ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪಗೆ ಕಾಗೋಡು ಸವಾಲು

Last Updated 17 ಜನವರಿ 2011, 10:50 IST
ಅಕ್ಷರ ಗಾತ್ರ

ಶಿವಮೊಗ್ಗ: ಪಂಚಾಯ್ತಿ ಚುನಾವಣೆಯ ಒಟ್ಟಾರೆ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಸೋಲುಂಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸವಾಲು ಹಾಕಿದರು. ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಯಲ್ಲಿ ಆಯ್ಕೆಯಾದ ಪಕ್ಷದ ನೂತನ ಸದಸ್ಯರಿಗೆ ಅಭಿನಂದಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಚುನಾವಣೆ ಸ್ವಲ್ಪದರಲ್ಲಿಯೇ ಕಾಂಗ್ರೆಸ್ ಕೈತಪ್ಪಿರಬಹುದು. ಆದರೆ, ಒಟ್ಟಾರೆ ಫಲಿತಾಂಶವನ್ನು ತೆಗೆದುಕೊಂಡಾಗ ಬಿಜೆಪಿ ಸೋತಿದೆ. ಗ್ರಾಮಾಂತರ ಪ್ರದೇಶದ ಮತದಾರರು ಬಿಜೆಪಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಆದ್ದರಿಂದ, ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರು ತಾವು ಎಡವಿದ್ದೀವಿ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಿ. ಆಗ, ರಾಜಕೀಯಕ್ಕೆ ಗಾಂಭೀರ್ಯತೆ ಬರುತ್ತದೆ ಎಂದು ಆಗ್ರಹಿಸಿದರು.

ಶಾಸಕ ಬಿ.ಕೆ. ಸಂಗಮೇಶ್ವರ ಮಾತನಾಡಿ, ‘ಯಡಿಯೂರಪ್ಪ ಏನು ಹುಲಿ-ಸಿಂಹ ಅಲ್ಲ; ಒಳ್ಳೆಯ ಅಭ್ಯರ್ಥಿಯನ್ನು ನಿಲ್ಲಿಸಿದರೆ ಅವರೂ ಮುಂದಿನ ದಿನಗಳಲ್ಲಿ ಮನೆಗೆ ಬರ್ತಾರೆ. ಈ ನಿಟ್ಟಿನಲ್ಲಿ ಸಜ್ಜಾಗಬೇಕು’ ಎಂದು ಹೇಳಿದರು. ಶಾಸಕ ಕಿಮ್ಮನೆ ರತ್ನಾಕರ, ಮಾಜಿ ಶಾಸಕರಾದ ಮಹಿಮ ಪಟೇಲ್, ಕರಿಯಣ್ಣ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಎಐಸಿಸಿ ಸದಸ್ಯೆ ಬಲ್ಕಿಶ್ ಬಾನು, ಮುಖಂಡರಾದ ನಗರದ ಮಹಾದೇವಪ್ಪ, ಇಸ್ಮಾಯಿಲ್ ಖಾನ್, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಗೊಂದಲ: ತಾ.ಪಂ. ಸದಸ್ಯನಾಗಿ ಆಯ್ಕೆಯಾದರೂ ಸ್ವಾಗತ ಕೋರುವಾಗ ತಮ್ಮ ಹೆಸರನ್ನು ಕೈಬಿಡಲಾಗಿದೆ ಎಂದು ಆರೋಪಿಸಿ, ಶಿಕಾರಿಪುರ ತಾ.ಪಂ. ಸದಸ್ಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸ್ವಲ್ಪ ಗೊಂದಲ ಉಂಟಾಯಿತು.

‘ಹಣದ ಕೊರತೆ’
‘ಪಕ್ಷದಿಂದ ಅಗತ್ಯ ಹಣದ ಸಹಕಾರ ಸಿಕ್ಕಿದ್ದರೆ ನಮ್ಮ ಪಕ್ಷ ಜಿ.ಪಂ.ಯ ಚುಕ್ಕಾಣಿ ಹಿಡಿಯುತ್ತಿತ್ತು. ಆದರೆ, ಕೇಂದ್ರದಲ್ಲಿ ರಾಜ್ಯದ ನಾಲ್ವರು ಮಂತ್ರಿಗಳಿದ್ದರೂ ಹಣ ಸಹಾಯ ಮಾಡದಿದ್ದರಿಂದ ಕೈತಪ್ಪಿತು’.ಜಿ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕಡಿಮೆ ಸೀಟುಗಳು ಬಂದ ಬಗ್ಗೆ ಶಾಸಕ ಬಿ.ಕೆ. ಸಂಗಮೇಶ್ವರ ಸಮಜಾಯಿಷಿ ನೀಡಿದ ಬಗೆ ಇದು.

‘ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರನ್ನು ಎದುರಿಸಲು ಇಲ್ಲಿ ಆರ್ಥಿಕ ಸಹಕಾರ ಬೇಕು. ಅದು ಸಮರ್ಪಕವಾಗಿ ಸಿಗಲಿಲ್ಲ. ಯಾರೋ ಒಬ್ಬರಿಗೆ ಹಣ ಕೊಟ್ರು. ಆದರೆ, ಅವರು ತೆಗೆದುಕೊಂಡು ಹೋಗಿಬಿಟ್ರು. ಅವರನ್ನು ಬ್ಯಾಟರಿ ಹಾಕಿಕೊಂಡು ಹುಡುಕುವಂತಾಯಿತು. ಅವರನ್ನು ನಂಬಿದ್ರೆ, ಇನ್ನೂ ಎರಡು ಸೀಟು ಕಡಿಮೆ ಬರ್ತಿದ್ವು’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT