ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ವಿಜಯನಗರ ಸಾಮ್ರಾಜ್ಯ!

Last Updated 27 ಫೆಬ್ರುವರಿ 2011, 9:45 IST
ಅಕ್ಷರ ಗಾತ್ರ

ಮೈಸೂರು: ರಣರಂಗದಲ್ಲಿ ಮೊಳಗಿದ ಯುದ್ಧ ಕಹಳೆ.. ಅಶ್ವದಳ ಸೈನಿಷರ ರೋಚಕ ಸೆಣಸಾಟ.. ಧ್ವನಿ ಇಲ್ಲದ ದನಿಯಲ್ಲಿ ಪಿಸುಗುಟ್ಟಿದ ಹಂಪಿಯ ಭಗ್ನ ಅವಶೇಷಗಳು.. ಕಾಲನ ಕಾಲ್ತುಳಿತಕ್ಕೆ ಬಲಿಯಾಗಿ ಕತೆ ಹೇಳಿದ ಕಂಬಗಳು.. ಕಲ್ಲು ಕಲ್ಲಿನಲೂ ಮೂಡಿದ ವಿಜಯನಗರ ಸಾಮ್ರಾಜ್ಯ.. -ಇವು, ನಗರದ ಸ್ಕೌಟ್ಸ್-ಗೈಡ್ಸ್ ಮೈದಾನದಲ್ಲಿ ಶನಿವಾರ ನೋಡುಗರ ನೋಟಕ್ಕೆ ಸಮರ್ಪಣೆಗೊಂಡ ದೃಶ್ಯಗಳು.  ಪ್ರವಾಸೋದ್ಯಮ ಇಲಾಖೆ ವತಿಯಿಂದ ಏರ್ಪಡಿಸಿದ್ದ ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ‘ಧ್ವನಿ ಮತ್ತು ಬೆಳಕು’ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಅದ್ಭುತ ಲೋಕವನ್ನು ಅನಾವರಣಗೊಳಿಸಿತು.

ಹಿನ್ನೆಲೆ ಧ್ವನಿಯಲ್ಲಿ ತೇಲಿಬಂದ ವಿಜಯನಗರ ಸಾಮ್ರಾಜ್ಯದ ಭವ್ಯ ಇತಿಹಾಸ. ಅದಕ್ಕೆ ತಕ್ಕಂತೆ ಬೆಳಕಿನ ಚಿತ್ತಾರ ಮೂಡಿಸಿದ ಬಣ್ಣದ ದೀಪಗಳು. ಹಂಪಿಯ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಧ್ವನಿ- ಸಂಯೋಜನೆ ಮತ್ತು ಬೆಳಕಿನ ಮೂಲಕ ಜನರು ಅಕ್ಷರಶಃ ತುದಿಗಾಲಲ್ಲಿ ನಿಂತು ವೀಕ್ಷಿಸಿದರು.

ಕೃಷ್ಣದೇವರಾಯ ಪಟ್ಟಾಭಿಷೇಕ ಸ್ವೀಕರಿಸಿ ಉಮ್ಮತ್ತೂರು ಯುದ್ಧವನ್ನು ಗೆದ್ದು, ಶ್ರೀರಂಗಪಟ್ಟಣದ ತಿರುಮಲಾಂಬೆಯನ್ನು ವರಿಸುತ್ತಾನೆ. ಇದಾದ ಬಳಿಕ ಕಳಿಂಗ ಯುದ್ಧಕ್ಕೆ ರಾಜ ಅಣಿಯಾಗುತ್ತಾನೆ. ಈ ಸಂದರ್ಭದಲ್ಲಿ ಪಟ್ಟದ ರಾಣಿ ತಿರುಮಲಾಂಬೆ ದುಃಖವನ್ನು ತಡೆಹಿಡಿದು, ಕೃಷ್ಣದೇವರಾಯನನ್ನು   ‘ಪ್ರಭುಗಳೇ ಉಮ್ಮತ್ತೂರು ಯುದ್ಧ ಗೆದ್ದು ನನ್ನನ್ನು ವರಿಸಿದ್ದೀರಿ. ಅದೇ ರೀತಿ ಕಳಿಂಗ ಯುದ್ಧವನ್ನು ಗೆದ್ದು ಮತ್ತೊಬ್ಬಳನ್ನು ವರಿಸಿದರೆ ಹೇಗೆ ಎನ್ನುವ ಆತಂಕ ನನ್ನದು’ ಎಂದು ಹೇಳುತ್ತಾಳೆ.

ಹೀಗೆ, ಕೃಷ್ಣದೇವರಾಯನ ಆಡಳಿತ-ಜೀವನವನ್ನು ಅತ್ಯಂತ ಸೂಕ್ಷ್ಮವಾಗಿ ಧ್ವನಿ-ಬೆಳಕು ಕಾರ್ಯ ಕ್ರಮದಲ್ಲಿ ಅಳವಡಿಸಲಾಗಿದೆ. ರಾಜನ ಆಸ್ಥಾನದಲ್ಲಿರುವ ಅಲ್ಲಾಸಾನಿ ಪೆದ್ದಣ್ಣ, ತಿಮ್ಮರಸ ಮಂತ್ರಿ, ತಿಮ್ಮಣ್ಣ ಕವಿ ಹಾಗೂ ತೆನ್ನಾಲಿ ರಾಮಕೃಷ್ಣರ ಸಂಭಾಷಣೆ, ಚರ್ಚೆಗಳನ್ನು ರಸವತ್ತಾಗಿ ಕಾರ್ಯಕ್ರಮ ಕಟ್ಟಿಕೊಡುತ್ತದೆ. ಕೃಷ್ಣದೇವರಾಯನ ಆಡಳಿತ ವೈಭವ, ಹಂಪಿಯ ಗತ ಇತಿಹಾಸವನ್ನು ಈ ಕಾರ್ಯಕ್ರಮದಿಂದ ಕಣ್ಣು ತುಂಬಿಕೊಳ್ಳಬಹುದು. ಬೃಹತ್ ವೇದಿಕೆಯಲ್ಲಿ ಲೋಟಸ್ ಮಹಲ್, ವಿಠಲನ ದೇಗುಲ, ಕಲ್ಲಿನ ರಥ, ಕಡಲೆಕಾಳು, ಸಾಸಿವೆಕಾಳು ಗಣಪ, ವಿಠಲ ಬಜಾರ್, ಅಕ್ಕ ತಂಗಿ ಬಂಡೆ, ಮಹಾನವಮಿ ದಿಬ್ಬಗಳನ್ನು ನೋಡುವುದೇ ಅಂದ.

ಚಾಲನೆ: ರಂಗಾಯಣ ನಿರ್ದೇಶಕ ಪ್ರೊ. ಲಿಂಗದೇವರು ಹಳೆಮನೆ ಹಾಗೂ ಮೇಯರ್ ಸಂದೇಶ್‌ಸ್ವಾಮಿ ಧ್ವನಿ ಬೆಳಕು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಫೆ. 27ರ ಸಂಜೆ 7.30ರಿಂದ 8.30ರ ವರೆಗೆ ಧ್ವನಿ ಬೆಳಕು ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT