ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪ್ರಧಾನಿಯಾದರೆ ವಾಕ್‌ ಸ್ವಾತಂತ್ರ್ಯಕ್ಕೆ ಧಕ್ಕೆ

ಕೆಪಿಸಿಸಿ ಉಪಾಧ್ಯಕ್ಷ ಪ್ರೊ. ಬಿಕೆಸಿ ಅಭಿಪ್ರಾಯ
Last Updated 23 ಸೆಪ್ಟೆಂಬರ್ 2013, 9:52 IST
ಅಕ್ಷರ ಗಾತ್ರ

ಮೈಸೂರು: ‘ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿ ಆದರೆ ದೇಶದಲ್ಲಿ ವಾಕ್‌ ಸ್ವಾತಂತ್ರ್ಯ ಸತ್ತು ಹೋಗುತ್ತದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ. ಚಂದ್ರಶೇಖರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಅನಂತಮೂರ್ತಿ ಅವರು ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಕೇಳಿ ಬಂದಿರುವ ಟೀಕೆ–ಟಿಪ್ಪಣಿಗಳು ಸರಿಯಲ್ಲ. ಮೋದಿ ಪ್ರಧಾನಿ ಆಗುತ್ತಾರೆಂದರೆ ಒಂದು ವರ್ಗ ಒಪ್ಪಲಿ. ಒಪ್ಪದಿರುವ ವರ್ಗವೂ ಸಮಾಜದಲ್ಲಿ ಇದೆ. ಪ್ರತಿಯೊಬ್ಬರೂ ತಮ್ಮದೇ ಅಭಿಪ್ರಾಯ ವ್ಯಕ್ತಪ­ಡಿಸಲು ವಾಕ್‌ ಸ್ವಾತಂತ್ರ್ಯ ಇದೆ. ಅವರ ವಿರುದ್ಧ ಅಸಹನೆ ಹೀಗೆ ಮುಂದುವರಿದರೆ ಪಕ್ಷತೀತವಾಗಿ ಎಲ್ಲರೂ ಎದ್ದು ನಿಲ್ಲಬೇಕು. ವಾದ–ವಿವಾದ ಏನೇ ಇರಲಿ. ಬೆದರಿಕೆ ಹಾಕುವುದು ಬೇಡ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಆಯನೂರು ಮಂಜುನಾಥ್‌ ಅವರು ಅನಂತ ಮೂರ್ತಿ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿರುವುದು ಸರಿಯಲ್ಲ. ವೈದ್ಯಕೀಯ ಚಿಕಿತ್ಸೆಗೂ ಸರ್ಕಾರವನ್ನು ಅವಲಂಬಿಸಿದ್ದರು ಎಂಬ ಹೇಳಿಕೆ ಕೀಳು ಮಟ್ಟದ್ದು. ಅನಂತಮೂರ್ತಿ ಅವರ ಅಭಿಪ್ರಾಯವನ್ನು ತಿರುಚಿ ಅವರ ವೈಯಕ್ತಿಕ ತೇಜೋವಧೆಗಾಗಿ ಮಾಧ್ಯಮಗಳು ಸಹ ಅಪಪ್ರಚಾರದಲ್ಲಿ ತೊಡಗಿದ್ದವು. ಮಾಧ್ಯಮಗಳು ವಾದ–ವಿವಾದಗಳ ಗಾಂಭಿರ್ಯ ಕಾಪಾಡಬೇಕು. ವಸ್ತುನಿಷ್ಠ ವರದಿ ಮಾಡಬೇಕು’ ಎಂದು ಮನವಿ ಮಾಡಿದರು.

ಸರ್ಕಾರಕ್ಕೆ ಶಹಭಾಸ್‌ಗಿರಿ: ‘2011ನೇ ಸಾಲಿನ ಕೆಎಎಸ್‌ ಮುಖ್ಯ ಪರೀಕ್ಷೆ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಮತ್ತು ಮರು ಸಂದರ್ಶನಕ್ಕೆ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿರುವುದು ಅಭಿನಂದನಾರ್ಹ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮತ್ತೊಂದು ಸಾಧನೆ ಇದು. ಅವರ ನಿರ್ಧಾರದಿಂದ ಹಿಂದೆ ನಡೆದಿದ್ದ ಹಗರಣಗಳು ಬಯಲಿಗೆ ಬರಲಿವೆ. ಲಕ್ಷಾಂತರ ರೂಪಾಯಿ ಲಂಚ ಕೊಟ್ಟು ಉನ್ನತ ಹುದ್ದೆಗಳನ್ನು ಗಿಟ್ಟಿಸಲಾಗದ, ಅರ್ಹ ವಿದ್ಯಾರ್ಥಿಗಳ ಕಣ್ಣೀರು ಒರೆಸುವ ಕೆಲಸವನ್ನು ಸರ್ಕಾರ ಮಾಡಿದೆ. ಇದರಿಂದ ಕೆಪಿಎಸ್‌ಸಿಯಲ್ಲಿ ಶೇ 90 ರಷ್ಟು ಭ್ರಷ್ಟಾಚಾರ ನಿರ್ಮೂಲನೆ ಆಗುತ್ತದೆ’ ಎಂದು ಹೇಳಿದರು.

‘ಪರೀಕ್ಷೆಯಲ್ಲಿ ಅಭ್ಯರ್ಥಿ ಗಳಿಸಿದ ಅಂಕ ಯಾರ ಕೈಗೂ ಸಿಗಂದತೆ ನೋಡಿಕೊಳ್ಳಬೇಕು. ಸಂದರ್ಶ ನವನ್ನು ವಿಡಿಯೊ ಚಿತ್ರೀಕರಣ ಮಾಡಬೇಕು. ತದ ನಂತರ ಸ್ವತಂತ್ರ ಸಂಸ್ಥೆಯೊಂದಕ್ಕೆ ಕೊಟ್ಟು ಸಂಪೂರ್ಣ ಪರೀಶೀಲನೆ ನಡೆಸಿದ ನಂತರ ನೇಮಕಾತಿ ನಡೆದರೆ ಯಾವುದೇ ಭ್ರಷ್ಟಾಚಾರ ನಡೆಯುವುದಿಲ್ಲ’ ಎಂದು ಸಲಹೆ ನೀಡಿದರು.

ಎಚ್‌ಡಿಕೆ ಹೇಳಿಕೆಗೆ ಆಕ್ಷೇಪ: ‘ಕೆಪಿಎಸ್‌ಸಿ ಅಕ್ರಮ ಕುರಿತು ಸಿಐಡಿ ತನಿಖೆ ನಡೆಸಿರುವ ಬಗ್ಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಒಂದೇ ಸಮುದಾಯದವನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸಲಾಗಿದೆ ಎಂದು ಹೇಳಿರುವುದು ದುರದೃಷ್ಟಕರ. ಕುಮಾರಸ್ವಾಮಿ ತುಂಬಾ ದೊಡ್ಡವರು. ಇಂತಹ ಹೇಳಿಕೆಗಳು ಅವರ ಘನತೆಗೆ ತಕ್ಕುದಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT