ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನತೆ ರಾಜಕೀಯ ಪ್ರವೇಶಿಸಲಿ: ಪ್ರಿಯಾಂಕ

Last Updated 3 ಫೆಬ್ರುವರಿ 2011, 6:30 IST
ಅಕ್ಷರ ಗಾತ್ರ

ರಾಯಚೂರು: ಪ್ರಜಾಪ್ರಭುತ್ವ ಯಶಸ್ಸಿಗೆ ಯುವಕರ ಸಹಭಾಗಿತ್ವ ಅವಶ್ಯ. ರಾಜಕೀಯದಿಂದಲೇ ಯುವ ಸಮೂಹ ದೂರ ಸರಿಯುತ್ತಿರುವ ಈ ದಿನಗಳಲ್ಲಿ ರಾಷ್ಟ್ರ ಏಳ್ಗೆ ಬಗ್ಗೆ ಚಿಂತನೆ ಹೊಂದಿರುವ ಪ್ರಾಮಾಣಿಕರು ರಾಜಕೀಯದಲ್ಲಿ ಅವಕಾಶಗಳು ದೊರಕಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಯುವ ಕಾಂಗ್ರೆಸ್ ಸೂಚನೆ ಮೇರೆಗೆ ಇದೇ 4ರಂದು ನಗರದಲ್ಲಿ ಬೃಹತ್ ಯುವ ಕಾಂಗ್ರೆಸ್ ಸಮಾವೇಶ ನಡೆಸಲಾಗುತ್ತಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಖರ್ಗೆ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದಾದ್ಯಂತ ಈ ರೀತಿ ಬೃಹತ್ ಯುವ ಕಾಂಗ್ರೆಸ್ ಸಮಾವೇಶ ನಡೆಯುತ್ತಿದೆ. ಈ ಸಮಾವೇಶದ ಮೂಲಕ ಯುವ ಕಾಂಗ್ರೆಸ್ ಬೂತ್ ಮಟ್ಟದಿಂದ ಎಲ್ಲ ಹಂತದವರೆಗೂ ಪಕ್ಷದ ಆಂತರಿಕ ಚುನಾವಣೆ ನಡೆಸುತ್ತಿದೆ. ಯುವಕರು, ಮಹಿಳೆಯರು, ವಿವಿಧ ವರ್ಗ, ಪಂಗಡಕ್ಕೆ ಅದರದ್ದೇ ಮೀಸಲಾತಿ ಇದೆ. ಸಾಮಾಜಿಕ ನ್ಯಾಯದಡಿ ಈ ಆಂತರಿಕ ಚುನಾವಣೆ ಪ್ರಕ್ರಿಯೆ ನಡೆಯುತ್ತದೆ. ಇಂಥ ಆಂತರಿಕ ಚುನಾವಣೆ ನಡೆಸುವುದರಿಂದ ಪಕ್ಷದಲ್ಲಿಯೇ ಗುಂಪುಗಾರಿಕೆಗೆ ಅವಕಾಶವಾಗುತ್ತದೆ ಎಂಬ ಪ್ರಶ್ನೆ ಎದ್ದಿತ್ತು. ಆದರೆ, ಹೊಸ ವಿಚಾರದ ಈ ಪ್ರಯತ್ನದ ಜಾರಿ ಪ್ರಕ್ರಿಯೆ ನಡೆಸಲು ಅಂತಿಮವಾಗಿ ನಿರ್ಧರಿಸಲಾಯಿತು ಎಂದು ವಿವರಿಸಿದರು.ಇದು ರಾಹುಲ್ ಗಾಂಧಿ ಅವರ ಕನಸಿನ ಯುವ ಸಮಾವೇಶ. 125 ವರ್ಷದಲ್ಲಿ ಇದೇ ಪ್ರಪ್ರಥಮ ಬಾರಿಗೆ ಯುವ ಕಾಂಗ್ರೆಸ್ ಈ ರೀತಿ ಸಮಾವೇಶ ಆಯೋಜಿಸುತ್ತಿದೆ ಎಂದು ತಿಳಿಸಿದರು.

ಕಪ್ಪು ಹಣ ವಾಪಸ್ ತರಲಿ: ಕಪ್ಪು ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣದ ವಿಚಾರ ರಾಷ್ಟ್ರ ವ್ಯಾಪಿ, ಪಕ್ಷದ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಕಪ್ಪು ಹಣ ಸ್ವಿಸ್ ಬ್ಯಾಂಕ್‌ನಲ್ಲೇ ಇರಲಿ, ಮಂಡ್ಯದಲ್ಲಿಯೇ ಇರಲಿ ಅಥವಾ ಬಳ್ಳಾರಿಯಲ್ಲೇ ಇರಲಿ. ಒಟ್ಟಿನ ಆ ಹಣ ವಾಪಸ್ ತರಲಿ ಎಂಬುದು ತಮ್ಮದೂ ಒತ್ತಾಯವಿದೆ ಎಂದು ಹೇಳಿದರು.
ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತಂದು ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ  ಅವಕಾಶ ನೀಡಬೇಕು ಎಂಬುದು ನಮ್ಮದೂ ಬೇಡಿಕೆ. ಹಿಂದೆ ಪಕ್ಷವು ಈ ಬಗ್ಗೆ ಒತ್ತಾಯ ಮಾಡಿದೆ ಎಂದರು.

ಈ ಭಾಗದ ಶೈಕ್ಷಣಿಕ ಮತ್ತು ಕೈಗಾರಿಕೆ ಕ್ಷೇತ್ರ ಅಭಿವೃದ್ಧಿ, ನಿರುದ್ಯೋಗ ಹೋಗಲಾಡಿಸುವ ನಿಟ್ಟಿನಲ್ಲಿ ಪಕ್ಷ ಗಮನ ಹರಿಸಲಿದೆ. ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಯಸುವ ಆಸಕ್ತ ಈ ಭಾಗದ ಅಭ್ಯರ್ಥಿಗಳಿಗೆ ಅಧ್ಯಯನಕ್ಕೆ ಅನುಕೂಲ ಕಲ್ಪಿಸಲು ಗುಲ್ಬರ್ಗದಲ್ಲಿ ವಿನೂತನ ಗ್ರಂಥಾಲಯವನ್ನು ಪಕ್ಷ ತೆರೆಯುವ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಅಮರೇಗೌಡ ಹಂಚಿನಾಳ, ಪಕ್ಷದ ಮುಖಂಡ ಬಿ.ವಿ ನಾಯಕ, ರುದ್ರಪ್ಪ ಅಂಗಡಿ, ಅಬ್ದುಲ್ ಕರೀಮ್, ರವೀಂದ್ರ ಜಾಲ್ದಾರ. ಜಿಪಂ ಸದಸ್ಯ ಅಸ್ಲಂ ಪಾಷಾ, ಪ್ರವೀಣ ಹಾಗೂ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT