ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನಕ್ಕೆ ಬೆಲೆ ಕೊಡಿ: ಚಿಟ್ಟಾಣಿ

Last Updated 18 ಫೆಬ್ರುವರಿ 2012, 6:35 IST
ಅಕ್ಷರ ಗಾತ್ರ

ಮಂಗಳೂರು: ನಿಜವಾದ ಕನ್ನಡ ಇರುವುದು ಯಕ್ಷಗಾನದಲ್ಲಿ. ಇದರಲ್ಲಿ ಯಾವುದೇ ಭಾಷೆಯ ಬೆರಕೆ ಇಲ್ಲ. ಕನ್ನಡ ಹೋರಾಟಗಾರರು ಮೊದಲು ಯಕ್ಷಗಾನಕ್ಕೆ ಬೆಲೆ ಕೊಡಬೇಕು ಎಂದು ಯಕ್ಷಗಾನದ ಮೇರು ಕಲಾವಿದ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಕಿವಿಮಾತು ಹೇಳಿದರು.

ನಗರದ ಡಾನ್ ಬಾಸ್ಕೋ ಸಭಾಂಗಣದಲ್ಲಿ ಕಲ್ಕೂರ ಪ್ರತಿಷ್ಠಾನ ಆಶ್ರಯದಲ್ಲಿ ಶುಕ್ರವಾರ ನಡೆದ `ಪದ್ಮಶ್ರೀ ಯಕ್ಷ ಸಂಭ್ರಮ ಅಭಿನಂದನಾ ಸಮಾರಂಭ~ ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

`ಅಭಿಮಾನಿಗಳು ದೇವರು. ಪ್ರೇಕ್ಷಕರನ್ನು ಮರೆಯಬೇಡಿ ಎಂದು ಚಿತ್ರನಟ ರಾಜ್ ಕುಮಾರ್ ಹೇಳುತ್ತಿದ್ದರು. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಕಲಾಭಿಮಾನಿಗಳು. ಅಭಿಮಾನಿಗಳೇ ದೇವರು. ಅಭಿಮಾನಿಗಳಿಂದಾಗಿ ಈ ಮಟ್ಟಕ್ಕೆ ಬೆಳೆದೆ. ಪದ್ಮಶ್ರೀ ಯಕ್ಷಗಾನ ಕಲಾಲೋಕಕ್ಕೆ ಸಂದಿರುವ ಪ್ರಶಸ್ತಿ. ಸಾವಿರ ಸಾವಿರ ಅಭಿಮಾನಿಗಳ ಹಾರೈಕೆಯಿಂದ ಪದ್ಮಶ್ರೀ ಸಿಕ್ಕಿದೆ~ ಎಂದು ಅವರು ಭಾವುಕರಾದರು.

ಕಲಾವಿದ ಬೆಳೆದು ಬೆಳಗಬೇಕಾದರೆ ಪರಿಸರ, ಪರಿಕರ ಅವಶ್ಯ. ಸಮರ್ಥ ಹಿಮ್ಮೇಳದ ಬೆಂಬಲವೂ ಬೇಕು. ಎದುರಿಗೆ ಸಮರ್ಥ ನಟರೂ ಇರಬೇಕು. ಈ ಮಟ್ಟಿಗೆ ತಾನು ಅದೃಷ್ಟವಂತ. ಕಡತೋಕ ಮಂಜುನಾಥ ಭಾಗವತರು ಕಲಾಧರನ ಮೂಲಕ ತಮ್ಮನ್ನು ಬೆಳೆಸಿದರು. ಕೆರೆಮನೆ ಮಹಾಬಲ ಹೆಗಡೆ, ಜಲವಳ್ಳಿ ವೆಂಕಟೇಶ ರಾವ್ ಅವರಂತಹ ಸಮರ್ಥರ ಎದುರಿಗೆ ವೇಷ ಹಾಕಿದ್ದೇನೆ ಎಂದು ಅವರು ನೆನಪಿಸಿಕೊಂಡರು.

ಕಲಾವಿದರಿಗೆ ಮಾತು, ಕುಣಿತ, ಅಂಗವಿನ್ಯಾಸ ಎಲ್ಲವೂ ಬೇಕು. ಕಲಾವಿದರು ತಾವು ಬೆಳೆದು ಕಲೆಯನ್ನೂ ಬೆಳೆಸಬೇಕು. ಭವಿಷ್ಯದಲ್ಲಿ ಯಕ್ಷಗಾನಕ್ಕೆ ಭಾರತರತ್ನ, ಪದ್ಮವಿಭೂಷಣ ಪ್ರಶಸ್ತಿಗಳು ದೊರಕಬೇಕು ಎಂದರು.

ಎರಡು ಪಿಎಚ್.ಡಿ: ಯಕ್ಷಗಾನ ವಿಮರ್ಶಕ ಎಂ. ಪ್ರಭಾಕರ ಜೋಷಿ ಅಭಿನಂದನಾ ಭಾಷಣ ಮಾಡಿ, ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಸಾಧನೆ ಆಧರಿಸಿ ಎರಡು ಪಿಎಚ್.ಡಿ ಪ್ರಬಂಧಗಳು ಮಂಡನೆಯಾಗಿವೆ. ಯಕ್ಷಗಾನದ ಮಟ್ಟಿಗೆ ಇದೊಂದು ದಾಖಲೆ ಎಂದು ಬಣ್ಣಿಸಿದರು.

ಈ ಎರಡೂ ಪ್ರಬಂಧ ಹಾಗೂ `ನಿಮ್ಮ ಚಿಟ್ಟಾಣಿ~ ಕೃತಿಯನ್ನು ಸೇರಿಸಿ ಒಂದು ಸಂಪುಟ ಬಿಡುಗಡೆಯಾಗಬೇಕು. ಚಿಟ್ಟಾಣಿ ನೃತ್ಯ ಪ್ರಕಾರದ ದಾಖಲೀಕರಣ ಆಗಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಂಗಳಾದೇವಿ ರಾಮಕೃಷ್ಣ ಮಠದ ಜಿತಕಾಮಾನಂದ ಸ್ವಾಮೀಜಿ ಮಾತನಾಡಿ, ಶಾಲಾ ಕಾಲೇಜು ಕಲಿತವರು ಮಾತ್ರ ಬುದ್ಧಿವಂತರು ಎಂಬ ಭಾವನೆ ತಪ್ಪು. ಚಿಟ್ಟಾಣಿ ಅವರಂತಹ ಉದಾಹರಣೆ ಸಾಕಷ್ಟಿವೆ ಎಂದರು.

ಯಕ್ಷಗಾನ ಕಲೆ ಈಗ ಕರಾವಳಿ ಹಾಗೂ ಮಲೆನಾಡಿನಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಉತ್ತರ ಕರ್ನಾಟಕ ಜಿಲ್ಲೆಗಳಿಗೂ ಈ ಕಲೆ ಹರಡಬೇಕು ಎಂದು ಹೇಳಿದರು.

ಮೂಡಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಭಾರತೀಯ ವಿದ್ಯಾಭವನದ ಜಿ.ಆರ್.ರೈ., ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಹರಿದಾಸ ಹೊಸಬೆಟ್ಟು ವಾಗೀಶ ಆಚಾರ್ಯ ಇದ್ದರು.
ಅಗಲಿದ ಡಾ. ವಿ.ಎಸ್. ಆಚಾರ್ಯ ಅವರಿಗೆ ಶ್ರದ್ಧಾಂಜಲಿ ಅರ್ಪಿಸ ಲಾಯಿತು.

ಬಳಿಕ ಬಂಗಾರಮಕ್ಕಿ ವೀರಾಂಜನೇಯ ಮೇಳದವರು  `ಚೂಡಾಮಣಿ~ ಪ್ರಸಂಗವನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT