ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಹನ ಮುರಳಿಯ ಮಾಡುತ...

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಎಪ್ಪತ್ತೈದು ವಸಂತಗಳನ್ನು ದಾಟಿರುವ ಕಲಾವಿದ ಬಿ.ಎಂ.ಸುಂದರ್ ರಾವ್ ಕಲೆಯ ಆರಾಧಕ. ಇವರು ಕೊಳಲನ್ನು ಬಹಳ ಚೆನ್ನಾಗಿ ನುಡಿಸುತ್ತಾರೆ. ಹಾಗೆಯೇ ಹಾಡನ್ನು ಹಾಡುತ್ತಾರೆ.

ಕೇಳುಗರನ್ನು ಪರವಶಗೊಳಿಸುವಂತಹ ನಾದ ಹೊಮ್ಮಿಸುವ ಕೊಳಲುಗಳನ್ನು ತಯಾರಿಸುವಲ್ಲಿ ಇವರು ಸಿದ್ಧಹಸ್ತರು. ಕಲಾವಿದ ಸುಂದರ್ ರಾವ್ ತಮ್ಮ ಕಲಾಪ್ರೀತಿ, ಕೊಳಲು ತಯಾರಿಸುವುದರ ಹಿಂದಿನ ಶ್ರಮ ಹಾಗೂ ಗುರುಭಕ್ತಿಯನ್ನು ಹಂಚಿಕೊಂಡಿದ್ದು ಹೀಗೆ...

`ಏಳು ವರ್ಷದವನಿದ್ದಾಗಲೇ ಕೊಳಲಿನ ನಿನಾದ ನನ್ನನ್ನು ಕಾಡ ತೊಡಗಿತು. ಆಗಲೇ ನನ್ನೊಳಗೆ ಕೊಳಲು ನುಡಿಸುವ ಕಲೆ ಕಲಿಯಬೇಕೆಂಬ ತುಡಿತ ಹೆಚ್ಚಾಗಿದ್ದು. ಹಾಗಾಗಿ ನಾನು 1958ರಲ್ಲಿ ಕೆಜಿಎಫ್‌ನಿಂದ ಬೆಂಗಳೂರಿಗೆ ಬಂದೆ. ಆಗ ನನ್ನೊಳಗೆ ಇದ್ದುದು ಒಂದೇ ಭಾವ. ಒಬ್ಬ ಒಳ್ಳೆ ಗುರುವಿನ ಬಳಿ ಕೊಳಲು ಕಲಿಯಬೇಕು ಎಂಬುದು.

ಕೊಳಲಿನಿಂದ ಇಂಪಾದ ನಾದ ಹೊರಡಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಒಳ್ಳೆ ಗುರುವಿನ ಸಾನ್ನಿಧ್ಯವಿಲ್ಲದೇ ಅದು ಮೈಗೂಡುವುದಿಲ್ಲ ಎನ್ನುವ ವಾಸ್ತವ ನನಗೆ ಅಷ್ಟರಲ್ಲಾಗಲೇ ಅರಿವಾಗಿತ್ತು. ನನ್ನ ಅದೃಷ್ಟ ಚೆನ್ನಾಗಿತ್ತು. ಗುರುವಿನ ಹುಡುಕಾಟದಲ್ಲಿದ್ದ ನನಗೆ ಸದಾಶಿವನಗರದಲ್ಲಿ ಒಬ್ಬರು ಸಿಕ್ಕರು. ಹೆಸರು ಟಿ.ಆರ್.ಮಹಾಲಿಂಗಂ.

ಗುರು ಸಿಕ್ಕಾಕ್ಷಣ ಕೊಳಲು ಕಲಿಯುವ ಅವಕಾಶ ನನಗೆ ಲಭಿಸಲಿಲ್ಲ. ಆದರೆ ಅವರ ಸೇವೆ ಮಾಡುವ ಅವಕಾಶ ಸಿಕ್ಕಿತು. ನಾನು ಐದು ವರ್ಷ ದೇವನಹಳ್ಳಿಯಲ್ಲಿರುವ ಅವರ ಫಾರ್ಮ್ ಹೌಸ್ ನೋಡಿಕೊಳ್ಳುತ್ತಿದ್ದೆ. ಅವತ್ತೊಂದು ದಿನ ಗುರುಗಳು ನನ್ನನ್ನು ಮಧ್ಯರಾತ್ರಿ ಎರಡಕ್ಕೆ ಎಬ್ಬಿಸಿದರು. ಗಾಢ ನಿದ್ದೆಯಲ್ಲಿದ್ದ ನಾನು ತಡಬಡಾಯಿಸಿಕೊಂಡು ಎದ್ದೆ.
 
ಕೊರೆವ ಚಳಿಯಲ್ಲಿ ನನ್ನನ್ನು ನಡೆಸಿಕೊಂಡು ಸ್ಯಾಂಕಿ ಟ್ಯಾಂಕಿ ಬಳಿಗೆ ಬಂದರು. ಅಲ್ಲಿಯೇ ಅವರು ಮೊದಲು ನನಗೆ ಕೊಳಲಿನ ಬಗ್ಗೆ ಪಾಠ ಮಾಡಿದ್ದು. ಮುಂದೆ ನಾನು ಗುರುವಿನ ಮಾರ್ಗದರ್ಶನದಲ್ಲಿ ಕಲಿಯುತ್ತಾ ಹೋದೆ. ನನ್ನನ್ನು ಶಿಷ್ಯನಾಗಿ ಸ್ವೀಕರಿಸಿದ ಗುರುಗಳು ಎಲ್ಲ ಸಂದರ್ಭದಲ್ಲೂ ನನ್ನ ಉತ್ಸಾಹಕ್ಕೆ ಇಂಬು ನೀಡಿ ನನ್ನನ್ನು ತಿದ್ದಿ ತೀಡಿದರು. ಒಂದರ್ಥದಲ್ಲಿ ನಾನು ಅವರಿಗೆ ಮಾನಸ ಪುತ್ರನಾದೆ.

ಕೊಳಲು ನುಡಿಸುವುದರ ಜತೆಗೆ ನನ್ನಲ್ಲಿ ಕೊಳಲು ತಯಾರಿಸುವ ಆಸಕ್ತಿ ಹುಟ್ಟಿಸಿದ್ದು ಟಿ.ಆರ್. ಮಹಾಲಿಂಗಂ ಅವರೇ. ದೇಶದಲ್ಲಿ ಕೊಳಲು ನುಡಿಸುವವರು ಅನೇಕರಿದ್ದಾರೆ. ಆದರೆ, ಕೊಳಲು ತಯಾರಕರು ತೀರಾ ಕಮ್ಮಿ.

ಕೊಳಲು ವಾದಕನೇ ಕೊಳಲು ತಯಾರಕನಾದರೆ ಅದಕ್ಕೊಂದು ಲಾಲಿತ್ಯ. ನೀನು ನುಡಿಸುವುದರ ಜತೆಗೆ ಕೊಳಲು ತಯಾರಿಸುವುದನ್ನು ಕಲಿ ಎಂದು ಗುರುಗಳು ಹುರಿದುಂಬಿಸಿದರು. ಹಾಗಾಗಿ ನಾನು ಕೊಳಲು ತಯಾರಿಸುವುದರತ್ತಲೂ ಗಮನ ಹರಿಸಿದೆ.

ಕೊಳಲು ಕಲಿಯಬೇಕು ಎಂಬ ಹಪಹಪಿ ಹುಟ್ಟಿಕೊಂಡಂತೇ ನನಗೆ ಕೊಳಲು ತಯಾರಿಕೆಯಲ್ಲೂ ಹುರುಪು ಮೂಡಿತು. ಕೊಳಲಿಗೆ ಹೊಂದುವ ಬಿದಿರು ತರುವ ಸಲುವಾಗಿ ನಾನು ತಮಿಳುನಾಡಿನಲ್ಲಿರುವ ಕಾಡುಗಳಲ್ಲಿ ಅಡ್ಡಾಡಿದೆ. ಅಲ್ಲಿಂದ ತಂದ ಬೊಂಬುಗಳನ್ನು ಕೊಳಲು ತಯಾರಿಸಲು ಬಳಸಿಕೊಂಡೆ.

ಕೊಳಲು ತಯಾರಿಸುವುದು ನುಡಿಸುವಷ್ಟು ಸುಲಭವಲ್ಲ. ಇದೊಂದು ದೀರ್ಫಕಾಲೀನ ಪ್ರಕ್ರಿಯೆ. ಶ್ರಮಸಾಧ್ಯ ವಿಚಾರ. ಇದು ಕಲೆಯಷ್ಟೆ ಅಲ್ಲ; ತಯಾರಿಕೆಗೆ ವೈಜ್ಞಾನಿಕ ಜ್ಞಾನವನ್ನು ಬೇಡುವ ಕಸುಬು.

ಕೊಳಲುಗಳನ್ನು ಸ್ವರ ಹೊರಡುವಂತೆ ಮಾಡುವುದು ಒಂದು ಸವಾಲಿನ ವಿಚಾರ. ಕೊಳಲನ್ನು ಫೈನ್‌ಟ್ಯೂನ್ ಮಾಡುವುದು ತಯಾರಿಕೆಯ ಒಂದು ಸಮಗ್ರ ಅಂಶ. ನೂರು ಕೊಳಲುಗಳನ್ನು ತಯಾರಿಸಿದರೆ, ಅವುಗಳಲ್ಲಿ ಕೇವಲ ಹತ್ತು ಮಾತ್ರ ಇಂಪಾದ ನಾದ ಹೊರಡಿಸಬಲ್ಲ ಶಕ್ತಿ ಹೊಂದಿರುತ್ತವೆ. ಇನ್ನುಳಿದ ಕೊಳಲುಗಳನ್ನು ಇದೇ ಹದಕ್ಕೆ ತರಲು ಮತ್ತಷ್ಟು ಕೆಲಸ ಮಾಡಬೇಕು.

ಟಿ.ಆರ್.ಮಹಾಲಿಂಗಂ ಅವರ ಶಿಷ್ಯನಾಗಿ ಸಾಕಷ್ಟು ಯಶಸ್ಸು ಗಳಿಸಿದೆ.  ಈಗ ನನಗಿರುವುದು ಕಲೆಯನ್ನು ಬೆಳೆಸಬೇಕು ಎಂಬ ಒಂದೇ ಒಂದು ಆಸೆ. ಅದಕ್ಕಾಗಿ ಶಾಲೆಯೊಂದನ್ನು ತೆರೆದಿದ್ದೇನೆ. ಇಲ್ಲಿ ಎಂಬತ್ತು ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಕೊಳಲು, ಕೀಬೋರ್ಡ್, ವಯೋಲಿನ್, ಮೃದಂಗ ಹಾಗೂ ಸಂಗೀತ ಪಾಠವನ್ನು ಆಸಕ್ತರಿಗೆ ಉಚಿತವಾಗಿ ಹೇಳಿಕೊಡುತ್ತಿದ್ದೇನೆ.
 
ನನ್ನ ಕಲೆಯನ್ನು ಮೆಚ್ಚಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳು ನೀಡಿವೆ. ಸರ್ಕಾರ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ವೈಯಾಲಿಕಾವಲ್‌ನಲ್ಲಿರುವ ಬಯಲು ಮಂದಿರವೊಂದಕ್ಕೆ ನನ್ನ ಹೆಸರು ಇರಿಸಿ ಗೌರವ ಸಲ್ಲಿಸಿದ್ದಾರೆ.

ಮಹಾಲಿಂಗಂ ಅವರು ಬೆಂಗಳೂರಿನಲ್ಲಿ 35 ವರ್ಷ ನೆಲೆಸಿದ್ದರು. ಮೂಲ ತಮಿಳಿಗರಾದರು ಅವರು ಕನ್ನಡಿಗ ಎಂದು ಹೇಳಿಕೊಳ್ಳಲು ಅವರು ಹೆಮ್ಮೆ ಪಡುತ್ತಿದ್ದರು. ಸಂಗೀತವನ್ನು ನನಗೆ ಧಾರೆ ಎರೆದ ಮಹಾಲಿಂಗಂ ಅವರ ಕೊನೆಗಾಲದಲ್ಲಿ ಅವರ ಸೇವೆ ಮಾಡುವ ಭಾಗ್ಯ ದೊರತದ್ದು ನನ್ನ ಪುಣ್ಯ.

ಈಗ ಗುರುವಿನ ಹೆಸರಿನಲ್ಲಿ ಒಂದು ಸಂಗೀತ ಶಾಲೆಯನ್ನು ಆರಂಭಿಸಬೇಕು ಎಂಬುದು ನನ್ನ ಮಹದಾಸೆ. ಅದಕ್ಕೆ ಸರ್ಕಾರ ಒಂದು ನಿವೇಶನ ನೀಡಿ ಸಹಕರಿಸುವುದೇ ಎಂದು ಕಾಯುತ್ತಿದ್ದೇನೆ. ಹಾಗಾಗಿ ನಾನು ಸರ್ಕಾರಕ್ಕೆ ಮನವಿ ಮೇಲೆ ಮನವಿ ಸಲ್ಲಿಸಿದ್ದೇನೆ. ಆದರೆ ಇದುವರೆವಿಗೂ ಎಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. 

ಸಂಗೀತ ನನ್ನ ಉಸಿರು. ನಾನು ಬದುಕಿರುವವರೆವಿಗೂ ಗುರುವಿನ ಹೆಸರಿನಲ್ಲಿ ಸ್ಥಾಪಿಸಬೇಕೆಂದುಕೊಂಡಿರುವ ಸಂಗೀತ ಶಾಲೆ ಕಟ್ಟುವ ಕನಸು ಬಿಡುವುದಿಲ್ಲ~ ಎನ್ನುವಾಗ ಸುಂದರಂ ಅವರ ಕಣ್ಣುಗಳಲ್ಲಿ ಛಲ ಗೋಚರಿಸುತ್ತದೆ. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT