ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆರವಣಿಗೆ ಒಲ್ಲದ ಕೋಚೆ: ಸಂಘಟಕರ ಪೇಚು

Last Updated 1 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ವಿಜಾಪುರ: `ಎತ್ತರದ ವಾಹನದ ಮೇಲೆ ದೊಡ್ಡ ಕುರ್ಚಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಭಾಗವಹಿಸುವುದಿಲ್ಲ' ಎಂದು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಕೋ.ಚೆನ್ನಬಸಪ್ಪ ಹೇಳಿರುವುದರಿಂದ ಸಮ್ಮೇಳನದ ಸಂಘಟಕರು ಪೇಚಿಗೆ ಸಿಲುಕಿದ್ದಾರೆ.

ಏತನ್ಮಧ್ಯೆ `ಸಮ್ಮೇಳನದ ಅಧ್ಯಕ್ಷರು ಮತ್ತು ಅತಿ ಗಣ್ಯರಿಗೆ ತಮ್ಮ ಕೆಡೆಟ್ಸ್‌ಗಳಿಂದ ಸಾಂಪ್ರದಾಯಿಕ ಸ್ವಾಗತ ಕೋರಬೇಕು. ತಮ್ಮ ಅಶ್ವಾರೋಹಿ ದಳದ ಬೆಂಗಾವಲಿನಲ್ಲಿ ಅವರನ್ನು ವೇದಿಕೆಯವರೆಗೆ ಕರೆ ತರಬೇಕು' ಎಂಬ ಸೈನಿಕ ಶಾಲೆಯವರ ಬಯಕೆಗೆ ಸಂಘಟಕರು ಸ್ಪಂದಿಸದಿರುವ ಸಂಗತಿಯೂ ಬೆಳಕಿಗೆ ಬಂದಿದೆ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯಲ್ಲಿ ಇದೇ ಮೊದಲ ಬಾರಿಗೆ ಮೈಸೂರು ಪೊಲೀಸ್ ಅಶ್ವ ದಳ, ಬೆಂಗಳೂರಿನ ಆರು ಪೊಲೀಸ್ ಬ್ಯಾಂಡ್ ತಂಡಗಳನ್ನು ಬಳಸಲಾಗುತ್ತಿದೆ. ಅಧ್ಯಕ್ಷರ ರಥದ ಮುಂದೆ ಪೊಲೀಸ್ ಅಶ್ವದಳ ಇರುವುದರಿಂದ ಅವರ ಎತ್ತರ ಒಂಬತ್ತು ಅಡಿಯವರೆಗೆ ಇರಲಿದೆ. ಈ ಎಲ್ಲಕ್ಕಿಂತ ಅಧ್ಯಕ್ಷರ ಪೀಠ ಎತ್ತರದಲ್ಲಿರಬೇಕು ಮತ್ತು ಸಾರ್ವಜನಿಕರಿಗೆ ಅವರು ಕಾಣಬೇಕು ಎಂಬ ಕಾರಣಕ್ಕೆ ಎತ್ತರವಾದ ವಾಹನ ಬಳಸಲು ಸಮ್ಮೇಳನದ ಮೆರವಣಿಗೆ ಸಮಿತಿ ನಿರ್ಧರಿಸಿತ್ತು.

ಮೆರವಣಿಗೆಗೆ ಕ್ಯಾಂಟರ್ (ಮಿನಿ ಲಾರಿ) ವಾಹನ ಆಯ್ಕೆ ಮಾಡಿರುವ ಸಮಿತಿ, ಆ ರಥದ ಸುತ್ತಲೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹಾಗೂ ಜಿಲ್ಲೆಯ ಕೆಲ ಹಿರಿಯ ಸಾಹಿತಿಗಳ ಭಾವಚಿತ್ರ, ಸಮ್ಮೇಳನ ಮತ್ತು ಕಸಾಪ ಲಾಂಛನ ಅಳವಡಿಸುವುದು. ವಾಹನದ ಮೇಲೆ ಎತ್ತರದಲ್ಲಿ ಅಧ್ಯಕ್ಷರ ಪೀಠವನ್ನು (ಸಿಂಹಾಸನ ಮಾದರಿ) ಅಳವಡಿಸಲು ತೀರ್ಮಾನಿಸಿದೆ. ರೂ.1 ಲಕ್ಷ  ವೆಚ್ಚದಲ್ಲಿ ಈ ರಥದ ಅಲಂಕಾರಕ್ಕೆ ಚಾಲನೆ ನೀಡಲಾಗಿದೆ.

`ಈ ವಿಷಯದಲ್ಲಿ ಸಮ್ಮೇಳನದ ನಿಯೋಜಿತ ಅಧ್ಯಕ್ಷರ ಮನವೊಲಿಸುವಂತೆ ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರನ್ನು ಕೋರಿದ್ದೇವೆ. ನಿಯೋಜಿತ ಅಧ್ಯಕ್ಷರು ತಮ್ಮ ನಿಲುವಿಗೆ ಅಂಟಿಕೊಂಡರೆ ಮೆರವಣಿಗೆಯಲ್ಲಿ ರಥವನ್ನು ಕೈಬಿಡುವ ಇಲ್ಲವೇ ಆ ರಥದ ಅಧ್ಯಕ್ಷರ ಪೀಠದಲ್ಲಿ ನಾಡದೇವಿ ಭಾವಚಿತ್ರ ಇಡುವ ಕುರಿತು ಚರ್ಚಿಸಿ ನಿರ್ಧಾರಕ್ಕೆ ಬರುತ್ತೇವೆ' ಎನ್ನುತ್ತಾರೆ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಯಂಡಿಗೇರಿ.

ಸೈನಿಕ ಶಾಲೆಯ ಅಶ್ವದಳ: `ನಮ್ಮ ಸೈನಿಕ ಶಾಲೆಯಲ್ಲಿ ತರಬೇತಿ ಹೊಂದಿರುವ ಎಂಟು ಕುದುರೆಗಳಿವೆ. 6 ಮತ್ತು 7ನೇ ತರಗತಿ ಮಕ್ಕಳನ್ನು ಹೊರತುಪಡಿಸಿ ಉಳಿದೆಲ್ಲ ವಿದ್ಯಾರ್ಥಿಗಳು ಕುದುರೆ ಸವಾರಿಯಲ್ಲಿ ಪರಿಣತರಿದ್ದಾರೆ. ನಮ್ಮ ಎಲ್ಲ ಸಮಾರಂಭಗಳಿಗೆ ಅತಿಥಿಗಳನ್ನು ಸ್ವಾಗತಿಸಲು ಈ ಅಶ್ವಾರೋಹಿ ದಳ ಬಳಸುತ್ತೇವೆ. ಸಾಹಿತ್ಯ ಸಮ್ಮೇಳನದಲ್ಲಿಯೂ ನಾವು ಈ ಸೇವೆ ಒದಗಿಸಲು ಸಿದ್ಧ' ಎನ್ನುತ್ತಾರೆ ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ಆರ್.ಬಾಲಾಜಿ.

`ಗಣ್ಯರನ್ನು ಸಾರೋಟಿನಲ್ಲಿ ಕುಳ್ಳರಿಸಿ ಅಶ್ವಾರೋಹಿ ದಳದ ಬೆಂಗಾವಲಿನಲ್ಲಿ ಅವರನ್ನು ವೇದಿಕೆಗೆ ಕರೆತಂದರೆ ಅದು ಆಕರ್ಷಕವಾಗಿರುತ್ತದೆ. ಅತಿಥಿ ಗೃಹ ಅಥವಾ ಹೆಲಿಪ್ಯಾಡ್‌ನಿಂದ ವೇದಿಕೆಯವರೆಗೆ ಈ ರೀತಿ ಮೆರವಣಿಗೆ ಮಾಡಬಹುದಾಗಿದೆ. ಸಂಘಟಕರು ಸಾರೋಟು ಒದಗಿಸಿ, ನಮ್ಮ ಅಶ್ವಾರೋಹಿ ದಳದ ಸೇವೆಯನ್ನು ಸಮ್ಮೇಳನದ ಮೂರೂ ದಿನಗಳ ಕಾಲ ಪಡೆಯಬಹುದು' ಎಂಬುದು ಅವರ ಸಲಹೆ.

`ಸಮ್ಮೇಳನ ನಮ್ಮ ಶಾಲೆಯ ಮೈದಾನದಲ್ಲಿ ನಡೆಯುತ್ತಿರುವುದರಿಂದ ಸಹಜವಾಗಿ ನಮ್ಮ ಮಕ್ಕಳಲ್ಲಿಯೂ ಕುತೂಹಲವಿದೆ. ಕೇಂದ್ರ ರಕ್ಷಣಾ ಇಲಾಖೆಯಡಿ ನಮ್ಮ ಶಾಲೆ ನಡೆಯುತ್ತಿದ್ದರೂ ನಾವೂ ಕರ್ನಾಟಕದ ಅಂಗ. ಇಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ 651 ಮಕ್ಕಳು ಕರ್ನಾಟಕದವರೇ. ಗಾಯನ, ನಾಟಕ, ಕುದುರೆ ಸವಾರಿ-ಸಾಹಸ ಪ್ರದರ್ಶನದಲ್ಲಿ ಅವರು ಸಾಕಷ್ಟು ಸಾಧನೆಯನ್ನೂ ಮಾಡಿದ್ದಾರೆ.

36 ಕೆಡೆಟ್ಸ್‌ಗಳನ್ನು ಒಳಗೊಂಡ ಆಕರ್ಷಕ ಬ್ಯಾಂಡ್ ನಮ್ಮಲ್ಲಿದೆ. ನಮ್ಮ ಕೆಲ ಮಕ್ಕಳನ್ನು ಸಮೂಹ ನೃತ್ಯ, ಗಾಯನ-ನಾಡಗೀತೆಯಲ್ಲಾದರೂ ಬಳಸಿಕೊಳ್ಳಬಹುದಿತ್ತು. ಈ ಎಲ್ಲ ವಿಷಯದಲ್ಲಿ ನಮ್ಮನ್ನು ಸಂಪೂರ್ಣವಾಗಿ ಕತ್ತಲೆಯಲ್ಲಿಡಲಾಗಿದೆ' ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕರ್ನಲ್ ಬಾಲಾಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT