ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಹಿರಿಮೆಗೊಂದು ಹೊಸ ಕಣ್ಣು

Last Updated 14 ಜುಲೈ 2012, 19:30 IST
ಅಕ್ಷರ ಗಾತ್ರ

`ಮೈಸೂರು~- ಹೆಸರಿನ ಜೊತೆಗೇ ನೆನಪಿಗೆ ಬರುವ ಮತ್ತೊಂದು ಪದ `ದಸರಾ~. ಮೈಸೂರಿಗೂ ದಸರಾಕ್ಕೂ ಅಷ್ಟೊಂದು ನಂಟು. `ಜಂಬೂ ಸವಾರಿ~ ಇಲ್ಲದ ದಸರಾ ಇರಲು ಸಾಧ್ಯವೇ ಇಲ್ಲ. ಜಂಬೂ ಸವಾರಿಯಲ್ಲಿ ಮುಂಚೂಣಿಯಲ್ಲಿ ಇರುವ ಅಶ್ವದಳ ಮತ್ತು ಬ್ಯಾಂಡ್ ಹಾಗೂ ಆರ್ಕೆಸ್ಟ್ರಾಗಳ ಪರಂಪರೆಯನ್ನು ಸೊಗಸಾದ ರೀತಿಯಲ್ಲಿ ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.

ಪುಸ್ತಕದ ಹೆಸರೇ ಸೂಚಿಸುವಂತೆ ಮೈಸೂರು ಅರಮನೆಯ ಪರಂಪರೆಯ ಭಾಗಗಳಾದ ಅಶ್ವದಳ, ಬ್ಯಾಂಡ್ ಹಾಗೂ ಆರ್ಕೆಸ್ಟ್ರಾಗಳ ಇತಿಹಾಸ, ಬೆಳೆದು ಬಂದ ಬಗೆ ಈಗ ಇರುವ ಸ್ವರೂಪಗಳನ್ನು ಸಚಿತ್ರವಾಗಿ ವಿವರಿಸಲಾಗಿದೆ.

`ಮೈಸೂರು ಅರಮನೆಯ ಪರಂಪರೆ ಘಟಕಗಳು~ ಎಂಬ ಅಧ್ಯಾಯದೊಂದಿಗೆ ಪ್ರಾರಂಭವಾಗುವ ಪುಸ್ತಕದಲ್ಲಿ ಒಟ್ಟು ಎಂಟು ಅಧ್ಯಾಯಗಳಿವೆ. ಅಶ್ವಾರೋಹಿ ಪಡೆ, ವಾದ್ಯವೃಂದ (ಬ್ಯಾಂಡ್), ಆರ್ಕೆಸ್ಟ್ರಾ (ವಾದ್ಯಮೇಳ), ಆಚರಣೆಗಳಿಗೆ ಹೊಂದಿಸಿದ ಸಂಗೀತದ (ಮಾಸ್ಸಡ್ ಬ್ಯಾಂಡ್) ವಾದ್ಯವೃಂದ , ಕರ್ನಾಟಕ ರಾಜ್ಯ ಅಶ್ವಾರೋಹಿ ಪೊಲೀಸ್ (ಕೆಎಆರ್‌ಪಿ =ಕರ್ನಾಟಕ ರಾಜ್ಯ ಸಶಸ್ತ್ರ ಪೊಲೀಸ್) ವಸ್ತು ಸಂಗ್ರಹಾಲಯ, ಕುತೂಹಲಕಾರಿ ಸಂಗತಿಗಳು/ಘಟನೆಗಳು, ಪರಂಪರೆಯ ಮುಂದುವರಿಕೆ ಎಂದು ವಿಭಾಗಿಸಲಾಗಿದೆ.

ಮೈಸೂರಿನ ಒಡೆಯರ್ ಸಾಮ್ರಾಜ್ಯದ (1399-1950) ಎಲ್ಲ ಅರಸರ ಕಾಲಾನುಕ್ರಮಣಿಕೆಯ ಜೊತೆಯಲ್ಲಿ ಸಿಂಹಾಸನದಲ್ಲಿ ಆಸೀನರಾಗಿದ್ದ ಮಹತ್ವದ ದೊರೆಗಳ ವರ್ಣಚಿತ್ರದೊಂದಿಗೆ ಪುಸ್ತಕ ಆರಂಭವಾಗುತ್ತದೆ. ಇಡೀ ಪುಟವನ್ನು ಅಲಂಕರಿಸಿರುವ ವಿದ್ಯುದ್ದೀಪಾಲಂಕೃತ ಅರಮನೆಯ ಚಿತ್ರ ಸೊಗಸಾಗಿದೆ.

ನಂತರ ಆರಂಭವಾಗುತ್ತದೆ, ಕಣ್ಮನ ತಣಿಸುವ ದಸರಾ ಮತ್ತು ಆನೆಯ ಮೇಲೆ ಚಿನ್ನದ ಅಂಬಾರಿಯೊಂದಿಗೆ ನಡೆಯುವ ಮೆರವಣಿಗೆಯ ಛಾಯಾಚಿತ್ರಗಳ ಸರಣಿ. ಅಶ್ವಾರೋಹಿ ಪಡೆಯ ಕಚೇರಿ, ಕುದುರೆ ಲಾಯ, ಕುದುರೆಗಳಿಗೆ ಸಂಬಂಧಿಸಿದ ಜೀನು, ಲಾಳ ಅವುಗಳನ್ನು ಸಿಂಗರಿಸಿ ಸಿದ್ಧಪಡಿಸುವ ವಿಧಾನಗಳನ್ನು ವಿವರವಾಗಿ ನೀಡಲಾಗಿದೆ.

ಪುಟ್ಟ ಮಾಹಿತಿಯ ಜೊತೆಯಲ್ಲಿರುವ ಸುಂದರ ಚಿತ್ರಗಳು ಆಲ್ಬಂ ನೋಡುತ್ತಿರುವ ಅನುಭವ ಉಂಟು ಮಾಡುತ್ತವೆ. ಅಶ್ವದಳಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಸಣ್ಣಪುಟ್ಟ ವಿವರಗಳನ್ನೂ ದಾಖಲಿಸಲಾಗಿದೆ. ಬ್ಯಾಂಡ್ ಹೌಸ್ ಹಾಗೂ ಅದರಲ್ಲಿ ಇರುವ ಸಂಗೀತದ ಸ್ವರಚಿಹ್ನೆಯ (ಮ್ಯೂಸಿಕಲ್ ನೋಟ್ಸ್) ಗ್ರಂಥಾಲಯದ ವಿವರಗಳಿವೆ.

ವಾದ್ಯಮೇಳದ ಕುರಿತ ಚಿತ್ರಗಳು ಅವರ ಸಿದ್ಧತೆ, ರಿಯಾಜ್‌ಗಳ ಕುರಿತೂ ಮಾಹಿತಿ ಇದೆ. ವಾದ್ಯವೃಂದಕ್ಕೆ ಮಹತ್ವದ ಕೊಡುಗೆ ನೀಡಿದ ಮಹತ್ವದ ಹಿಂದಿನ-ಇಂದಿನ ವ್ಯಕ್ತಿಗಳ ಚಿತ್ರ ಒದಗಿಸಲಾಗಿದೆ.

ಕರ್ನಾಟಕ ರಾಜ್ಯ ಸಶಸ್ತ್ರ ಪೊಲೀಸ್ (ಕೆಎಆರ್‌ಪಿ) ಪಡೆಯ ವಸ್ತುಸಂಗ್ರಹಾಲಯದ ಚಿತ್ರಗಳು ಇಡೀ ಪುಸ್ತಕದ ಮಹತ್ವದ ದೃಶ್ಯದಾಖಲೆಗಳಾಗಿವೆ. ಮ್ಯೂಸಿಯಂನಲ್ಲಿ ವಾದ್ಯಮೇಳ, ವಾದ್ಯವೃಂದಕ್ಕೆ ಸಂಬಂಧಿಸಿದ ಅಪರೂಪದ, ಮಹತ್ವದ ಸಂಗೀತ ಸಾಧನ, ದಾಖಲೆ, ಛಾಯಾಚಿತ್ರಗಳಿವೆ. ಅವುಗಳ ಮಹತ್ವ ಅರಿವಿಗೆ ಬರುವಂತೆ ಈ ಪುಸ್ತಕದಲ್ಲಿ ಅಳವಡಿಸಿರುವುದು ಪ್ರಿಯವಾಗುತ್ತದೆ.

ಮೈಸೂರು ಅರಮನೆಯಲ್ಲಿ ಇರುವ ದಸರಾ ಮೆರವಣಿಗೆಯ ಭಿತ್ತಿಚಿತ್ರಗಳ ಸರಣಿಯನ್ನು ಕೂಡ ನೀಡಲಾಗಿದೆ. ಇದೆಲ್ಲ ನೋಡುವ ಭಾಗವಾದರೆ ಓದುವ ಅಲ್ಪಭಾಗವೂ ಪುಸ್ತಕದಲ್ಲಿದೆ. ಆಸಕ್ತಿ ಹುಟ್ಟಿಸುವ ಕುತೂಹಲಕಾರಿ ಸಂಗತಿ, ಘಟನೆಗಳನ್ನು ವಿವರಿಸುವ ಅಧ್ಯಾಯ ಪ್ರಿಯವಾಗುತ್ತದೆ.

ಚಿರತೆಯೊಂದಿಗೆ ಸೆಣಸಾಡಿದ `ಬ್ರೇವ್‌ಹಾರ್ಟ್~, ಸಾಮಾನ್ಯವಾಗಿ ಏಳು ವರ್ಷ ಮಾತ್ರ ಓಡುವ (ರೇಸ್ ಕುದುರೆ) ಅತಿಹೆಚ್ಚು ಕಾಲ (27 ವರ್ಷದ ಸೇವೆ), ಅಂದರೆ 34 ವರ್ಷ ಬದುಕಿದ ಸ್ಟಾರ್‌ಲೈಟ್, ಧೈರ್ಯಶಾಲಿ `ಸಿಲ್ವರ್‌ಕಿಂಗ್~, ಕಾಡುಕುದುರೆಯಂತಹ `ಅಶ್ವಹೃದಯ~, ಬದುಕಿರುವಾಗಲೇ ದಂತಕತೆಯಾಗಿದ್ದ `ಜಯಮಾರ್ತಾಂಡ~ ಹಾಗೂ ತಮ್ಮ ಸೇವೆ-ಸಾಧನೆಯ ಮೂಲಕ ಪ್ರತಿಮೆ-ಪ್ರತೀಕಗಳಾದ ಅಂಚೆಯಾಳು ಮತ್ತು ಸವಾರ, ಹೆಸರಾಂತ ವಿಜ್ಞಾನಿ-ಸಂಗೀತಗಾರ ರಾಜಾರಾಮಣ್ಣ ವಾದ್ಯವೃಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.
ಇದೊಂದು ಅಪೂರ್ವ ದಾಖಲೆಗಳಿರುವ ಸಂಗ್ರಾಹ್ಯ ಗ್ರಂಥ ಎಂಬುದರಲ್ಲಿ ಎರಡು ಮಾತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT