ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆರೆದ ಮಿಲ್ಲರ್: ವಿಂಡೀಸ್ ವಿಜಯ

ಕ್ರಿಕೆಟ್: ಭಾರತ ‘ಎ’ ತಂಡಕ್ಕೆ ಹೀನಾಯ ಸೋಲು
Last Updated 28 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ಜಮೈಕಾ ದ್ವೀಪದ ನಿಕಿತ ಮಿಲ್ಲರ್ ‘ಎಡಗೈ ಸ್ಪಿನ್’ ಸುಳಿಯಲ್ಲಿ ಮುಳುಗಿದ ಭಾರತ ‘ಎ‘ ತಂಡವು ಶನಿವಾರ ಹೀನಾಯ ಸೋಲನುಭವಿಸಿತು. 

ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ  ಒಂದೂ ‘ಇತರೆ’ ರನ್ ನೀಡದೇ 85.4 ಓವರುಗಳನ್ನು ಶಿಸ್ತಿನ ಬೌಲಿಂಗ್ ಮಾಡಿದ ವೆಸ್ಟ್ ಇಂಡೀಸ್ ‘ಎ‘ ಬೌಲಿಂಗ್ ಪಡೆಯು 162 ರನ್ನುಗಳ ಅಂತರದಿಂದ ಚೇತೇಶ್ವರ್ ಪೂಜಾರ ಬಳಗವನ್ನು ಹಣಿಯಿತು.

ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದು ದುಃಸ್ವಪ್ನವಾಗಿ ಕಾಡಿದ್ದ ನಿಕಿತ ಮಿಲ್ಲರ್ (36.4–16–40–5) ಪಂದ್ಯ ಸಮ ಮಾಡಿಕೊಳ್ಳುವ ಆತಿಥೇಯರ ಆಸೆಯನ್ನು ನುಚ್ಚುನೂರು ಮಾಡಿದರು.  281 ನಿಮಿಷಗಳವರೆಗೆ ನಡೆದ ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ ಮನಪ್ರೀತ್ ಜುನೇಜ (70; 195ನಿ, 193ಎಸೆತ, 4ಬೌಂಡರಿ, 1ಸಿಕ್ಸರ್) ಅವರ ಏಕಾಂಗಿ ಹೋರಾಟವೂ ಫಲ ನೀಡಲಿಲ್ಲ. ದಿನದಾಟ ಮುಗಿಯಲು ಸುಮಾರು ಒಂದು ತಾಸು ಇರುವಾಗಲೇ ವಿಂಡೀಸ್ ವಿಜಯೋತ್ಸವ ಆಚರಿಸಿತು. ಬೆಂಗಳೂರಿನಲ್ಲಿ ನಡೆದಿದ್ದ ಲೀಸ್ಟ್ ‘ಎ‘ ಏಕದಿನ ಸರಣಿಯನ್ನು 2–1ರಿಂದ ಗೆದ್ದಿದ್ದ ವಿಂಡೀಸ್ ಬಳಗವು,  ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಮಿಲ್ಲರ್ ಮ್ಯಾಜಿಕ್: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ  ಪೂಜಾರ ಬಳಗ ಮೊದಲ ದಿನದಿಂದಲೇ  ಒತ್ತಡಕ್ಕೆ ಒಳಗಾಗಿತ್ತು. ಕೇವಲ ಮೂವರು ಮಧ್ಯಮವೇಗಿಗಳು ಮತ್ತು  ಒಬ್ಬ ಸ್ಪಿನ್ನರ್ ಇಟ್ಟುಕೊಂಡು ಆಡಿದ ಆತಿಥೇ­ಯರು ಪೆಟ್ಟು ತಿಂದರು.  ಆದರೆ ಇಬ್ಬರು ಎಡಗೈ ಸ್ಪಿನ್ನರ್ ಗಳೊಂದಿಗೆ ಪ್ರವಾಸಿಗರು ಗೆದ್ದರು. ಎರಡೂ ಇನಿಂಗ್ಸ್ ಗಳಲ್ಲಿ ಒಟ್ಟು 19 ವಿಕೆಟ್‌ಗಳು ಸ್ಪಿನ್ನರ್ ಗಳ ಪಾಲಾದವು.
ಶುಕ್ರವಾರ 184 ರನ್ನುಗಳಿಂದ ಮೊದಲ ಇನಿಂಗ್ಸ್  ಮುನ್ನಡೆ ಪಡೆದಿದ್ದ ಕೆರಿಬಿಯನ್ ಬಳಗವು, ದಿನದಾಟದ ಅಂತ್ಯಕ್ಕೆ  ಎರಡನೇ ಇನಿಂಗ್ಸ್‌ನಲ್ಲಿ  34.5 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತ್ತು. ಒಟ್ಟು 314 ರನ್ನುಗಳ ಮುನ್ನಡೆ ಹೊಂದಿದ್ದ ವಿಂಡೀಸ್ ಶನಿವಾರ ಬೆಳಿಗ್ಗೆ ಬ್ಯಾಟ್ ಹಿಡಿಯುವ ಬದಲು, ಡಿಕ್ಲೇರ್ ಘೋಷಿಸಿತು.  315 ರನ್ನುಗಳ ಗುರಿಯನ್ನು ಬೆನ್ನತ್ತಿದ ಆತಿಥೇಯರಿಗೆ ಚಳ್ಳೇಹಣ್ಣು ತಿನ್ನಿಸಿತು.

ಚೆಂಡು ನಿಧಾನವಾಗಿ ಪುಟಿದೇಳುತ್ತಿದ್ದ ಪಿಚ್‌ನ ಮರ್ಮ ಅರಿತ ಎಡ್ವರ್ಡ್ ಎರಡನೇ ಇನಿಂಗ್ಸ್‌ನ ಮೊದಲ ಓವರ್ ಬೌಲಿಂಗ್ ಮಾಡಲು ನಿಕಿತ ಮಿಲ್ಲರ್ ಗೆ ಅವಕಾಶ ಕೊಟ್ಟರು.  ಪ್ರತಿ ಓವರ್ ಗೆ 1.09ರ ಸರಾಸರಿಯಲ್ಲಿ ರನ್ ನೀಡಿದ ಅವರು 5 ವಿಕೆಟ್ ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಮೊದಲ ಸ್ಪೆಲ್ ನಲ್ಲಿಯೇ (30–13–37–3) ಪ್ರಮುಖ ಬ್ಯಾಟ್ಸ್‌ಮನ್‌­ಗಳನ್ನು ಪೆವಿಲಿಯನ್‌ಗೆ ಕಳಿಸಿದರು.
ಆತಿಥೇಯ ತಂಡದ ಆರಂಭಿಕ ಬ್ಯಾಟಿಂಗ್ ಜೋಡಿಯು ಎಚ್ಚರಿಕೆಯಿಂದ ಆಡಿತು. ಕೆಳಹಂತದಲ್ಲಿ ಬರುತ್ತಿದ್ದ ಎಸೆತಗಳನ್ನು ಬ್ಯಾಕ್ ಫುಟ್ ನಲ್ಲಿ ಮತ್ತು ಸ್ವೀಪ್ ಶಾಟ್‌ಗಳ ಮೂಲಕ ಆಡುತ್ತಿದ್ದರು.

ಮಿಲ್ಲರ್ ಹಾಕಿದ 13ನೇ ಓವರ್ ನಲ್ಲಿ ಸ್ವಲ್ಪ ಪುಟಿದೆದ್ದ ಚೆಂಡನ್ನು ಹೊಡೆದ ಕೆ.ಎಲ್. ರಾಹುಲ್,  ಡಿಯೋನ್ ಜಾನ್ಸನ್‌ಗೆ ಕ್ಯಾಚಿತ್ತರು. ಆಗ ಮೈದಾನದ ಪ್ರೇಕ್ಷಕರ ಗ್ಯಾಲರಿಯ ಒಂದು ಭಾಗದಲ್ಲಿದ್ದ ಪ್ರೇಕ್ಷಕರು ಕೇಕೆ ಹಾಕಿ  ಚೇತೇಶ್ವರ್ ಪೂಜಾರ ಅವರನ್ನು ಸ್ವಾಗತಿಸಿದರು. ಮೊದಲ ಇನಿಂಗ್ಸ್ ನಲ್ಲಿ ವಿಫಲರಾಗಿದ್ದ ಪೂಜಾರ, ಕ್ರಿಕೆಟ್ ಪ್ರೇಮಿಗಳನ್ನು ಈ ಬಾರಿಯೂ ನಿರಾಸೆಗೊಳಿಸಿದರು.

ಒಂದು ಬೌಂಡರಿ ಸಮೇತ 17 ರನ್ ಗಳಿಸಿದ್ದ ಅವರನ್ನು ಮಿಲ್ಲರ್ 37ನೇ ಓವರ್‌ನಲ್ಲಿ ಎಲ್ ಬಿಡಬ್ಲ್ಯು ಬಲೆಗೆ ಬೀಳಿಸಿ ಊಟಕ್ಕೆ ನಡೆದರು. ಇದಕ್ಕೂ ಮುನ್ನ ಇನ್ನೊಬ್ಬ ಎಡಗೈ ಸ್ಪಿನ್ನರ್ ವೀರಸ್ವಾಮಿ ಪೆರುಮಾಳ್ ಓವರ್‌ನಲ್ಲಿ ಆರಂಭಿಕ ಆಟಗಾರ ಜೀವನಜ್ಯೋತ್ ಸಿಂಗ್ ಅವರು ಕರ್ಕ್ ಎಡ್ವರ್ಡ್ ಗೆ ಕ್ಯಾಚಿತ್ತು ನಿರ್ಗಮಿಸಿದ್ದರು.  ಅವರು ಪೂಜಾರ ಜೊತೆಗೆ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ ಗಳಿಸಿದ್ದ 28 ರನ್ ಇನಿಂಗ್ಸ್ ನ ದೊಡ್ಡ ಪಾಲುದಾರಿಕೆ. ನಂತರ ಆಗಮಿಸಿದ  ಮನಪ್ರೀತ್ ಜುನೇಜ ವಿಕೆಟ್ ಕೀಪರ್ ಶಡ್ವಿಕ್ ವಾಲ್ಟನ್ ರಿಂದ ಜೀವದಾನ ಪಡೆದಾಗ ತಂಡದ ಮೊತ್ತ ಇನ್ನೂ 50 ದಾಟಿರಲಿಲ್ಲ. 

ಊಟದ ನಂತರವೂ 11 ಓವರ್ ಬೌಲಿಂಗ್ ಮಾಡಿದ ಮಿಲ್ಲರ್ ಬದಲು ದಾಳಿಗಿಳಿದ ಬಲಗೈ ಸ್ಪಿನ್ನರ್ ನರಸಿಂಗ್ ದೇವನಾರಾಯಣ್ (11–0–29–2)ಕೂಡ ಅಪಾಯಕಾರಿಯಾದರು. ತಮ್ಮ ಮೊದಲ ಓವರ್ ನಲ್ಲಿಯೇ ರೋಹಿತ್ ಮೋಟ್ವಾನಿ (11, 43ನಿ, 46ಎಸೆತ, 1 ಬೌಂಡರಿ) ಅವರನ್ನ ಬಲೆಗೆ ಕೆಡವಿದರು.  ತಮ್ಮದೇ ಇನ್ನೊಂದು ಓವರ್ ನಲ್ಲಿ ಹರ್ಷದ್ ಖಡಿವಾಲೆ ನೇರವಾಗಿ ಹೊಡೆದ ಚೆಂಡನ್ನು ಕ್ಯಾಚ್ ಮಾಡಿ ಎರಡನೇ ವಿಕೆಟ್ ಗಳಿಸಿದರು.

ಇನ್ನೊಂದೆಡೆ ಸ್ವೀಪ್, ಬ್ಯಾಕ್ ಫುಟ್ ಪಂಚ್ ಗಳ ಮೂಲಕ ಜುನೇಜ  ರನ್ ಗಳಿಸುತ್ತಿದ್ದರು. ಆದರೆ ರನ್ ಗತಿ ನಿಧಾನವಾಗಿತ್ತು.  ಈ ಹಂತದಲ್ಲಿ 196 ಎಸೆತಗಳ­ವ­ರೆಗೆ ಒಂದು ಬಾರಿಯೂ ಚೆಂಡು ಬೌಂಡರಿ ಗೆರೆ ದಾಟಲಿಲ್ಲ. ಆದರೆ ಪೆರುಮಾಳ್ ಓವರ್‌ನಲ್ಲಿ ಜುನೇಜ ಬೌಂಡರಿ ಹೊಡೆದರು. ಇನ್ನೊಂದು ಓವರ್‌ನಲ್ಲಿ ಜುನೇಜ ಮಿಡ್ ವಿಕೆಟ್ ಫೀಲ್ಡರ್ ತಲೆ ಮೇಲಿಂದ ಸಿಕ್ಸರ್ ಎತ್ತಿದಾಗ ‘ಸ್ಕೋರ್ ಬೋರ್ಡ್’ ನಲ್ಲಿ ತಂಡದ ಮೊತ್ತ 100  ತೋರಿತು. ಈ ನಡುವೆ ಜುನೇಜ ಮತ್ತು ವಿಂಡೀಸ್ ಫೀಲ್ಡರ್ ಗಳ ನಡುವೆ ನವಿರು ಹಾಸ್ಯದ ಮಾತುಗಳ ವಿನಿಮಯವೂ ಗಮನ ಸೆಳೆಯಿತು.

ಆದರೆ ಇನ್ನೊಂದು ಬದಿಯಿಂದ ಎರಡನೇ ಸ್ಪೆಲ್ ಮಾಡಲು ದಾಳಿಗಿಳಿದ ಮಿಲ್ಲರ್, ರಜತ್ ಪಲಿವಾಲ ಅವರ ವಿಕೆಟ್ ಪಡೆದರು. ಚಹಾ ವಿರಾಮಕ್ಕೂ ಮುನ್ನ ಪರ್ವೇಜ್ ರಸೂಲ್ ಅವರನ್ನು ಪೆರುಮಾಳ್ ಔಟ್ ಮಾಡಿದರು. ವಿರಾಮದ ನಂತರ ಮಿಲ್ಲರ್ ಮೊಹಮ್ಮದ್ ಶಮಿ ಅವರನ್ನು ಬಲಿ ಪಡೆದರೆ, ಈಶ್ವರ್ ಪಾಂಡೆಯನ್ನು ಪೆರುಮಾಳ್ ಬಲಿ ಪಡೆದರು.  ಹೋರಾಟ ನಡೆಸುತ್ತಲೇ ಇದ್ದ ಜುನೇಜಗೆ ಉಳಿದ ಬ್ಯಾಟ್ಸ್ ಮನಗಳಿಂದ ತಕ್ಕ ಸಾಥ್ ಸಿಗಲಿಲ್ಲ.

ತಂಡದ ಮೊತ್ತವು 150ರ ಗಡಿ ದಾಟಿದ ನಂತರ ಮಿಲ್ಲರ್ ಎಸೆತವನ್ನು ಮುಂದಡಿ ಇಟ್ಟು ಆಡಿದ ಜುನೇಜ ಎಲ್ ಬಿಡಬ್ಲ್ಯು ಆಗುವ ಮೂಲಕ ಪಂದ್ಯಕ್ಕೆ ತೆರೆ ಬಿತ್ತು. ಕೆರೆಬಿಯನ್ನರ ವಿಜಯೋತ್ಸವ ರಂಗೇರಿತು.
 

ಸ್ಕೋರ್ ವಿವರ:
ವೆಸ್ಟ್ ಇಂಡೀಸ್ ‘ಎ‘ ಪ್ರಥಮ ಇನಿಂಗ್ಸ್: 135 ಓವರುಗಳಲ್ಲಿ 429 ದ್ವಿತೀಯ ಇನಿಂಗ್ಸ್: 34.5 ಓವರುಗಳಲ್ಲಿ 3 ವಿಕೆಟ್‌ಗಳಿಗೆ 130 ಡಿಕ್ಲೆರ್ಡ್

ಭಾರತ ‘ಎ‘ ಪ್ರಥಮ ಇನಿಂಗ್ಸ್ 95.3 ಓವರುಗಳಲ್ಲಿ 245 ದ್ವಿತೀಯ ಇನಿಂಗ್ಸ್ : 85.4 ಓವರುಗಳಲ್ಲಿ 152

ಕೆ.ಎಲ್. ರಾಹುಲ್ ಸಿ ಜಾನ್ಸನ್ ಬಿ ನಿಕಿತ ಮಿಲ್ಲರ್  09
ಜೀವನಜ್ಯೋತ್ ಸಿಂಗ್ ಸಿ ಎಡ್ವರ್ಡ್ಸ್ ಬಿ ಪೆರುಮಾಳ್  24
ಚೇತೇಶ್ವರ್ ಪೂಜಾರ ಎಲ್ ಬಿಡಬ್ಲು್ಯ ನಿಕಿತ ಮಿಲ್ಲರ್  17
ಮನಪ್ರೀತ್ ಜುನೇಜ ಎಲ್ ಬಿಡಬ್ಲ್ಯು ನಿಕಿತ್ ಮಿಲ್ಲರ್  70
ಮೋಟ್ವಾನಿ ಎಲ್ ಬಿಡಬ್ಲ್ಯು ದೇವನಾರಾಯಣ್  11
ಹರ್ಷದ್ ಖಡಿವಾಲೆ ಸಿ ಮತ್ತು ಬಿ ದೇವನಾರಾಯಣ್ 02
ರಜತ್ ಪಲಿವಾಲ ಸಿ ಕ್ರೇಗ್ ಬ್ರೆತ್ ವೆಟ್ ಬಿ ಮಿಲ್ಲರ್  02
ಪರ್ವೇಜ್ ರಸೂಲ್ ಬಿ ವೀರಸ್ವಾಮಿ ಪೆರುಮಾಳ್  11
ಮೊಹಮ್ಮದ್ ಶಮಿ ಸಿ ಕರ್ಕ್ ಎಡ್ವರ್ಡ್ಸ್ ಬಿ ಮಿಲ್ಲರ್  04
ಈಶ್ವರ್ ಪಾಂಡೆ ಸಿ ಕ್ರೇಗ್ ಬೆ್ರತ್ ವೇಟ್ ಬಿ ಪೆರುಮಾಳ್ 00
ಅಶೋಕ ದಿಂಡಾ ಔಟಾಗದೇ  02
ಇತರೆ:  00

ವಿಕೆಟ್ ಪತನ: 1–18 (12.3 ರಾಹುಲ್), 2–46 (25.2 ಸಿಂಗ್), 3–62 (36.5 ಪೂಜಾರ), 4–84 (50.4 ಮೋಟ್ವಾನಿ), 5–90 (50.4 ಖಡಿವಾಲೆ), 6–115 (63.6 ಪಲಿವಾಲ), 7–140 (72,2 ರಸೂಲ್‌), 8–145 (75.3 ಶಮಿ), 9–150 (84.3 ಪಾಂಡೆ) 10– 152 (85.4 ಜುನೇಜ).

ಬೌಲಿಂಗ್ ವಿವರ: ನಿಕಿತ ಮಿಲ್ಲರ್ 36.4–16–40–5,  ಮಿಗೆಲ್ ಕಮಿಂಗ್ಸ್  7–0– 15–0, ಡಿಯೋನ್ ಜಾನ್ಸನ್  2–0–9–0, ವೀರಸ್ವಾಮಿ ಪೆರುಮಾಳ್ 29–6–56–3,  ನರಸಿಂಗ್ ದೇವನಾರಾಯಣ್ 11–0–29–2.

ಫಲಿತಾಂಶ: ವೆಸ್ಟ್ ಇಂಡೀಸ್ ‘ಎ‘ ತಂಡಕ್ಕೆ 162 ರನ್ನುಗಳಿಗೆ ಜಯ. 

ಸರಣಿ: ವೆಸ್ಟ್ ಇಂಡೀಸ್ ‘ಎ’ 1–0 ಮುನ್ನಡೆ

ಮುಂದಿನ ಪಂದ್ಯ: ಅಕ್ಟೋಬರ್ 2 ರಿಂದ 5
(ಸ್ಥಳ: ಶಿವಮೊಗ್ಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT