ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮೋಡಿ ನಿಜಕ್ಕೂ ನಡೆದಿದೆಯೇ?

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಭಾರತೀಯ ಜನತಾ ಪಕ್ಷವು ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ನಂತರ ದೇಶದ ರಾಜಕಾರ ಣದಲ್ಲಿ ಚರ್ಚೆಯ ದಿಕ್ಕುಗಳೇ ಬದಲಾಗುತ್ತಿವೆ. ಮೋದಿ­ಯವರು ಪ್ರಧಾನಿ ಆಗಿಯೇಬಿಡುತ್ತಾ­ರೆಂಬ ಭಾವನೆ ಮತ್ತು ಅವರು ಪ್ರಧಾನಿಯಾ­ಗಬಾ­ರದೆಂಬ ಪ್ರತಿಪಾದನೆ ಎರಡೂ ಚರ್ಚೆಯ ಕೇಂದ್ರ­ದಲ್ಲಿದ್ದರೂ ಮೋದಿಯವರ ಮೋಡಿ ನಡೆದೇ ತೀರುತ್ತದೆಯೆಂಬ ಭಾವನೆಯು ಬಲ­ಗೊ­ಳ್ಳುತ್ತಿದೆ. ಇದಕ್ಕೆ ಅವರ ಪ್ರಚಾರದ ವೈಖರಿ ಮತ್ತು ಕಾಂಗ್ರೆಸ್‌ನ ವೈಫಲ್ಯ ಎರಡೂ ಕಾರಣ­ವಾಗಿವೆ. ಈ ಹಿನ್ನೆಲೆಯಲ್ಲಿ. ಇತ್ತೀಚೆಗೆ ನಡೆದ ದೆಹಲಿ, ಛತ್ತೀಸಗಡ, ಮಧ್ಯಪ್ರದೇಶ ಮತ್ತು ರಾಜಸ್ತಾನಗಳ ಚುನಾವಣೆ ಫಲಿತಾಂಶ­ಗಳಲ್ಲಿ ಮೋದಿಯವರ ಮೋಡಿ ಇದೆಯೆ ಎಂದು ನೋಡಬೇಕು. ಆಗ ಸತ್ಯ ಹೊರಬರುತ್ತದೆ.

ಮೋದಿಯವರ ‘ಅಲೆ’ ಇತ್ತು ಎನ್ನುವುದಕ್ಕೆ ಮಾನದಂಡ ಏನು? ಒಂದು ಈವರೆಗಿನ ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಮೀರಿ ಹೊಸ ಮತಗಳನ್ನು ಗಳಿಸಲು ಸಾಧ್ಯವಾಗ­ಬೇಕು; ಎರಡು ಮೋದಿಯವರ ಪ್ರಭಾವ ಹೊಸ ಭೌಗೋಳಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ವಿಸ್ತಾರವಾಗಬೇಕು. ಹೀಗೆ ಆಗಿದೆಯೆ ಎಂಬುದನ್ನು ನೋಡೋಣ.

ದೆಹಲಿ ಚುನಾವಣೆಯಲ್ಲಿ 2008 ರಲ್ಲಿ 23 ಸ್ಥಾನ ಗಳಿಸಿದ್ದ ಬಿಜೆಪಿ ಈಗ 31 ಸ್ಥಾನ ಗಳಿಸಿದೆ. ಕಾಂಗ್ರೆಸ್‌ 43 ರಿಂದ 8 ಸ್ಥಾನಕ್ಕೆ ಕುಸಿದಿದೆ. ಆಮ್‌ ಆದ್ಮಿ ಪಕ್ಷ 28 ಸ್ಥಾನ ಪಡೆದಿದೆ. ದೆಹಲಿಯಲ್ಲಿ ಬಿ.ಜೆ.ಪಿ.ಯು ಅಧಿಕಾರ ಹಿಡಿಯ­ಬಹುದೆಂಬ ನಿರೀಕ್ಷೆ ಹುಸಿಯಾಗಿದೆ. 2008 ರಲ್ಲಿ ಶೇ 36.6 ರಷ್ಟು ಮತಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ಶೇ 34.37 ರಷ್ಟು ಮತಗಳನ್ನು ಪಡೆದಿದೆ. ಮೋದಿ ಮೋಡಿಯಿಂದ ಹೊಸದಾಗಿ ಮತಗಳನ್ನು ಪಡೆಯುವ ಬದಲು ಶೇ 1.08 ರಷ್ಟು ಮತಗಳನ್ನು ಕಳೆದು­ಕೊಂಡಿದೆ. ಮೋದಿಯವರು ದೆಹಲಿಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ರ್‍ಯಾಲಿ ನಡೆಸಿದ್ದರು. ಈ ಆರರಲ್ಲಿ ನಾಲ್ಕು ಕಡೆ (ಅಂಬೇಡ್ಕರ್‌ನಗರ, ಬಲ್ಲಿ ಮರಾನ್‌, ಸುಲ್ತಾನ್‌ಪುರ ಮಜ್ರಾ ಮತ್ತು ರೋಹಿಣಿ) ಬಿಜೆಪಿ ಸೋತಿದೆ.

ಇದು ಏನನ್ನು ಸೂಚಿಸುತ್ತದೆಯೆಂಬುದು ಸ್ಪಷ್ಟ. ಇನ್ನೊಂದು ಮುಖ್ಯಾಂಶವೆಂದರೆ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗಳು ಗೆದ್ದಿರುವ 28 ಕ್ಷೇತ್ರಗಳಲ್ಲಿ 22 ಕಡೆ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಆಮ್‌ ಆದ್ಮಿ ಪಕ್ಷ ಎರಡನೇ ಸ್ಥಾನದಲ್ಲಿರುವ 18 ಕ್ಷೇತ್ರಗಳಲ್ಲಿ 16 ಕಡೆ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದ್ದಾರೆ. ಈ ಅಂಕಿ ಅಂಶಗಳು ದೆಹಲಿ ಚುನಾ­ವಣೆಯಲ್ಲಿ ಮೋದಿ ಮೋಡಿ ನಡೆದಿಲ್ಲ ಎಂಬು­ದಕ್ಕೆ ಸ್ಪಷ್ಟ ಸಾಕ್ಷಿಯಾ­ಗಿದೆ. ಅಣ್ಣಾ ಹಜಾರೆ­ಯವರ ಭ್ರಷ್ಟಾ­ಚಾರ ವಿರೋಧಿ ಆಂದೋಲನದ ಅಲೆಯು ಆಮ್‌ ಆದ್ಮಿ ಪಕ್ಷಕ್ಕೆ ಅನುಕೂಲ ಮಾಡಿಕೊಟ್ಟಿದೆ.

ಜೊತೆಗೆ ಆಮ್‌ ಆದ್ಮಿ ಪಕ್ಷದ ಪಡೆಯು ಮಧ್ಯಮ ಮತ್ತು ಮೇಲ್‌ಮಧ್ಯಮ ವರ್ಗದವರ ಒಲವನ್ನು ಗಳಿಸುವ ಪ್ರಯತ್ನದಲ್ಲಿ ಸಾಕಷ್ಟು ಫಲ ಗಳಿಸಿದೆ. ಕೇಜ್ರಿವಾಲ್‌ ಅವರೇ ಒಪ್ಪಿಕೊಂಡಂತೆ ಕೆಳವರ್ಗದವರು, ದಲಿತರು ಮತ್ತು ಮುಸ್ಲಿ­ಮರು ಅವರ ಪಕ್ಷಕ್ಕೆ ಬೆಂಬಲವಾಗಿ ನಿಂತಿಲ್ಲ. ಆಮ್‌ ಆದ್ಮಿ ಪಕ್ಷಕ್ಕೆ ಸಾಮಾಜಿಕ ನ್ಯಾಯದ ನೀತಿ ಇಲ್ಲದಿರುವುದೂ ಇದಕ್ಕೆ ಕಾರಣವಿರಬಹುದು. ಅದೇನೇ ಇರಲಿ ಮೋದಿಯವರು ಪ್ರಚಾರ ಮಾಡಿದ ಕಡೆಯೇ ಬಿಜೆಪಿ ಅಭ್ಯರ್ಥಿಗಳು ಸೋತದ್ದು, ಮತ ಗಳಿಕೆಯ ಶೇಕಡಾವಾರು ಸಂಖ್ಯೆ ಕುಸಿದದ್ದು ಅವರ ಅಲೆ ಇರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಈಗ ಛತ್ತೀಸಗಡಕ್ಕೆ ಬರೋಣ. ಈ ರಾಜ್ಯ­ದಲ್ಲೂ ಮೋದಿ ರ್‍ಯಾಲಿಗಳು ನಡೆದವು. ಆದರೆ 2008 ರಲ್ಲಿ 50 ಸ್ಥಾನ ಗಳಿಸಿದ್ದ ಬಿಜೆಪಿ ಈ ಸಾರಿ 49ಕ್ಕೆ ಇಳಿಯಿತು. ಹೋಗಲಿ ಶೇಕಡಾವಾರು ಮತ ಸಂಖ್ಯೆಯಾದರೂ ವಿಸ್ತಾರ­ವಾಯಿತೆ ಎಂದರೆ ಅದೂ ಆಗಲಿಲ್ಲ. 2008 ರಲ್ಲಿ ಶೇ 41.96 ರಷ್ಟು ಮತ ಪಡೆದಿದ್ದ ಬಿಜೆಪಿಯು ಈ ಸಾರಿ 41.06ಕ್ಕೆ ಇಳಿಯಿತು.  2008 ರಲ್ಲಿ ಶೇ 40.16 ರಷ್ಟು ಮತಗಳನ್ನು ಗಳಿಸಿದ್ದ ಕಾಂಗ್ರೆಸ್‌ ಈ ಬಾರಿ ಶೇ 40.29 ರಷ್ಟು ಮತಗಳನ್ನು ಗಳಿಸಿದ್ದಲ್ಲದೆ ಒಂದು ಸ್ಥಾನವನ್ನು ಹೆಚ್ಚುವರಿ­ಯಾಗಿ ಗೆದ್ದಿದೆ. ಇನ್ನು ಆದಿವಾಸಿ ಪ್ರದೇಶಗ­ಳಲ್ಲಂತೂ ಕಾಂಗ್ರೆಸ್‌ ಶೇ 90 ರಷ್ಟು ಕ್ಷೇತ್ರಗಳಲ್ಲಿ ಗೆದ್ದಿದೆ. ಹಾಗಾದರೆ ಮೋದಿ ಮೋಡಿ ಎಲ್ಲಿ ನಡೆದಿದೆ? ಶೇಕಡಾವಾರು ಮತ ಸಂಖ್ಯೆಯೂ ವಿಸ್ತಾರವಾಗಿಲ್ಲ; ಸ್ಥಾನಗಳೂ ಹೆಚ್ಚಾಗಿಲ್ಲ.

ಮಧ್ಯಪ್ರದೇಶದಲ್ಲಿ ಬಿಜೆಪಿಯು 2008 ಕ್ಕಿಂತ ಶೇ 7 ರಷ್ಟು ಹೆಚ್ಚು ಮತಗಳನ್ನೂ 23 ರಷ್ಟು ಹೆಚ್ಚು ಸ್ಥಾನಗಳನ್ನೂ (ಒಟ್ಟು 165 ಸ್ಥಾನ) ಪಡೆದಿದೆ. ಕಾಂಗ್ರೆಸ್‌ ಕಳೆದ ಬಾರಿಗಿಂತ ಶೇ 4 ರಷ್ಟು ಹೆಚ್ಚು ಮತಗಳನ್ನು ಪಡೆದಿದ್ದರೂ 13 ಸ್ಥಾನಗಳನ್ನು ಕಳೆದುಕೊಂಡಿದೆ. ಕಳೆದಬಾರಿ ಶೇ 37.7 ರಷ್ಟು ಮತ ಪಡೆದಿದ್ದ ಬಿಜೆಪಿ ಈ ಬಾರಿ ಶೇ 44.87 ರಷ್ಟು ಪಡೆದಿದ್ದರೆ ಶೇ 32.4 ರಷ್ಟು ಪಡೆದಿದ್ದ ಕಾಂಗ್ರೆಸ್‌ ಶೇ 36.67 ರಷ್ಟು ಮತ ಪಡೆದಿದೆ. ಆದರೆ 13 ಸ್ಥಾನ ಕಳೆದುಕೊಂಡಿದೆ.

ಕಳೆದ ಬಾರಿ ಶೇ 29.9 ರಷ್ಟು ಮತ ಪಡೆದಿದ್ದ ಬಿಎಸ್‌ಪಿ ಮುಂತಾದ ಪಕ್ಷಗಳು ಈ ಸಾರಿ ಶೇ 18.76 ರಷ್ಟು ಪಡೆದಿವೆ. ಬಿಜೆಪಿಗೆ ಇತರರ ಮತಗಳೇ ಹೆಚ್ಚು ಹೋಗಿರುವ ಸಾಧ್ಯತೆಯಿದೆ. ಜೊತೆಗೆ 2008 ರಲ್ಲಿ ಪ್ರತ್ಯೇಕ ಪಕ್ಷ ಕಟ್ಟಿ ಶೇ 28 ರಷ್ಟು ಮತಗಳನ್ನು ಗಳಿಸಿದ್ದ ಉಮಾಭಾರತಿ­ಯವರು ಈ ಸಾರಿ ಬಿಜೆಪಿಯಲ್ಲೇ ಇದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಬಿಜೆಪಿಯ ಶಿವರಾಜ್‌ಸಿಂಗ್‌ ಅವರಿಗೆ ಒಳ್ಳೆಯ ಹೆಸರೂ ಇದೆ. ಈ ಎಲ್ಲ ಅಂಶಗಳನ್ನು ಒಗ್ಗೂಡಿಸಿ ನೋಡಿ­ದಾಗ ಬಿಜೆಪಿ ಗೆಲುವಿನಲ್ಲಿ ಮೋದಿಯವರ ಪಾತ್ರ ಗೌಣ ಎನ್ನುವುದು ಸ್ಪಷ್ಟವಾಗುತ್ತದೆ. ಇನ್ನೂ ಒಂದು ಮಾತು ಹೇಳುವುದಾದರೆ 2008ರ ಬಿಜೆಪಿ ಮತಸಂಖ್ಯೆ ಶೇ 37.7ರ ಜೊತೆಗೆ ಉಮಾಭಾರತಿಯವರ ಶೇ 28 ರಷ್ಟು ಸೇರಿದರೆ ಒಟ್ಟು ಶೇ 65.70 ರಷ್ಟು ಮತಗಳು ಬಿಜೆಪಿಯ­ದಾಗಬೇಕಿತ್ತು. ಆದರೆ ಬೆಂಬಲದ ಮತಸಂಖ್ಯೆ ಶಿಥಿಲಗೊಂಡಿದೆ. ಶಿವರಾಜ್‌ಸಿಂಗ್‌ ಅವರ ಆಡಳಿತದ ಪ್ರಭಾವದಿಂದ ಅಧಿಕಾರವನ್ನು ಉಳಿಸಿ­ಕೊಂಡು ಹ್ಯಾಟ್ರಿಕ್‌ ಸಾಧಿಸಲಾಗಿದೆ.

ಈ ಮೂರು ರಾಜ್ಯಗಳಿಗೆ ಹೇಳಿದ ಮಾತನ್ನೇ ರಾಜಸ್ತಾನಕ್ಕೆ ಹೇಳಲಾಗುವುದಿಲ್ಲ. ರಾಜಸ್ತಾನ­ದಲ್ಲಿ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಕೊನೇ ಹೊತ್ತಿನಲ್ಲಿ ಅನುಷ್ಠಾನಗೊಳಿಸಲು ಹೊರಟ ಕಾಂಗ್ರೆಸ್‌ ಸರ್ಕಾರ ತನ್ನ ನಿಧಾನದ್ರೋಹಕ್ಕೆ ಬೆಲೆ ತೆರಬೇಕಾಯಿತು. ಜೊತೆಗೆ ಆಡಳಿತ ವೈಫಲ್ಯ ಮತ್ತು ಆಂತರಿಕ ವೈರುಧ್ಯಗಳೂ ಸೋಲಿಗೆ ಕಾರಣ. ಇದೇ ಸಂದರ್ಭದಲ್ಲಿ ಸಾಕಷ್ಟು ಮುಂಚಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸಿದ ವಸುಂಧರರಾಜೆ ಅವರ ವರ್ಚಸ್ಸು ಮತ್ತು ಅವರ ಬಿಗಿ ಆಡಳಿತದ ಬಗೆಗಿದ್ದ ಸದಭಿಪ್ರಾಯಗಳು ಬಿಜೆಪಿಗೆ ಸಹಕಾರಿಯಾದವು. ಈ ಎಲ್ಲ ಅಂಶಗಳ ಜೊತೆಗೆ ಮೋದಿಯವರ ಪ್ರಭಾವವೂ ಕೆಲಸ ಮಾಡಿತು. ಕಾಂಗ್ರೆಸ್‌ ವೈಫಲ್ಯ, ವಸುಂಧರಾ­ರಾಜೆ ಅವರ ವರ್ಚಸ್ಸು ಮತ್ತು ಮೋದಿಯವರ ಪ್ರಭಾವ–ಮೂರೂ ಒಂದಾಗಿ ಬಿಜೆಪಿಗೆ ಯಶದ ಹಾದಿ ತೆರೆಯಿತು. ಕಳೆದ ಬಾರಿ ಶೇ 34.27 ರಷ್ಟು ಪಡೆದಿದ್ದ ಬಿಜೆಪಿ ಈ ಸಾರಿ ಶೇ 46.03 ರಷ್ಟು ಮತಗಳನ್ನು ಗಳಿಸಿತು. ಕಳೆದ ಬಾರಿ ಶೇ 36.83 ರಷ್ಟು ಗಳಿಸಿದ್ದ ಕಾಂಗ್ರೆಸ್‌ ಈ ಬಾರಿ ಶೇ 33.88 ರಷ್ಟು ಗಳಿಸಿತು. ಬಿಜೆಪಿಯು ಕಾಂಗ್ರೆಸ್‌ನ ಶೇ 3 ರಷ್ಟು ಮತಗಳನ್ನಷ್ಟೇ ಕಿತ್ತು­ಕೊಂಡು ಇತರರ ಮತ­ಗಳನ್ನು ಹೆಚ್ಚು ಪಡೆ­ಯಿತು; 162 ಸ್ಥಾನ­ಗಳನ್ನು ಗಳಿಸಿತು (ಕಳೆದ ಸಾರಿ 78). ಕಾಂಗ್ರೆಸ್‌ 95 ರಿಂದ 21ಕ್ಕೆ ಕುಸಿ­ಯಿತು. ರಾಜಸ್ತಾನದಲ್ಲಿ ವಸುಂಧರಾ ಅವರ ಸಂಘಟನೆ, ವರ್ಚಸ್ಸು ಮುಖ್ಯ ಪಾತ್ರ ವಹಿಸಿ­ದ್ದರೂ ಮೋದಿ­ ಪ್ರಭಾವವೂ ಪೂರಕವಾಗಿ ಕೆಲಸ ಮಾಡಿ­ದ್ದನ್ನು ಅಲ್ಲಗಳೆಯ­ಲಾಗದು. ಅವ­ರದು ಪೂರಕ ಪಾತ್ರ ಎಂಬುದನ್ನೂ ಮರೆಯಬಾರದು.

ಒಟ್ಟಾರೆ, ರಾಜಸ್ತಾನದಲ್ಲಿ ಒಂದಷ್ಟು ಪ್ರಭಾವ ಬೀರಿ ಮತಸಂಖ್ಯೆಯ ವಿಸ್ತರಣೆಗೆ ಕಾರ­ಣ­ವಾಗಿದ್ದನ್ನು ಬಿಟ್ಟರೆ ಇನ್ನಿತರ ರಾಜ್ಯಗಳಲ್ಲಿ ‘ಮೋದಿ ಮೋಡಿ’ಯು ಕೆಲಸ ಮಾಡಿಲ್ಲ ಅಥವಾ ಅತ್ಯಲ್ಪ ಎನ್ನುವುದನ್ನು ಗಮನಿ­ಸಬೇಕು. ಪ್ರಚಾ­ರದ ಅಬ್ಬರದಲ್ಲಿ ನಿಬ್ಬೆರಗಾಗಿ ವಸ್ತುಸ್ಥಿತಿ ವಂಚನೆ ನಡೆಯ­ಬಾರದು. ಬಿಜೆಪಿ, ಕಾಂಗ್ರೆಸ್‌ಗಳನ್ನೂ ಒಳಗೊಂಡಂತೆ, ಪಕ್ಷಗಳೂ ಮತ್ತು ಪಂಥ ಪ್ರತಿಪಾದಕರು ಸತ್ಯಸಂಗತಿಗಳನ್ನು ಮರೆಯಬಾರದು; ಮರೆಮಾಚಬಾರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT