ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿಗೆ ಕಾಂಗ್ರೆಸ್‌ ಹುಡುಕಾಟ

ಲೋಕಸಭಾ ಚುನಾವಣೆ: ಹೆಚ್ಚಿನ ಬದಲಾವಣೆಗಿಲ್ಲ ಅವಕಾಶ
Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನೇತೃತ್ವದಲ್ಲಿ ಚೇತರಿ­ಸಿ­ಕೊಳ್ಳುತ್ತಿರುವ ಬಿಜೆಪಿಯನ್ನು ಎದುರಿ­ಸಲು ಕಾಂಗ್ರೆಸ್‌ನಲ್ಲಿ ಮೈತ್ರಿಕೂಟ ರೂಪಿಸುವ ವಿಚಾರದ ಚರ್ಚೆ ವೇಗ ಪಡೆದುಕೊಂಡಿದೆ.

ಕೇರಳ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಂಡ್‌ ರಾಜ್ಯ­ಗಳಲ್ಲಿ ಕಾಂಗ್ರೆಸ್‌ ವಿವಿಧ ಪಕ್ಷ­ಗಳೊಂದಿಗೆ ಈಗಾಗಲೇ ಮೈತ್ರಿ ಹೊಂದಿದೆ. ಬಿಹಾರ ಮತ್ತು ತಮಿಳು ನಾಡು­ಗಳಲ್ಲಿ ಕಾಂಗ್ರೆಸ್‌ ಬಹಳ ಬಲಿಷ್ಠ­ವಾಗಿ­ಯೇನೂ ಇಲ್ಲ. ಹಾಗಿದ್ದರೂ ಇರುವ ಬಲವನ್ನು ಉಳಿಸಿಕೊಳ್ಳುವು­ದಕ್ಕಾಗಿ ಮೈತ್ರಿಕೂಟದ ಬಗ್ಗೆ ಚಿಂತನೆ ನಡೆದಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಇಲ್ಲ ಎಂದು ಡಿಎಂಕೆ ಈಗಾಗಲೇ ಸ್ಪಷ್ಟಪಡಿಸಿದೆ. ಎಐಎಡಿಎಂಕೆಯೊಂದಿಗೆ ಒಂದು ಬಾರಿ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ ಕೈ ಸುಟ್ಟು­ಕೊಂಡಿದೆ. ಹಾಗಾಗಿ ಈಗ ಕಾಂಗ್ರೆಸ್‌­ಗೆ ಇರುವ ಅವಕಾಶ ಸೀಮಿತ. ನಟ ಕ್ಯಾಪ್ಟನ್‌ ವಿಜಯಕಾಂತ್‌ ಸ್ಥಾಪಿಸಿ­ರುವ ದೇಸೀಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಜತೆಗಿನ ಮೈತ್ರಿಯ ಅವಕಾಶಗಳನ್ನು ಕಾಂಗ್ರೆಸ್‌ ವಿಶ್ಲೇಷಿಸುತ್ತಿದೆ.

ಬಿಹಾರದಲ್ಲಿ ಲಾಲು ಪ್ರಸಾದ್‌ ನೇತೃತ್ವ­ದ ಆರ್‌ಜೆಡಿ ಮತ್ತು ರಾಮ್‌­ವಿಲಾಸ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿ ಜತೆ ಕಾಂಗ್ರೆಸ್‌ ಮೈತ್ರಿ ಖಚಿತ­ವಾದಂತೆ ತೋರುತ್ತಿದೆ. ಆದರೆ ಇದಕ್ಕಿಂತ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಉತ್ತಮ ಮಿತ್ರ ಎಂಬುದು ಕಾಂಗ್ರೆಸ್‌­ನ ಒಂದು ವರ್ಗದ ಅಭಿಪ್ರಾಯ. ಆದರೆ ಈ ಗುಂಪಿಗೆ ಅಲ್ಲಿ ಹೆಚ್ಚಿನ ಬೆಂಬಲ ಇಲ್ಲ.

ರಕ್ಷಣಾ ಸಚಿವ ಎ.ಕೆ.ಆಂಟನಿ ನೇತೃತ್ವ­ದ ಸಮಿತಿಯು ಮೈತ್ರಿ ವಿಚಾರಗಳ ಪರಿಶೀಲನೆ ನಡೆಸುತ್ತಿದೆ. ಈ ಸಮಿತಿ ಹೈಕಮಾಂಡ್‌ಗೆ ವರದಿ ಸಲ್ಲಿಸಿದ ಬಳಿಕ­ವಷ್ಟೆ ಸ್ಪಷ್ಟ ಚಿತ್ರಣ ದೊರೆಯಲಿದೆ.

ಅನುಕೂಲಕರ ಮಿತ್ರ ಪಕ್ಷಗಳ ಬಗ್ಗೆ ರಾಜ್ಯ ಘಟಕಗಳ ಜತೆ ಆಂಟನಿ ಸಮಾ­ಲೋಚನೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಕೇರಳ, ಮಹಾರಾಷ್ಟ್ರ, ಜಾರ್ಖಂಡ್‌ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಮಿತ್ರ ಪಕ್ಷಗಳ ವಿಷಯದಲ್ಲಿ ಹೆಚ್ಚಿನ ಬದಲಾವಣೆ ಸಾಧ್ಯತೆ ಇಲ್ಲ. ಸೀಟು ಹಂಚಿಕೆ ವಿಚಾರದಲ್ಲಿ ಮಾತ್ರ ಸಣ್ಣ ಪುಟ್ಟ ಬದಲಾವಣೆಗಳು ಆಗಬಹುದು.

ಕೇರಳದಲ್ಲಿ ಸಂಯುಕ್ತ ಪ್ರಜಾ­ಸತ್ತಾತ್ಮಕ ರಂಗದ ನೇತೃತ್ವವನ್ನು ಕಾಂಗ್ರೆಸ್ ವಹಿಸಿದೆ. ಮಹಾರಾಷ್ಟ್ರದಲ್ಲಿ ಎನ್‌ಸಿಪಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಜಾರ್ಖಂಡ್‌­ನಲ್ಲಿ ಜಾರ್ಖಂಡ್‌ ಮುಕ್ತಿ ಮೋರ್ಚಾ ಜತೆ ಕಾಂಗ್ರೆಸ್‌ ಮೈತ್ರಿ ಹೊಂದಿದೆ.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಜತೆ ಯಾವುದೇ ಹೊಂದಾ­ಣಿಕೆಗೆ ಅಲ್ಲಿನ ಕಾಂಗ್ರೆಸ್‌ ರಾಜ್ಯ ಘಟಕ ಸಿದ್ಧವಿಲ್ಲ. ಹಾಗಾಗಿ ಅಲ್ಲಿ ಕಾಂಗ್ರೆಸ್‌ಗೆ ಉಳಿದಿರುವುದು ಹಳೆಯ ಮಿತ್ರ ಎಡರಂಗ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT