ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ ತಾಲ್ಲೂಕಿನ ಭೂಸ್ವಾಧೀನ ಪ್ರಕರಣ: ಎಕರೆಗೆ 10 ಲಕ್ಷ- ಸಚಿವ ನಿರಾಣಿ

Last Updated 4 ಅಕ್ಟೋಬರ್ 2012, 5:15 IST
ಅಕ್ಷರ ಗಾತ್ರ

ಕೊಪ್ಪಳ: ಯಲಬುರ್ಗಾ ತಾಲ್ಲೂಕಿನ ತಳಕಲ್ಲ, ತಳಬಾಳ, ನಿಂಗಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆ ಮಹತ್ವದ ಘಟ್ಟ ತಲುಪಿದೆ.

ಪ್ರತಿ ಎಕರೆಗೆ 10 ಲಕ್ಷ ರೂಪಾಯಿ ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಬೆಂಗಳೂರಿಗೆ ತೆರಳಿದ್ದ ರೈತರ ನಿಯೋಗಕ್ಕೆ ಈ ವಿಷಯವನ್ನು ಸ್ಪಷ್ಟಪಡಿಸುವ ಮೂಲಕ ಸಚಿವ ನಿರಾಣಿ ಅವರು ಚೆಂಡನ್ನು ರೈತರ ಅಂಗಳದತ್ತ ಹೊಡೆದಿದ್ದಾರೆ.

`ಈ ನಾಲ್ಕು ಗ್ರಾಮಗಳ ಸೀಮೆಯಲ್ಲಿರುವ ಜಮೀನಿಗೆ ಎಕರೆಗೆ ಗರಿಷ್ಠ 10 ಲಕ್ಷ ರೂಪಾಯಿ ನೀಡಲಾಗುವುದು. ಈ ದರಕ್ಕೆ ಒಪ್ಪುವುದಿದ್ದರೆ ನನ್ನ ಬಳಿ ಬನ್ನಿ. ಇಲ್ಲದಿದ್ದರೆ ಈ ವಿಷಯವನ್ನು ಇಲ್ಲಿಗೇ ಕೈ ಬಿಡೋಣ. ಮುಂದಿನ ಸರ್ಕಾರ ಬಂದಾಗ ಏನು ನಿರ್ಧಾರ ಕೈಗೊಳ್ಳುತ್ತದೆಯೋ ಕೈಗೊಳ್ಳಲಿ~ ಎಂಬುದಾಗಿ ಸಚಿವ ನಿರಾಣಿ ತಿಳಿಸಿರುವುದಾಗಿ ತಳಕಲ್ಲ ಗ್ರಾಮದ ರೈತ ಬುಡ್ಡನಗೌಡ ಪೊಲೀಸ್‌ಪಾಟೀಲ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

`ಸೆ. 16ರಂದು ಕೊಪ್ಪಳಕ್ಕೆ ಬರುತ್ತಿದ್ದೇನೆ. ಅಷ್ಟರೊಳಗಾಗಿ ಜಮೀನು ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ತಮ್ಮನ್ನು ಭೇಟಿಯಾಗುವಂತೆ~ ಸಹ ತಿಳಿಸಿದ್ದಾರೆ ಎಂದೂ ಹೇಳಿದರು.

ವಿಜಾಪುರ ಜಿಲ್ಲೆಯಲ್ಲಿ ಹೊರ ಹೊಲಕ್ಕೆ ಎಕರೆಗೆ 7 ಲಕ್ಷ ರೂಪಾಯಿ ಹಾಗೂ ನೀರಾವರಿ ಜಮೀನಿಗೆ 9 ಲಕ್ಷ ರೂಪಾಯಿಗಳನ್ನು ನಿಗದಿಪಡಿಸಿ 4 ಸಾವಿರ ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಹಾಗೆ ನೋಡಿದರೆ, ಅಲ್ಲಿನ ಜಮೀನಿಗೆ ಇಷ್ಟೂ ದರ ನಿಗದಿ ಮಾಡಿರಲಿಲ್ಲ. ನಾನೇ ಪ್ರತಿ ಎಕರೆಗೆ 2 ಲಕ್ಷ ರೂಪಾಯಿ ಹೆಚ್ಚಿಗೆ ನೀಡಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ್ದೇನೆ ಎಂದು ಸಚಿವರು ನಿಯೋಗಕ್ಕೆ ತಿಳಿಸಿದರು
.
ಹೀಗಾಗಿ ಯಲಬುರ್ಗಾ ತಾಲ್ಲೂಕಿನ ಈ ಗ್ರಾಮಗಳ ಜಮೀನಿಗೆ ಗರಿಷ್ಠ 10 ಲಕ್ಷ ರೂಪಾಯಿ ನೀಡಲು ಸಿದ್ಧರಿರುವುದಾಗಿ ಸ್ಪಷ್ಟಪಡಿಸಿದರು ಎಂದು ನಿಯೋಗದಲ್ಲಿದ್ದ ಮತ್ತೊಬ್ಬ ರೈತ ಬಾಳಪ್ಪ ರವದಿ ತಿಳಿಸಿದರು.
15ಲಕ್ಷಕ್ಕೆ ಓಕೆ: ಎಕರೆಗೆ 15 ಲಕ್ಷ ರೂಪಾಯಿ ಕೊಡುವುದಾದರೆ ಎಲ್ಲ ರೈತರು ಜಮೀನು ನೀಡಲು ಸಿದ್ಧರಿದ್ದಾರೆ ಎಂದು ಬುಡ್ಡನಗೌಡ ಪೊಲೀಸ್‌ಪಾಟೀಲ ಹೇಳಿದರು.

ಜಮೀನು ನೀಡಲು 480ಕ್ಕೂ ಹೆಚ್ಚು ರೈತರು ತಮ್ಮ ಒಪ್ಪಿಗೆ ಪತ್ರ ಸೂಚಿಸಿದ್ದಾರೆ. ಒಪ್ಪಿಗೆ ಸೂಚಿಸಿರುವ ರೈತರ ಜಮೀನು ಒಟ್ಟು 1,864 ಎಕರೆಯಾಗುತ್ತದೆ.

ಹೀಗಾಗಿ ಸಚಿವರು ನಿಗದಿಪಡಿಸಿರುವ ದರಕ್ಕೆ ಕೊಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚಿಸಲು ಶೀಘ್ರವೇ ಸಭೆಯನ್ನು ಕರೆಯಲಾಗುವುದು. ಸೆ. 16ರ ಒಳಗಾಗಿ ಒಂದು ನಿರ್ಣಯ ಕೈಗೊಂಡು ಸಚಿವರಿಗೆ ತಿಳಿಸಲಾಗುವುದು ಎಂದೂ ಸ್ಪಷ್ಟಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT