ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರೊ ಚಾಂಪಿಯನ್ ಯಾರು?

Last Updated 10 ಜೂನ್ 2012, 19:30 IST
ಅಕ್ಷರ ಗಾತ್ರ

ಕ್ರೀಡಾ ಜಗತ್ತು ಲಂಡನ್ ಒಲಿಂಪಿಕ್ಸ್‌ನ ಗುಂಗಿನಲ್ಲಿ ಮುಳುಗಿರುವ ಸಂದರ್ಭದಲ್ಲೇ `ಯೂರೊ 2012~ ಫುಟ್‌ಬಾಲ್ ಟೂರ್ನಿ ಆರಂಭವಾಗಿದೆ. ಆದ್ದರಿಂದ ಕ್ರೀಡಾ ಪ್ರೇಮಿಗಳು ತಮ್ಮ ಚಿತ್ತವನ್ನು ಲಂಡನ್‌ನಿಂದ ಪೋಲೆಂಡ್ ಮತ್ತು ಉಕ್ರೇನ್‌ನತ್ತ ಹರಿಸುವುದು ಅನಿವಾರ್ಯ. ಇಲ್ಲಿನ ಎಂಟು ಕ್ರೀಡಾಂಗಣಗಳ ಹಸಿರುಹಾಸಿನಲ್ಲಿ ಕಾಲ್ಚೆಂಡಾಟದ ಹಬ್ಬ ನಡೆಯುತ್ತಿದೆ. 

ಚಾಂಪಿಯನ್ಸ್ ಲೀಗ್ ಒಳಗೊಂಡಂತೆ ವಿವಿಧ ಲೀಗ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕ್ರಿಸ್ಟಿಯಾನೊ ರೊನಾಲ್ಡೊ, ಅರ್ಜೆನ್ ರಾಬೆನ್, ಥಾಮಸ್  ಮುಲ್ಲರ್, ಮೆಸೂಟ್ ಒಜಿಲ್, ಇಕರ್ ಕ್ಯಾಸಿಲ್ಲಾಸ್, ಸೆಸ್ ಫ್ಯಾಬ್ರಿಗಸ್ ಮತ್ತು ಜ್ಲಾಟನ್ ಇಬ್ರಾಹಿಮೋವಿಚ್ ಅವರಂತಹ ತಾರೆಯರು ಇದೀಗ ತಮ್ಮ ರಾಷ್ಟ್ರೀಯ ತಂಡದ ಸಮವಸ್ತ್ರ ಧರಿಸಿ ಯಾವ ರೀತಿಯ ಪ್ರದರ್ಶನ ನೀಡುವರು ಎಂಬ ಕುತೂಹಲ ಅಭಿಮಾನಿಗಳದ್ದು.

`ಯೂರೊ 2012~ರಲ್ಲಿ ಯೂರೋಪಿನ 16 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿವೆ. ಈ ತಂಡಗಳು ಒಂದಕ್ಕಿಂತ ಒಂದು ಬಲಿಷ್ಠವಾಗಿವೆ. ಆದ್ದರಿಂದ ಸ್ಪಷ್ಟ `ಫೇವರಿಟ್~ ಎಂಬ ಹಣೆಪಟ್ಟಿಯನ್ನು ಯಾವ ತಂಡಕ್ಕೂ ನೀಡಲು ಸಾಧ್ಯವಿಲ್ಲ. ಆದರೂ ವಿಶ್ವಚಾಂಪಿಯನ್ ಮತ್ತು ಹಾಲಿ ಚಾಂಪಿಯನ್ ಎಂಬ ಗೌರವ ಹೊಂದಿರುವ ಸ್ಪೇನ್ ತಂಡದ ಮೇಲೆ ಹೆಚ್ಚಿನವರು `ಬೆಟ್~ ಕಟ್ಟಿದ್ದಾರೆ.

ಯೂರೊ ಟೂರ್ನಿಯ ಇತಿಹಾಸದಲ್ಲಿ (1960ರಲ್ಲಿ ಆರಂಭ) ಯಾವುದೇ ತಂಡ ಸತತ ಎರಡು ಸಲ ಚಾಂಪಿಯನ್ ಆಗಿಲ್ಲ. ಈ ಬಾರಿ ಸ್ಪೇನ್ ಅಂತಹ ಸಾಧನೆ ಮಾಡುವ ಉತ್ಸಾಹದಲ್ಲಿದೆ. 2008 ರಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ಸ್ಪೇನ್, 2010ರ ವಿಶ್ವಕಪ್ ಟೂರ್ನಿಯನ್ನೂ ಜಯಿಸಿತ್ತು. ಸ್ಟಾರ್ ಆಟಗಾರರಾದ ಡೇವಿಡ್ ವಿಲ್ಲಾ ಮತ್ತು ಕಾರ್ಲೊಸ್ ಪುಯೋಲ್ ಅನುಪಸ್ಥಿತಿ ತಂಡವನ್ನು ಕಾಡಬಹುದು.

ಆದರೆ ಕ್ಸೇವಿ ಹೆರ್ನಾಂಡೆಸ್, ಆ್ಯಂಡ್ರೆಸ್ ಇನೀಸ್ತಾ, ಸೆರ್ಜಿಯೊ ರಾಮೋಸ್ ಮತ್ತು ವಿಶ್ವವಿಖ್ಯಾತ ಗೋಲ್‌ಕೀಪರ್ ಇಕರ್ ಕ್ಯಾಸಿಲ್ಲಾಸ್ ತಂಡಕ್ಕೆ ಬಲ ನೀಡಲಿದ್ದಾರೆ. `ಸಿ~ ಗುಂಪಿನಲ್ಲಿ ಸ್ಪೇನ್ ತಂಡದ ಜೊತೆ ಇಟಲಿ, ಕ್ರೊವೇಷಿಯ ಮತ್ತು ಐರ್ಲೆಂಡ್ ತಂಡಗಳಿವೆ. ಆದ್ದರಿಂದ ಸ್ಪೇನ್‌ಗೆ ಕ್ವಾರ್ಟರ್ ಫೈನಲ್ ಪ್ರವೇಶಿಸುವುದು ಕಷ್ಟವಾಗದು. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಎಂಟರಘಟ್ಟ ಪ್ರವೇಶಿಸಲಿವೆ.

ಈ ಬಾರಿಯ ಟೂರ್ನಿಯಲ್ಲಿ `ಗ್ರೂಪ್ ಆಫ್ ಡೆತ್~ ಹಣೆಪಟ್ಟಿ `ಬಿ~ ಗುಂಪಿಗೆ ಲಭಿಸಿದ್ದು, ಜಿದ್ದಾಜಿದ್ದಿನ ಸೆಣಸಾಟ ನಿರೀಕ್ಷಿಸಲಾಗಿದೆ. ಜರ್ಮನಿ, ಹಾಲೆಂಡ್, ಪೋರ್ಚುಗಲ್ ಮತ್ತು ಡೆನ್ಮಾರ್ಕ್ ತಂಡಗಳು ಇದರಲ್ಲಿವೆ. ಇವೆಲ್ಲ ತಂಡಗಳೂ ಫಿಫಾ ರ‌್ಯಾಂಕಿಂಗ್‌ನಲ್ಲಿ ಅಗ್ರ 10 ರಲ್ಲಿ ಕಾಣಿಸಿಕೊಂಡಿವೆ. ಜರ್ಮನಿ ಎರಡನೇ ಸ್ಥಾನದಲ್ಲಿದ್ದರೆ, ಹಾಲೆಂಡ್ ಹಾಗೂ ಪೋರ್ಚುಗಲ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ. ಪೋರ್ಚುಗಲ್‌ನ್ನು ಹೊರತುಪಡಿಸಿದರೆ ಇತರ ಮೂರೂ ತಂಡಗಳು ಈ ಹಿಂದೆ ಚಾಂಪಿಯನ್ ಆಗಿವೆ.

ಇಂಗ್ಲೆಂಡ್ ಮತ್ತು ಫ್ರಾನ್ಸ್ `ಡಿ~ ಗುಂಪಿನಲ್ಲಿವೆ. ಆತಿಥೇಯ ಪೋಲೆಂಡ್, ಗ್ರೀಸ್, ರಷ್ಯಾ ಮತ್ತು ಜೆಕ್ ರಿಪಬ್ಲಿಕ್ ತಂಡಗಳನ್ನೊಳಗೊಂಡ `ಎ~ ಗುಂಪು ಅತ್ಯಂತ `ದುರ್ಬಲ~ ಎನಿಸಿದೆ. ಗ್ರೀಸ್ 2004 ರಲ್ಲಿ ಚಾಂಪಿಯನ್ ಆಗಿತ್ತಾದರೂ, ಈಗ ತನ್ನ ಬಲ ಕಳೆದುಕೊಂಡಿದೆ. ಪೋಲೆಂಡ್ ಮತ್ತು ಉಕ್ರೇನ್ ಆತಿಥೇಯರು ಎಂಬ ಕಾರಣದಿಂದ ಈ ಟೂರ್ನಿಯಲ್ಲಿ ಆಡುತ್ತಿವೆ.

ಗ್ರೀಸ್ 2004 ರಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಟ್ರೋಫಿ ಜಯಿಸಿದಂತೆ, ಈ ಬಾರಿಯೂ ಹೊಸ ಚಾಂಪಿಯನ್ ತಂಡ ಉದಯಿಸಿದರೆ ಅಚ್ಚರಿಯಿಲ್ಲ. 16 ತಂಡಗಳಲ್ಲಿ ಎಂಟು ತಂಡಗಳು ಈ ಹಿಂದೆ ಚಾಂಪಿಯನ್ ಆಗಿವೆ. ಉಳಿದ ಎಂಟು ತಂಡಗಳಲ್ಲಿ ಬಲಿಷ್ಠವಾಗಿ ಕಾಣಿಸುತ್ತಿರುವುದು ಇಂಗ್ಲೆಂಡ್ ಮತ್ತು ಪೋರ್ಚುಗಲ್ ಮಾತ್ರ. ಪ್ರಮುಖ ಆಟಗಾರರು ಗಾಯಗೊಂಡಿರುವುದು ಇಂಗ್ಲೆಂಡ್‌ಗೆ ಹಿನ್ನಡೆ ಉಂಟುಮಾಡಿದೆಯಾದರೆ, ಪೋರ್ಚುಗಲ್‌ನ ಭವಿಷ್ಯ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಾಲುಗಳಲ್ಲಿ ಅಡಗಿದೆ.

`ಯೂರೊ ಕಪ್ ಎಂಬುದು ಬ್ರೆಜಿಲ್ ಮತ್ತು ಅರ್ಜೆಂಟೀನಾ ತಂಡಗಳ ಅನುಪಸ್ಥಿತಿಯಲ್ಲಿ ನಡೆಯುವ ವಿಶ್ವಕಪ್~ ಎಂದು ಬ್ರೆಜಿಲ್‌ನ ಪತ್ರಿಕೆಯೊಂದು ಹೇಳಿದೆ. ಇದನ್ನು ಒಪ್ಪುವುದು ಕಷ್ಟ. ಏಕೆಂದರೆ ವಿಶ್ವಕಪ್‌ನಲ್ಲಿ ಲ್ಯಾಟಿನ್ ಅಮೆರಿಕದ ತಂಡಗಳ ಜೊತೆ ಏಷ್ಯಾ ಮತ್ತು ಆಫ್ರಿಕಾ ಖಂಡದ ದೇಶಗಳೂ ಉತ್ತಮ ಪ್ರದರ್ಶನ ನೀಡಿವೆ. ಯೂರೊ ಟೂರ್ನಿಯನ್ನು ಒಂದು ರೀತಿಯಲ್ಲಿ `ಮಿನಿ ವಿಶ್ವಕಪ್~ ಎನ್ನಬಹುದು. ಯೂರೋಪಿಯನ್ ಫುಟ್‌ಬಾಲ್‌ನ ಸೌಂದರ್ಯ ಅದರ ನೈಜ ರೂಪದಲ್ಲಿ ಅನಾವರಣಗೊಳ್ಳಲು ಈ ಟೂರ್ನಿ ಅತ್ಯುತ್ತಮ ವೇದಿಕೆ ಎನಿಸಿಕೊಂಡಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT