ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ದಂಡೆ ಕಾಮಗಾರಿ: ವೀಕ್ಷಣೆಗೆ ರೈತ ಸಂಘ ತೀರ್ಮಾನ

Last Updated 14 ಜನವರಿ 2011, 8:25 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಯ‘ಎ’ಸ್ಕೀಂನಲ್ಲಿ ನೀರು ಪೂರೈಸುವ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಕಾಮಗಾರಿಯ ಪ್ರಗತಿ ಯಾವ ರೀತಿ ಸಾಗಿದೆ ಎಂಬ ಬಗ್ಗೆ ಪರಿಶೀಲನೆಗೆ ರೈತ ಸಂಘ ಮುಂದಾಗಬೇಕು ಎಂದು ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಬಯಲುಸೀಮೆಗೆ ನೀರು ಹರಿಸುವ ಅತ್ಯಂತ ಮಹತ್ವದ ಯೋಜನೆ ನೆನೆಗುದಿಗೆ ಬೀಳದಂತೆ ಸರ್ಕಾರದ ಮೇಲೆ ನಿರಂತರ ಒತ್ತಡ ತರಬೇಕಾದ ಹೊಣೆಗಾರಿಕೆ ನೀರಾವರಿ ಜಾರಿಗೆ ಹೋರಾಟ ನಡೆಸಿದ ಎಲ್ಲರ ಮೇಲಿದೆ. ಈಗಾಗಲೇ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೀರಾವರಿ ಕಲ್ಪಿಸುವ ಕೃಷ್ಣಾ ಯೋಜನೆ ಐದಾರು ದಶಕಗಳು ಕಳೆದರೂ ಪೂರ್ಣಗೊಂಡಿಲ್ಲ. ಇಲ್ಲಿ ಅದೇ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಕೆ.ಸಿ. ಹೊರಕೇರಪ್ಪ ಸಲಹೆ ಮಾಡಿದರು.

ಶೀಘ್ರದಲ್ಲಿಯೇ ರೈತರ ನಿಯೋಗವನ್ನು ಮುಖ್ಯ ಎಂಜಿನಿಯರ್ ಬಳಿ ಕರೆದೊಯ್ಯಬೇಕು. ಕಾಮಗಾರಿ ಕುರಿತು ವಿವರಣೆ ಪಡೆದು, ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಹೋಗಿ ಬರಬೇಕು ಎಂದು ಅವರು ತಿಳಿಸಿದರು.

ತಾಲ್ಲೂಕು ಯುವ ಶಕ್ತಿ ಸಂಘದ ವತಿಯಿಂದ ಪ್ರತೀ ವರ್ಷ ನಡೆಸುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು, ರೈತ ಮುಖಂಡರು ಒಪ್ಪಿದರೆ ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ನಡೆಸಲು ಸಿದ್ದರಿದ್ದೇವೆ ಎಂದು ಇತ್ತೀಚೆಗೆ ರೈತ ಸಂಘಕ್ಕೆ ಸೇರ್ಪಡೆ ಆಗಿರುವ ಕೆ.ಟಿ. ತಿಪ್ಪೇಸ್ವಾಮಿ ಹೇಳಿದರು.

ರೈತರ ನೀರಾವರಿ ಪಂಪ್‌ಸೆಟ್ ಸೇರಿದಂತೆ ಬೆಸ್ಕಾಂ ಇಲಾಖೆಯಿಂದ ಆಗುವ ಕೆಲಸಗಳನ್ನು ತಾವು ಉಚಿತವಾಗಿ ಮಾಡಿಕೊಡುವುದಾಗಿ ಗುರುವಾರ ರೈತ ಸಂಘಕ್ಕೆ ಸೇರ್ಪಡೆಯಾದ ತುಳಸೀದಾಸ್ ಭರವಸೆ ನೀಡಿದರು.

ಮಸ್ಕಲ್ ವೀರಣ್ಣ, ಜಿಜಿ ಹಟ್ಟಿ ಕಾಂತರಾಜ್, ಬಬ್ಬೂರು ಫಾರಂನ ಬಷೀರ್‌ಸಾಬ್ ಅವರನ್ನು ಸಂಘದ ರಾಜ್ಯ ಉಪಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ರೈತ ಸಂಘಕ್ಕೆ ಬರಮಾಡಿಕೊಂಡರು. ಸಂಘದ ತಾಲ್ಲೂಕು ಅಧ್ಯಕ್ಷ ಎ. ಕೃಷ್ಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಿ. ಸಿದ್ದರಾಮಣ್ಣ,ದಿವಾಕರ್, ಎಂ. ವೀರಣ್ಣ, ನರೇಂದ್ರ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT