದೆ. ಎರಡು ವರ್ಷದ ಹಿಂದೆ ಸಹ ಇದೇ ರೀತಿ ದರ ಕಡಿಮೆ ಆಗಿತ್ತು~ ಎಂದು ಅವರು ಹೇಳಿದರು.

ಕೆಲ ದಿನಗಳ ಹಿಂದೆ ಹಾವೇರಿ ಯಿಂದ ಲಾರಿಯಲ್ಲಿ ಮೆಣಸಿನ ಮೂಟೆ ತಂದು ಬೆಳೆಗಾರರು ಹೋಲ್‌ಸೇಲ್ ವ್ಯಾಪಾರ ಮಾಡಿ ಹೋದರು. ಬೆಳೆಗಾರರಿಂದ ಖರೀದಿಸಿದ ಮಾಲನ್ನು ಈಗ ಖರೀದಿದಾರರು ಚಿಲ್ಲರೆ ವ್ಯಾಪಾರ ಮಾಡುತ್ತಾರೆ ಎಂದು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT