ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಬ್ರೇಕಿಂಗ್ ನ್ಯೂಸ್!

Published 9 ಮೇ 2024, 23:51 IST
Last Updated 9 ಮೇ 2024, 23:51 IST
ಅಕ್ಷರ ಗಾತ್ರ

ಪೆನ್‌ಡ್ರೈವ್ ನ್ಯೂಸ್ ಬೆನ್ನುಹತ್ತಿ ಬಿಸಿಲಲ್ಲಿ ಗರಗರ ತಿರುಗಿ ತಲೆತಿರುಗಿ ಬಿದ್ದಿದ್ದ ಟಿ.ವಿ. ರಿಪೋಟ್ರು ತೆಪರೇಸಿಯನ್ನು ಯಾರೋ ಆಸ್ಪತ್ರೆಗೆ ಸೇರಿಸಿದ್ದರು. ತೆಪರೇಸಿ ಹೆಂಡ್ತಿ ಪಮ್ಮಿ ಮತ್ತು ಹರಟೆಕಟ್ಟೆ ಸದಸ್ಯರು ಆಸ್ಪತ್ರೆಗೆ ಧಾವಿಸುವಷ್ಟರಲ್ಲಿ ಡಾಕ್ಟರು ತೆಪರೇಸಿಯ ತಲೆ, ಕಿಡ್ನಿ, ಲಿವರು, ಬೋಟಿ ಎಲ್ಲ ಸ್ಕ್ಯಾನ್ ಮಾಡ್ಸಿ ರಿಪೋರ್ಟ್‌ಗೆ ಕಾಯ್ತಾ ಕೂತಿದ್ದರು.

‘ಡಾಕ್ಟ್ರೆ, ನಮ್ ತೆಪರೇಸಿ ಹೆಂಗದಾನೆ, ಏನಾಗಿಲ್ಲ ತಾನೆ?’ ಗುಡ್ಡೆ ವಿಚಾರಿಸಿದ. ಪಮ್ಮಿ ಮುಖದಲ್ಲಿ ಆತಂಕ.

ಡಾಕ್ಟರು ಕನ್ನಡಕ ತೆಗೆದಿಡುತ್ತ ‘ನಿಮ್ ಪೇಶಂಟ್‌ನ ಪೊಲೀಸರಿಗೆ
ಒಪ್ಪಿಸಬೇಕಂತಿದೀನಿ, ಆದ್ರೆ ಇನ್ನೂ ಎಚ್ಚರ ಬಂದಿಲ್ಲ’ ಎಂದರು ಗಂಭೀರವಾಗಿ.

‘ಯಾಕ್ಸಾ, ಅವನೇನ್ ಮಾಡಿದ?’

‘ಅಲ್ರೀ, ಅವರ ತೆಲಿ ಸ್ಕ್ಯಾನ್ ಮಾಡಿದ್ರೆ ಒಳಗೆ ಬರೀ ಪೆನ್‌ಡ್ರೈವೇ ಕಾಣ್ತಾವಲ್ರೀ... ಜೊತೆಗೆ ಬ್ಲೂಕಾರ್ನರು, ಬ್ಲ್ಯಾಕ್‌ಮೇಲು, ಸೂತ್ರಧಾರ ಅಂತೆಲ್ಲ ಬಡಬಡಾಯಿಸ್ತಿದ್ರು. ರಾಜ್ಯದಲ್ಲಿ ಈಗ ನಡೀತಿರೋ ಪೆನ್‌ಡ್ರೈವ್ ಪ್ರಕರಣಕ್ಕೂ ಇವರಿಗೂ ಏನೋ ಸಂಬಂಧ ಇರ್ಬೇಕು ಅನ್ಸುತ್ತೆ’ ಎಂದರು ಡಾಕ್ಟರು.

‘ಅಯ್ಯೋ ಸಂಬಂಧ ಏನಿಲ್ಲ ಸಾ, ಅವ್ನು ಬ್ರೇಕಿಂಗ್ ನ್ಯೂಸ್ ಟಿ.ವಿ. ರಿಪೋಟ್ರು. ಪೆನ್‌ಡ್ರೈವ್ ಕೇಸ್‌ನ ದಿನಾ ಅವ್ನೇ ವರದಿ ಮಾಡೋದು. ಅದ್ನೆಲ್ಲ ಕೇಳಿ ಕೇಳಿ ತೆಲಿ ಕೆಟ್ಟು ಹಂಗೆ ಬಡಬಡಾಯಿಸಿರ್ಬೇಕು’ ದುಬ್ಬೀರ ಸಮಜಾಯಿಷಿ ನೀಡಿದ.

‘ಹೌದು ಸಾ... ರಾತ್ರಿ ಎಲ್ಲ ನಿದ್ದೇಲಿ ಅರೆಸ್ಟು, ಕಸ್ಟಡಿ, ಜೇಲಾ ಬೇಲಾ ಅಂತಿರ್ತಾರೆ’ ಪಮ್ಮಿಯೂ ದನಿಗೂಡಿಸಿದಳು.

ಅಷ್ಟರಲ್ಲಿ ನರ್ಸ್ ಬಂದು ‘ಡಾಕ್ಟ್ರೆ, ಪೇಶಂಟ್‌ಗೆ ಎಚ್ಚರ ಬಂದಿದೆ’ ಎಂದಳು. ಎಲ್ಲರೂ ವಾರ್ಡ್‌ಗೆ ಹೋದರು. ಡಾಕ್ಟರು ತೆಪರೇಸಿಯ ಭುಜ ಮುಟ್ಟಿ ‘ಏನ್ರಿ ತೆಪರೇಸಿ, ಈಗ ಹೇಗಿದೆ?’ ಎಂದು ಮಾತಾಡಿಸಿದರು.

ತೆಪರೇಸಿ ಮೆಲ್ಲಗೆ ಕಣ್ಣು ಬಿಡುತ್ತ ‘ನಿಮ್ದೂ ಎಲ್ಲ ಬಿಚ್ಚಿಡ್ತೀನಿ’ ಎಂದ. ಡಾಕ್ಟರಿಗೆ ಗಾಬರಿಯಾದರೆ, ದುಬ್ಬೀರ, ಗುಡ್ಡೆ ಒಳಗೇ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT