ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ವಿರುದ್ಧ ಪಂಚಮಸಾಲಿ ಗುಡುಗು

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗೋಕಾಕ (ಬೆಳಗಾವಿ): `ಈ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ವಿಚಾರದಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಸ್ಥಾನ ಹೋದರೂ ಪರವಾಗಿಲ್ಲ ಎಂದು ಸದಾನಂದ ಗೌಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ~ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಚರ ಪೀಠಾಧಿಪತಿ ಸಿದ್ಧಲಿಂಗೇಶ್ವರ ಸ್ವಾಮೀಜಿ ಹೇಳಿದರು.

ರಾಜ್ಯ ವೀರಶೈವ ಪಂಚಮಸಾಲಿ ಸಂಘದ ವತಿಯಿಂದ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಪಂಚಮಸಾಲಿ ಜಗದ್ಗುರುಗಳ ಪೀಠಾರೋಹಣದ 4ನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

`ಸದಾನಂದ ಗೌಡರ ನಗುಮುಖದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆಯೇ ಹೊರತು, ಗಂಟು ಮುಖದಿಂದ ಅಲ್ಲ. ಸಂಘ ಯಾರ ವಿರುದ್ಧವೂ ಈ ಕಾರ್ಯಕ್ರಮವನ್ನು ಆಯೋಜಿಸಿಲ್ಲ~ ಎಂದು ಅವರು ಯಾರ ಹೆಸರನ್ನೂ ಉಲ್ಲೇಖಿಸದೇ ಕಿಡಿಕಾರಿದರು.

ರಾಜ್ಯ ವೀರಶೈವ ಪಂಚಮಸಾಲಿ ಸಂಘದ ಗೌರವ ಅಧ್ಯಕ್ಷ ಬಾವಿ ಬೆಟ್ಟಪ್ಪ ಮಾತನಾಡಿ, `ನಮ್ಮ ಏಳ್ಗೆಯನ್ನು ಸಹಿಸದೇ ಕೆಲವರು ಮುಖ್ಯಮಂತ್ರಿಗಳನ್ನು ಸಭೆಗೆ ಹೋಗಬೇಡಿ ಎಂದಿದ್ದರು. ಹೋಗಬೇಡ ಎಂದು ಕುತಂತ್ರ ಮಾಡಿದವರಿಗೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ~ ಎಂದು ಎಚ್ಚರಿಸಿದರು.

ಸಂಸದರು, ಶಾಸಕರು ಗೈರು
ಬೆಳಗಾವಿ: ರಾಜ್ಯ ವೀರಶೈವ ಪಂಚಮಸಾಲಿ ಸಂಘದ ವತಿಯಿಂದ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಂಚಮಸಾಲಿ ಜಗದ್ಗುರುಗಳ ಪೀಠಾರೋಹಣದ 4ನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಿಲ್ಲೆಯ ಸಂಸದರು, ಕೆಲವು ಶಾಸಕರು ಗೈರು ಹಾಜರಾದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರನ್ನು ಕಾರ್ಯಕ್ರಮಕ್ಕೆ ಹೋಗದಂತೆ ತಡೆದಿದ್ದರು ಎಂದು ಟೀಕೆಗಳು ಕೇಳಿ ಬಂದಿದ್ದರಿಂದ ಗೈರು ಹಾಜರಿಗೆ ಮಹತ್ವ ಬಂದಿತು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಅಭಯ ಪಾಟೀಲ, ಡಿ.ಎಂ. ಐಹೊಳೆ, ರಾಜು ಕಾಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ, ಸಂಸದರಾದ ಸುರೇಶ ಅಂಗಡಿ, ರಮೇಶ ಕತ್ತಿ, ಶಾಸಕರಾದ ಲಕ್ಷ್ಮಣ ಸವದಿ, ಜಗದೀಶ ಮೆಟಗುಡ್ಡ, ಸಂಜಯ ಪಾಟೀಲ, ಸುರೇಶ ಮಾರಿಹಾಳ, ಆನಂದ ಮಾಮನಿ, ಪ್ರಹ್ಲಾದ ರೇಮಾನಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಪಂಚಮಸಾಲಿ ಲಿಂಗಾಯತರ ಮುಖಂಡರೂ ಆದ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಗೈರು ಹಾಜರಾಗಿದ್ದರು.

ಯಡಿಯೂರಪ್ಪ ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಇರಲಿಲ್ಲ ಎಂಬುದು ಈ ಗೈರು ಹಾಜರಿಗೆ ಕಾರಣ ಎನ್ನಲಾಗಿದೆ.

ಗೊಂದಲ, ನೋವು- ಡಿವಿಎಸ್ ಕಳವಳ
ಬೆಳಗಾವಿ: `ಪಕ್ಷದಲ್ಲಿ ಗೊಂದಲ ಇದೆ. ಜೊತೆಗೆ ಕೆಲವು ಘಟನೆ ಮನಸ್ಸಿಗೆ ನೋವು ಉಂಟು  ಮಾಡಿವೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

ಗೋಕಾಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಗೊಂದಲವಿಲ್ಲದ ರಾಜಕೀಯ ಪಕ್ಷ ಎಲ್ಲಿದೆ. ಗೊಂದಲವಿಲ್ಲದಿದ್ದರೆ ರಾಜಕಾರಣವೇ ಅಲ್ಲ~ ಎಂದರು. ಗೋಕಾಕದಲ್ಲಿನ ಸಮಾರಂಭಕ್ಕೆ ಬರದಂತೆ ಸೂಚಿಸಲಾಗಿತ್ತೇ ಎಂಬ ಸುದ್ದಿಗಾರರ ಪ್ರಶ್ನೆಗೆ, `ಅಂತಹ ಯಾವುದೇ ಸೂಚನೆ ಬಂದಿರಲಿಲ್ಲ~ ಎಂದು ಅವರು ಹೇಳಿದರು.

`ಪಂಚಮಸಾಲಿ ಸಮಾಜ ಯಾವುದೇ ಪಕ್ಷದ ಸ್ವತ್ತಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಸಮುದಾಯವನ್ನು ಹಿಂದುಳಿದ ವರ್ಗದ `3ಬಿ~ಗೆ ಸೇರಿಸುವ ಮೂಲಕ ಸ್ವಲ್ಪ ಸಹಾಯ ಮಾಡಿದರೂ ಎನ್ನುವುದನ್ನು ಬಿಟ್ಟರೆ ಉಳಿದವರೆಲ್ಲ ನಿರ್ಲಕ್ಷಿಸಿದ್ದಾರೆ. ಆದರೆ ಏನನ್ನೂ ಕೇಳದ ಒಂದು ಸಮಾಜವನ್ನು `2 ಎ~ಗೆ ಸೇರಿಸಲಾಗಿದೆ. ಅದು ಯಾವ ಸಮುದಾಯ ಎಂದು ಅವರು ಹೇಳಲಿಲ್ಲವಾದರೂ ಅದು ಗಾಣಿಗ ಸಮುದಾಯ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮೊದಲು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೆ ಅವರು ಬರಲಾಗುವುದಿಲ್ಲ ಎಂದರು. ಆಗ ಪರಿಪಾಠದಂತೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಯಿತು~ ಎಂದು ಅವರು ಸಭೆಗೆ ವಿವರಿಸಿದರು.

ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ, `ಒಳ್ಳೆಯ ಮುಖ್ಯಮಂತ್ರಿ ಕಾಲ್ಗುಣದಿಂದ ಮಳೆಯಾಗುತ್ತದೆ. ಸದಾನಂದ ಗೌಡರ ಅವಧಿ ಪೂರ್ಣಗೊಳಿಸಲು ಎಲ್ಲ ಮಠಾಧೀಶರು ಶಕ್ತಿ ತುಂಬಬೇಕು ಎಂದು ಕೈಮುಗಿದು, ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ~ ಎಂದರು.

ಲಿಂಗಾಯತ ಪಂಚಮಸಾಲಿಪೀಠದ ಚರ ಪೀಠಾಧಿಪತಿ ಡಾ.ಮಹಾಂತ ಸ್ವಾಮೀಜಿ, ಕನಕಗುರು ಕಾಗಿನೆಲೆ ಪೀಠದ ನಿರಂಜನಾನಂದ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ, ಮುಗಳಖೋಡ ನವ ಕಲ್ಯಾಣಮಠದ ಶಿವಯೋಗಿ ಮುರುಘರಾಜೇಂದ್ರ ಸ್ವಾಮೀಜಿ, ಅಂಕಲಿಮಠದ ಅಡವಿ ಸಿದ್ದೇಶ್ವರ ಸ್ವಾಮೀಜಿ, ಅರಬಾವಿಮಠದ ಸಿದ್ದಲಿಂಗ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT