ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಸೇತುವೆ-ಅನಾನುಕೂಲವೇ ಹೆಚ್ಚು

Last Updated 14 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಹೊಸಕೋಟೆ:  ಪಟ್ಟಣದ ಮಧ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆಯಿಂದ ಪ್ರವಾಸಿ ಮಂದಿರದ ವೃತ್ತದಲ್ಲಿ ಪಾದಚಾರಿಗಳಿಗಷ್ಟೇ ಅಲ್ಲದೆ ವಾಹನಗಳ ಸುಗಮ ಸಂಚಾರಕ್ಕೂ ತೊಂದರೆಯಾಗಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೊಂದು ಅವೈಜ್ಞಾನಿಕವಾಗಿ ನಿರ್ಮಿಸಿದ ಮೇಲ್ಸೇತುವೆ ಆಗಿದ್ದು ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಹೆದ್ದಾರಿ ಅಗಲೀಕರಣವಾದ ಮೇಲೆ ಇಲ್ಲಿ 6 ಪಥದ ರಸ್ತೆ ಜೊತೆಗೆ ಮೇಲ್ಸೆತುವೆ ನಿರ್ಮಾಣವಾಯಿತು. ಸೇತುವೆಯಿಂದ ಬೆಂಗಳೂರು ಕಡೆ ಇಳಿಯುವ ಜಾಗವನ್ನು ಆಕಾಶವಾಣಿ ಹತ್ತಿರ ಮಾಡುವ ಬದಲು ಪ್ರವಾಸಿ ಮಂದಿರ ವೃತ್ತದಲ್ಲೇ ಮಾಡಿರುವುದು ಪಾದಚಾರಿಗಳ ಆತಂಕಕ್ಕೆ ಕಾರಣವಾಗಿದೆ. ಮೊದಲು ಒಂದು ರಸ್ತೆಯನ್ನು ದಾಟುತ್ತಿದ್ದ ಜನರು ಈಗ ಪಾದಚಾರಿಗಳ ಮಾರ್ಗವೂ ಇಲ್ಲದೆ ಜೀವವನ್ನು ಕೈಯಲ್ಲಿ ಹಿಡಿದು 6 ಪಥದ ರಸ್ತೆಯನ್ನು ನಡುರಸ್ತೆಯಲ್ಲಿ ದಾಟಬೇಕಿದೆ. ಇಲ್ಲಿ ಬೀದಿ ದೀಪವೂ ಇಲ್ಲದೆ ರಾತ್ರಿ ಹೊತ್ತಿನಲ್ಲಂತೂ ಪಾದಚಾರಿಗಳು ಪಡಬಾರದ ಕಷ್ಟಕ್ಕೆ ಸಿಲುಕಿದ್ದಾರೆ.

ಅಷ್ಟೇ ಅಲ್ಲದೆ ಈ ವೃತ್ತದಲ್ಲಿ ಹೆದ್ದಾರಿ 207ರ ಕೂಡು ರಸ್ತೆಯೂ ಇದಾಗಿದೆ. ತಮಿಳುನಾಡು ಕಡೆಯಿಂದ ಹೆದ್ದಾರಿ 207ರಲ್ಲಿ ಬರುವ ವಾಹನಗಳು ಹೆದ್ದಾರಿ ನಾಲ್ಕರ ಚನ್ನಬೆೃರೇಗೌಡ ವೃತ್ತದಲ್ಲಿ ಎಡಕ್ಕೆ ತಿರುಗಿ ಮತ್ತೆ ಹೆದ್ದಾರಿ 207ಕ್ಕೆ ಹೋಗಲು ಪ್ರವಾಸಿ ಮಂದಿರದ ವೃತ್ತದಲ್ಲಿ ಬಲಕ್ಕೆ ತಿರುಗಬೇಕಿದೆ. ಅಲ್ಲದೆ ಹೆದ್ದಾರಿ ನಾಲ್ಕರಲ್ಲಿ ಚೆನ್ನೈ ಕಡೆಯಿಂದ ಬರುವವರು ಹೈದರಾಬಾದ್‌ಗೆ ಹೋಗಲು ಇದೇ ವೃತ್ತದಲ್ಲಿ ಬಲಕ್ಕೆ ತಿರುಗಬೇಕಿದೆ. ಪಟ್ಟಣದ ವಿಶ್ವೇಶ್ವರಯ್ಯ ಬಡಾವಣೆಗೆ ಹೋಗುವ ವಾಹನ ಸವಾರರೂ ಇಲ್ಲಿಯೇ ಹೋಗಬೇಕಿದೆ. ಹೀಗಾಗಿ ಇಲ್ಲಿ ವಾಹನಗಳ ಭರಾಟೆ ಹೆಚ್ಚಿದ್ದು ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ. ಇವುಗಳ ಮಧ್ಯೆ ಪಾದಚಾರಿಗಳು ನುಸುಳಿ ರಸ್ತೆ ದಾಟಬೇಕಿದೆ. ಮೇಲ್ಸೇತುವೆ ಇಳಿಜಾರಿನಲ್ಲಿ ರಸ್ತೆ ಉಬ್ಬು ನಿರ್ಮಿಸಿರುವುದರಿಂದ ವೇಗವಾಗಿ ಬರುವ ವಾಹನ ಸವಾರರಿಗೂ ಇದು ಬಿಸಿತುಪ್ಪವಾಗಿ ಪರಿಣಮಿಸಿದೆ. ಇಲ್ಲಿ ಯಾವುದೇ ಸಂಚಾರಿ ನಾಮಫಲಕಗಳನ್ನು ಅಳವಡಿಸಿಲ್ಲ.  ಈಗಾಲೇ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಮೂಳೆ ಮುರಿದುಕೊಂಡಿದ್ದಾರೆ. ಈ ವೃತ್ತ ಹೊಸದಾಗಿ ಅಪಘಾತಗಳ ತಾಣವಾಗಿ ಮಾರ್ಪಟ್ಟಿದೆ.

ಸುಗಮ ವಾಹನ ಸಂಚಾರ ಮತ್ತು ಪಾದಚಾರಿಗಳು ನಿರ್ಭೀತಿಯಿಂದ ರಸ್ತೆ ದಾಟಲು ಈ ವೃತ್ತದಲ್ಲಿ ಸಬ್‌ವೇ ನಿರ್ಮಾಣ ಅತ್ಯಗತ್ಯ ಎನ್ನುತ್ತಾರೆ ತಾಲ್ಲೂಕು ಘಟಕದ ಕರವೇ ಅಧ್ಯಕ್ಷ ಸಿ.ಜಯರಾಜ್. ಸಂಬಂಧಿಸಿದ ಹೆದ್ದಾರಿ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಮುಂದಾಗದಿದ್ದರೆ ಹೋರಾಟ ಅನಿವಾರ್ಯ ಎನ್ನುತ್ತಾರೆ ಸಾರ್ವಜನಿಕರು.

ಗಾಯಾಳು ಸಾವು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಚಿಕ್ಕನಹಳ್ಳಿಯ ಮುನಿರುದ್ರಮ್ಮ (55) ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟರು.

ಫೆ.8 ರಂದು ಮುನಿರುದ್ರಮ್ಮ ತಮ್ಮ ಅಂಗಡಿಗೆ ಸಾಮಾನು ಕೊಳ್ಳಲು ಹೊಸಕೋಟೆಗೆ ಬಂದಿದ್ದು ಹೆದ್ದಾರಿಯ ಅಂಬೇಡ್ಕರ್ ಕಾಲೊನಿ ಬಳಿ ರಸ್ತೆ ದಾಟುತ್ತಿದ್ದಾಗ ರಸ್ತೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಅವರು ಗಾಯಗೊಂಡಿದ್ದರು. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT