ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಯುವ ಕವಿಗಳಿಗೆ ಬೇಂದ್ರೆ ಸ್ಫೂರ್ತಿ'

Last Updated 1 ಫೆಬ್ರುವರಿ 2013, 8:45 IST
ಅಕ್ಷರ ಗಾತ್ರ

ಹಾಸನ: `ದ.ರಾ. ಬೇಂದ್ರೆ ನನ್ನ ಅಂತರಂಗಕ್ಕೆ ಇಳಿದು ನನ್ನ ಮೇಲೆ ಅಗಾಧ ಪ್ರಭಾವ ಬೀರಿದ ಕವಿ. ಇಂದಿನ ಕವಿಗಳು ಬೇಂದ್ರೆ ಕಾವ್ಯದ ಅಧ್ಯಯನ ಮಾಡಿ ಆ ಪರಂಪರೆ ಮುಂದುವರಿಸಬೇಕು' ಎಂದು ಕವಿ ಬಿ.ಆರ್. ಲಕ್ಷ್ಮಣ ರಾವ್ ನುಡಿದರು.

ವರಕವಿ ಬೇಂದ್ರೆ ಅವರ 117ನೇ ಜನ್ಮ ದಿನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳ್ಳಿಮಂಡಲ ಜಿಲ್ಲಾ ಘಟಕಗಳ ಆಶ್ರಯದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ `ಬೇಂದ್ರೆ ಕಾವ್ಯ ಗಾಯನ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ಸಮಕಾಲೀನರಾಗಿದ್ದ ಕನ್ನಡದ ಶ್ರೇಷ್ಠ ಕವಿಗಳಾದ ಬೇಂದ್ರೆ ಹಾಗೂ ಕುವೆಂಪು ಪರಸ್ಪರರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಶೂದ್ರ ಸಮುದಾಯದಿಂದ ಬಂದ ಕುವೆಂಪು ಸಂಸ್ಕೃತ ಭೂಯಿಷ್ಟ ಕಾವ್ಯ ರಚಿಸಿದರು. ಬ್ರಾಹ್ಮಣ ಸಮುದಾಯದಿಂದ ಬಂದ ಬೇಂದ್ರೆ ಮಾರ್ಗ ಶೈಲಿ ಬಿಟ್ಟು ಜಾನಪದ ಹಿಡಿದರು. ಇಬ್ಬರೂ ಆ ಕಾಲ ಒಪ್ಪಿದ್ದ ತತ್ವದ ವಿರುದ್ಧದ ಹಾದಿ ಸ್ವೀಕರಿಸಿದ್ದರು' ಎಂದು ಲಕ್ಷ್ಮಣ ರಾವ್ ನುಡಿದರು.

`ನಾನು ಸಾಹಿತ್ಯ ಕ್ಷೇತ್ರಕ್ಕೆ ಬರಲು ಬೇಂದ್ರೆ ಅವರ ಗರಿ ಹಾಗೂ ನಾದಲೀಲೆ ಕವನ ಸಂಕಲನಗಳು ಕಾರಣವಾಗಿದ್ದವು' ಎಂದು  ನೆನಪಿಸಿಕೊಂಡ ಲಕ್ಷ್ಮಣ ರಾವ್, ತಮ್ಮ  `ಸುಬ್ಬಾ ಭಟ್ಟರ ಮಗಳೆ' ಕವನವನ್ನು ಹಾಡುವ ಮೂಲಕ ಬೇಂದ್ರೆಗೆ ನಮನ ಸಲ್ಲಿಸಿದರು.

ಉಪನ್ಯಾಸಕ ರಾಜಶೀಖರ ಮಠಪತಿ `ಬೇಂದ್ರೆ ನಾನು ಕಂಡಂತೆ' ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್. ಜನಾರ್ದನ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ವಿನೋದ್ ಚಂದ್ರ, ಬೆಳ್ಳಿ ಮಂಡಲದ ಉಪಾಧ್ಯಕ್ಷ ರವಿ ನಾಕಲಗೋಡು, ಗಾಯಕಿ ಸುರೇಖಾ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಜಾವಗಲ್ ಪ್ರಸನ್ನಕುಮಾರ್ ಸ್ವಾಗತಿಸಿದರು. ಗೊರೂರು ಶಿವೇಶ್ ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಬೇಂದ್ರೆ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಬಳಿಕ ಪ್ರಸಿದ್ಧ ಗಾಯಕರು ಬೇಂದ್ರೆ ಅವರ ಭಾವಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT