ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಆಸ್ಪತ್ರೆಯಿಂದ ಆಸ್ಪತ್ರೆಗೆ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಂಗಳವಾರ ಇತರೆ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.

ಆಂಜಿಯೊಗ್ರಾಂ, ಹೋಲ್ಟರ್ ಸ್ಟಡಿ (24 ಗಂಟೆಗಳ ಹೃದಯ ಬಡಿತವನ್ನು ಅಧ್ಯಯನ ಮಾಡುವ ವಿಧಾನ) ಹಾಗೂ ಇತರೆ ಪರೀಕ್ಷೆಗಳನ್ನು ನಡೆಸಿದ ಜಯದೇವ ಆಸ್ಪತ್ರೆಯ ವೈದ್ಯರು ಯಡಿಯೂರಪ್ಪ ಅವರ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದೆ ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಪ್ರಮಾಣಪತ್ರ ನೀಡಿದರು.
ಉಸಿರಾಟದ ತೊಂದರೆ, ಬೆನ್ನು ನೋವು, ರಕ್ತದೊತ್ತಡ, ಮೂತ್ರಕೋಶ ಸಂಬಂಧಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲು ಅಧೀಕ್ಷಕರು ನಿರ್ಧರಿಸಿದರು.

`ಯಡಿಯೂರಪ್ಪನವರ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಹೃದಯ ಸಂಬಂಧಿ ಸಮಸ್ಯೆ ಇಲ್ಲದಿರುವುದು ದೃಢಪಟ್ಟಿತು. ಹಾಗಾಗಿ ಮಂಗಳವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ನಿರ್ಧರಿಸಲಾಯಿತು~ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ತಿಳಿಸಿದರು.

`ಯಡಿಯೂರಪ್ಪನವರಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಆಸ್ಪತ್ರೆಯ ಇತರೆ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಸೋಮವಾರವೂ ಆಸ್ಪತ್ರೆಯಲ್ಲಿ 1,800 ರೋಗಿಗಳ ಆರೋಗ್ಯ ತಪಾಸಣೆ ಮಾಡಲಾಗಿದೆ~ ಎಂದು ಅವರು ಮಾಹಿತಿ ನೀಡಿದರು.

ನಾಟಕೀಯ ಬೆಳವಣಿಗೆ: ಜಯದೇವ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ ಯಡಿಯೂರಪ್ಪ ಅವರನ್ನು ಮುಖ್ಯದ್ವಾರದ ಬದಲು ಕ್ಯಾಂಟೀನ್ ಬಳಿಯ ಬಾಗಿಲು ಮೂಲಕ ಹೊರಗೆ ಕರೆದೊಯ್ಯಲಾಯಿತು. ಸಾರ್ವಜನಿಕರ ಕಣ್ಣಿಗೆ ಕಾಣದಂತೆ ಅಂಬುಲೆನ್ಸ್‌ನ ಗಾಜುಗಳನ್ನು ಪರದೆಗಳಿಂದ ಮರೆಮಾಚಲಾಗಿತ್ತು. ಯಡಿಯೂರಪ್ಪ ಅವರಿದ್ದ ಸ್ಟ್ರೆಚರ್ ಅನ್ನು ಸಹ  ಬಟ್ಟೆಯಿಂದ ಮರೆ ಮಾಡಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಪೊಲೀಸರು ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು.

ವಿಕ್ಟೋರಿಯಾ ಆಸ್ಪತ್ರೆಯ ಶತಮಾನೋತ್ಸವ ಭವನ ಆವರಣ ತಲುಪಿದ ಅಂಬುಲೆನ್ಸ್‌ನಿಂದ ಸ್ಟ್ರೆಚರ್ ಮೂಲಕ ಯಡಿಯೂರಪ್ಪ ಅವರನ್ನು ಆಸ್ಪತ್ರೆಯ ಒಳಗೆ ಕರೆದೊಯ್ಯಲಾಯಿತು. ಅಂಬುಲೆನ್ಸ್‌ನಿಂದ ಆಸ್ಪತ್ರೆಯ ದ್ವಾರದವರೆಗೆ ಯಡಿಯೂರಪ್ಪ ಅವರು ಕಾಣದಂತೆ ಬೆಡ್‌ಶೀಟ್‌ಗಳನ್ನು ಮರೆಮಾಡಿದ್ದು ಪ್ರತ್ಯಕ್ಷದರ್ಶಿಗಳ ಕುತೂಹಲಕ್ಕೆ ಕಾರಣವಾಯಿತು. ಭದ್ರತೆಗಾಗಿ ಇಬ್ಬರು ಎಸಿಪಿಗಳ ನೇತೃತ್ವದ ಪೊಲೀಸ್ ತಂಡ ಭದ್ರತೆಯ ನೇತೃತ್ವ ವಹಿಸಿತ್ತು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಬೆಂಬಲಿಗರು ಆಸ್ಪತ್ರೆಯ ಆವರಣದಲ್ಲಿ ಸೇರಿದ್ದರು.

ಎ.ಸಿ ಮತ್ತಿತರ ಸೌಲಭ್ಯ: ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಸರ್ಜಿಕಲ್‌ಗ್ಯಾಸ್ಟ್ರೊ ಎಂಟ್ರಾಲಜಿ ವಿಭಾಗದ ಕೊಠಡಿಗೆ ಯಡಿಯೂರಪ್ಪ ಅವರನ್ನು ಕರೆದೊಯ್ಯಲಾಯಿತು. 12/16 ಅಡಿ ವಿಸ್ತೀರ್ಣದ ಹವಾನಿಯಂತ್ರಿತ ಕೊಠಡಿಯಲ್ಲಿ ಟಿ.ವಿ, ಫ್ಯಾನ್, ಗೀಸರ್ ಮತ್ತಿತರ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಸಹಾಯಕರಿಗೆ ಕೂಡ ಕೋಣೆಯಲ್ಲಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಒದಗಿಸಲಾಗಿದೆ. ವೈದ್ಯರಾದ ಡಾ. ಕೆ.ಆರ್.ರವೀಂದ್ರ, ಡಾ.ಆನಂದ್‌ಕುಮಾರ್ ಹಾಗೂ ಡಾ. ನಟರಾಜ್ ಅವರು ಯಡಿಯೂರಪ್ಪ ಅವರ ಆರೋಗ್ಯ ತಪಾಸಣೆ ಮಾಡಿದರು.

`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಡಾ.ರವೀಂದ್ರ, `ಯಡಿಯೂರಪ್ಪ ಅವರ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಾಗೂ ಸೋಡಿಯಂ ನಿಯಂತ್ರಣದಲ್ಲಿ ಇಲ್ಲದೇ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈಗ ಅವರಿಗೆ ಇನ್ಸುಲಿನ್ ಹಾಗೂ ಇನ್‌ಹೇಲರ್ ನೀಡಲಾಗಿದೆ. ಬುಧವಾರ ಹಿರಿಯ ವೈದ್ಯರು ತಪಾಸಣೆ ನಡೆಸಲಿದ್ದಾರೆ~ ಎಂದು ತಿಳಿಸಿದರು. 

ಹೈಕೋರ್ಟ್‌ಗೆ ಕೃಷ್ಣಯ್ಯ ಶೆಟ್ಟಿ
ಲೋಕಾಯುಕ್ತ ವಿಶೇಷ ಕೋರ್ಟ್ ಜಾಮೀನು ನೀಡಲು ನಿರಾಕರಿಸಿರುವ ಕ್ರಮವನ್ನು ಪ್ರಶ್ನಿಸಿ ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಮಂಗಳವಾರ ಹೈಕೋರ್ಟ್ ಮೊರೆ ಹೋಗಿದ್ದಾರೆ. ವೈದ್ಯಕೀಯ ಅಂಶಗಳ ಆಧಾರದ ಮೇಲೆ ಜಾಮೀನು ನೀಡುವಂತೆ ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT